ದೃಶ್ಯಕ್ಕೊಂದು ನುಡಿಗಟ್ಟು

ಅಲೆ ಮೂಡದೆ ನಿಂತ ಸಾಗರ

godhibannaಸುಮಾರು ೩ ತಿಂಗಳ ಗದ್ದಲ ೩-೪ ವಾರಗಳಲ್ಲಿ ಒಂದು ರೀತಿಯ ವಿರಾಮದೆಡೆಗೆ ಬಂದು ನಿಂತಂತಿದೆ . ನಿರೀಕ್ಷೆಯ ಚಿತ್ರಗಳೆಲ್ಲ ಒಂದರ ಹಿಂದೊಂದರಂತೆ ಪೈಪೋಟಿಗೆ ಬಿದ್ದವರಂತೆ ಥಿಯೇಟರಿಗೆ ಬಂದವು . ತಿಥಿ , ಯು ಟರ್ನ್ , ಗೋಧಿ ಬಣ್ಣ.. ಈ ಮೂರೂ ವಿಭಿನ್ನ ನೆಲೆಯವು . ಮೂರು ತನ್ನದೇ ಆದ ಪ್ರಾಮುಖ್ಯತೆ ಉಳಿಸಿಕೊಂಡು ಪ್ರದರ್ಶನ ಕಾಣುತ್ತಿವೆ . ಜಗ್ಗಿರುವ ದಾದಗಳೆಲ್ಲ ಅದೇ ಚಕ್ರವ್ಯೂಹದಲ್ಲಿ ಗಿರಕಿ ಹೊಡೆದುಕೊಂಡಿರುವಾಗ ಈ ಮುಖ್ಯ ಸ್ತರದ ಪ್ಯಾರಲೆಲ್ ಸಿನೆಮಾಗಳು ಮಾರುಕಟ್ಟೆಯ ಮತ್ತು ಪ್ರೇಕ್ಷಕನ ಮೇಲೆ ಬೀರಿದ ಪ್ರಭಾವ ಚಿತ್ರ ರಂಗದ ಮುನ್ನೋಟದಲ್ಲಿ ಒಳ್ಳೆಯದು ಎನ್ನುವುದರಲ್ಲಿ ಎರಡು ಮಾತಿಲ್ಲ .

 

ತಿಥಿ ಬಗ್ಗೆ ಸಾಕಷ್ಟು ಲೇಖನಗಳು ಬಂದಿದ್ದವು . ಆಂಗ್ಲ ಪತ್ರಿಕೆಗಳಿಂದ ಹಿಡಿದು ಪ್ರಜಾವಾಣಿಯ ಪುರವಣಿ ಮುಕ್ತ ಚಂದದ ತನಕ ಎಲ್ಲರೂ ತಿಥಿಯ ಒಳ ಹೊರಗನ್ನು ಜಾಲಾಡಿದ್ದರು . ಯು ಟರ್ನ್ ಬಗ್ಗೆ ಬರೆಯಲು ಏನೂ ಇರಲಿಲ್ಲ ಏಕೆಂದರೆ ಚಿತ್ರದಲ್ಲಿ ಕೂಡ ಏನೂ ಇರಲಿಲ್ಲ . ನನ್ನ ಅಜ್ಜಿ ಹೇಳಿದ ದೆವ್ವದ ಕಥೆ ಅದಕ್ಕಿಂತ ಚೆನ್ನಿತ್ತು . ಈಗ ಗೋಧಿ ಬಣ್ಣ !

 

ಗೋಧಿ ಬಣ್ಣದಲ್ಲಿ ಏನ್ ಚೆನ್ನಾಗಿದೆ , ಏನ್ ಚೆನ್ನಾಗಿಲ್ಲ ಅಂತ ಕೇಳೋ ಚಾಳಿಗೆ ಉತ್ತರದಂತೆ ಹೇಳುವುದಾರದೆ ಚೆನ್ನಿರುವುದು ಮೊದಲಾರ್ಧದ ಅನಂತ ನಾಗ್ ಹೊರತರುವ ವೆಂಕಾಬ್ ರಾವ್ , ಚೆನ್ನಾಗಿಲ್ಲದ್ದು ಕತೆಗಾರ ಮರೆತಿರುವ ಈ ತರದ ಕಥನ ಬೇಡುವ ಸಾವಧಾನ.

 

ನಗರ ಜೀವನ ಕ್ರಮದಲ್ಲಿ ತೆಳುವಾಗುತ್ತಾ ಕಳೆದು ಹೋಗುತ್ತಿರುವ ಮನುಷ್ಯ ಸಂಬಂಧಗಳನ್ನು ಮೂಲ ವಸ್ತುವಾಗಿಟ್ಟುಕೊಂಡ ಚಿತ್ರದ ನಿರ್ದೇಶಕನಿಗೆ ತಾನು ಏನು ಹೇಳುತ್ತಿದ್ದೇನೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇದ್ದರೂ ಅದಕ್ಕೆ ಆಯ್ದುಕೊಂಡ ಮಾರ್ಗಗಳ ಬಗ್ಗೆ ಸ್ಪಷ್ಟತೆ ಇದ್ದಂತಿಲ್ಲ . ಹಾಗಾಗಿ ಚಿತ್ರ ಮನುಷ್ಯ ಸಂಬಂಧ , ಅಲ್ಜ಼ಮಿರ್ ಖಾಯಿಲೆ , ಪ್ರೇಮ ಮತ್ತು ಅಪರಾಧ ಜಗತ್ತಿನ ವಿಚಿತ್ರ ಮಿಶ್ರಣದೊಂದಿಗೆ ಸಾಗುವ ಕಥೆ ಎಲ್ಲೂ ಕೂಡ ಆಳಕ್ಕಿಳಿಯದೆ , ಒಂದರ ಹಿಂದೊಂದರಂತೆ ಬರುವ ದೃಶ್ಯಗಳಿಂದ ಪ್ರೇಕ್ಷಕನ ಕಣ್ಕಟ್ಟಿಸಿ ಮುಕ್ತಾಯವಾಗುತ್ತದೆ . ಕಥನ ಕ್ರಮವೂ ಕೂಡ ಈ ನಾಲ್ಕು ವಿಷಯಗಳಲ್ಲಿ ಯಾವೊಂದನ್ನೂ ಕೂಡ ಗಹನವಾಗಿ ಚರ್ಚಿಸದೆ ಒಂದರಿಂದ ಇನ್ನೊಂದಕ್ಕೆ ನಿರಂತರವಾಗಿ ಜಿಗಿಯುತ್ತಾ ಯಾವುದನ್ನೂ ಪ್ರೇಕ್ಷಕನಿಗೆ ಅನುಭವವನ್ನ ದಾಟಿಸದೆ ಸೋಲುತ್ತದೆ .

ಮುಂದೆ ಓದಿ >>

ರೀಮೇಕ್, ರೌಡಿಸಂ ಚಿತ್ರಗಳ ಕಪ್ಪುಬಿಳುಪಿನ ನಡುವೆ "ರಂಗಿತರಂಗ"

Rangi tarangaಅನುಪ್ ಭಂಡಾರಿ ನಿರ್ದೇಶನದ ರಂಗಿತರಂಗ ಚಿತ್ರವು ನಿಗೂಢ ಸಾವಿನಿಂದ ಪ್ರಾರಂಭವಾಗಿ, ಊಟಿಯಲ್ಲಿರುವ ಅಜ್ಞಾತ ಲೇಖಕನ ಶೋಧನೆಗೆ ಹೊರಟ ಸ್ವಘೋಷಿತ ಪತ್ರಕರ್ತೆಯ ಕಡೆ ಸಾಗಿ "ಮತ್ತೊಂದು ಪ್ರೇಮ ಕಥೆಯಾ?" ಎಂದು ಯೋಚಿಸುತ್ತಿರುವಾಗಲೆ ಕಥೆಯ ದಿಕ್ಕು ಬದಲಾಗಿ ದಕ್ಷಿಣ ಕರ್ನಾಟಕದತ್ತ ಸಾಗುತ್ತದೆ. ಅಯ್ಯೋ, "ಇದು ಇನ್ನೊಂದು ಹಾರರ್ ಸಿನಿಮಾನಾ?" ಅಂತ ಊಹಿಸುವಾಗ ನಿಮ್ಮ ದಿಕ್ಕು ಮತ್ತೆ ತಪ್ಪಿಸುವ ಕೆಲಸ ಮಾಡುತ್ತದೆ. ಆ ಲೇಖಕನ ಗರ್ಭಿಣಿ ಹೆಂಡತಿಯ ಕಾಡುವ ಕನಸುಗಳ ಹೋಗಲಾಡಿಸಿ, ಭೂತ ಪೂಜೆ ಮಾಡಿಸಲು, ತನ್ನ ತವರಾದ "ಕಮರೊಟ್ಟು" ಗ್ರಾಮಕ್ಕೆ ಬರುವರು. ಗ್ರಾಮ್ಯ ಕಥೆಗಳಲ್ಲಿ ಸಾಮಾನ್ಯವಾಗಿ ಗ್ರಾಮಗಳಲ್ಲಿ ಕಾಣಿಸುವ ಪಾತ್ರಗಳಾದ ಪೋಸ್ಟ್ ಮಾಸ್ಟರ್, ಇನ್ಸ್ಪೆಕ್ಟರ್ , ಸ್ಕೂಲ್ ಟೀಚರ್ ಇತ್ಯಾದಿಗಳ ನಡುವೆ ಎಡವುತ್ತಾ, ಸಿಲುಕುತ್ತಾ ಈ ದಂಪತಿಗಳ ಗತಿ ಏನಾಗುತ್ತೆ? ಅನ್ನೋದು ಮಿಕ್ಕ ಕಥೆ.

ಮುಂದೆ ಓದಿ >>

ವಾಸ್ತು ಪ್ರಕಾರ ಬರೆದ ಹತ್ತು ಸಾಲಿನ ವಿಮರ್ಶೆ

ನಿರ್ಮಾಪಕರ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಈ ಚಿತ್ರ ಮಾಡಿದ್ದಾರೆ ಎಂಬ ಗುಮಾನಿ ತರವಲ್ಲ, ಏಕೆಂದರೆ, ಯೋಗರಾಜ ಭಟ್ಟರು ಈ ಚಿತ್ರದ ನಿರ್ಮಾಪಕ.

ಐಷಾನಿ ಶೆಟ್ಟಿ ಓಡಿಸುವ ಸೈಕಲ್ ಬಿಟ್ಟು ಇನ್ಯಾವುದಕ್ಕೂ ಪಾತ್ರ ಪೋಷಣೆ ಆಗಿಲ್ಲಾ. ಬೀಳುತ್ತಿರುವ ಗೋಡೆಗಳ ಮಧ್ಯೆ ಅನಂತ್ ನಾಗ್ ಮತ್ತು Rakshit Shetty ಆಧಾರ ಸ್ತಂಭಗಳು.

ಸಂಭಾಷಣೆ ರೇಷ್ಮೆ ಸಾಕಾಣಿಕೆಯ ಕಾರ್ಯಕ್ರಮದಷ್ಟೇ ರಸವತ್ತಾಗಿ ಸಾಗುವುದು.

ನವರಸ ನಾಯಕ ತಮ್ಮ airport baggage ಬದಲು ತಮ್ಮ ನಟನೆಯನ್ನು ಎಲ್ಲೋ ಕಳೆದು ಕೊಂಡಿದ್ದಾರೆ

Parul Yadav 'ಗೆ ಅದು ಯಾವ ಸೀಮೆ ಕನ್ನಡ ಮಾತಾಡಿಸಿದ್ದಾರೋ ನಾ ಕಾಣೆ. ಇದರಿಂದ ರಮ್ಯ ಮತ್ತು ಮೈಸೂರಿನ ಜಟಕ ಸಾಬಿ ಇಬ್ಬರಿಗೂ ಸಿಟ್ಟು ಬರುವುದು ಖಚಿತ.

ಶೂಟಿಂಗನ್ನು, Switzerlandಲ್ಲಿ ಯಾಕೆ ಮಾಡಿದ್ದಾರೆ ಎನ್ನುವ ಬಗ್ಗೆ CBI ತನಿಖೆ ಮಾಡಬೇಕಾಗಿದೆ.....

" ಬೇಸರ, ಕಾಟಾಚಾರದ ಸಿನಿಮಾ ಇದು ನೋಡು .... ಸಂಗೀತವೆ ಈ ಸಿನಿಮಾದ ಮಾನ ಉಳಿಸೋದು" (ಚಿತ್ರದ ಒಂದು ಸುಂದರ ಹಾಡನ್ನು ಸ್ವಲ್ಪ ಮಾರ್ಪಾಡು ಮಾಡಿದ್ದೇನೆ)

ಅಮ್ಮನನ್ನು ಸಿನಿಮಾಗೆ ಕರೆದು ಕೊಂಡು ಹೋದ ಕಾರಣ ಅಮ್ಮ ನೋಡುವ ಟಿ.ವಿ ಧಾರಾವಾಹಿ ಟೀಕಿಸುವ ನೈತಿಕ ಹಕ್ಕನ್ನು ಕಳೆದು ಕೊಂಡ ದುಖಃ ಕಾಡುತ್ತಿದೆ.

ಯೋಗರಾಜ ಭಟ್ಟರು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಚಿತ್ರಕ್ಕೆ ನಿರ್ಮಾಪಕರು ಸಿಗುವುದು ಕಷ್ಟವಾಗದು, ಕನ್ನಡ ಸಾಹಿತ್ಯ, ಕವಿತೆಗಳನ್ನು ಬಲ್ಲವರು. ಇವುಗಳನ್ನು ಆಧಾರಿಸಿ ಸಿನಿಮಾ ಮಾಡುವುದು ಒಳ್ಳೆಯದು .

ಇವೆಲ್ಲಾ ಟಿಪ್ಪಣಿಗಳು ಯೋಗರಾಜ ಭಟ್ಟರ ಕಟ್ಟಾ ಅಭಿಮಾನಿಯದು, ಅವರು ಮಾಡುವ ಎಲ್ಲಾ ಸಿನಿಮಾಗಳನ್ನು ಅವರು ಸಿನಿಮಾ ಮಾಡುವವರೆಗೂ ನೋಡುವುದಕ್ಕೆ ಸಾಧ್ಯವಾದಷ್ಟು ಪ್ರಯತ್ನ ಮಾಡುವೆ

ಮುಂದೆ ಓದಿ >>

ಮಾಗದ ಮೈತ್ರಿ

 'ಕನ್ನಡದ ಕೋಟ್ಯಾಧಿಪತಿ'ಯಂತಹ (ಅನ್ಯ ಭಾಷೆಯ ಇಂತಹ ಕಾರ್ಯಕ್ರಮಗಳೂ ಸೇರಿದಂತೆ) ರಿಯಾಲಿಟಿ ಕಾರ್ಯಕ್ರಮಗಳ ಬಗ್ಗೆ ಇದ್ದಕ್ಕಿದ್ದ ಹಾಗೆ ಜನರಲ್ಲಿ ಕುತೂಹಲ-ಅರಾಧ್ಯ ಭಾವನೆ ಬೆಳದದ್ದೇಕೆ? ಇನ್ನೂ ಅತ್ಯುತ್ತಮವಾಗಿದ್ದ-ಕ್ಲಿಷ್ಟಕರವಾಗಿದ್ದ ಕ್ವಿಜ್ ಕಾರ್ಯಕ್ರಮಗಳು ಕಾಣೆಯಾದದ್ದೇಕೆ? ಇದಕ್ಕೂ ಹಾಗು ಸಮಾಜದಲ್ಲಿ ಒಟ್ಟಾರೆ ಸಾಹಿತ್ಯ-ಕಲೆ-ಸಂಗೀತ-ಸಿನೆಮಾ ಕ್ಷೇತ್ರಗಳಲ್ಲಿನ ನಿಜಮೌಲ್ಯದ ಕುಸಿತಕ್ಕೂ ಏನಾದರೂ ಸಂಬಂಧವಿದೆಯೆ? ಕ್ವಿಜ್-ಮಾಹಿತಿ ಸಂಗ್ರಹದ ಬಗ್ಗೆ ಅಷ್ಟೇನೂ ಪ್ಯಾಶನ್ ಇರದ ವ್ಯಕ್ತಿ ನಡೆಸಿ ಕೊಡುವ, ಸಾಮಾನ್ಯವಾಗಿ ಅತಿ ಸರಳವಾದ ಪ್ರಶ್ನೆಗಳನ್ನು ಹೊಂದಿರುವ, ಅತಿ ದೊಡ್ಡ ಬಹುಮಾನದ ಆಮಿಶ ಒಡ್ಡುವ, ಕಳಪೆ ಎನ್ನಬಹುದಾದ ಮನರಂಜನೆಯ ಇಂತಹ ರಿಯಾಲಿಟಿ ಕಾರ್ಯಕ್ರಮಗಳನ್ನು ಇಂದು ಸಮಾಜ ಸಂಭ್ರಮಿಸುತ್ತಿದೆ ಎಂದರೆ ಕಲೆ-ಸಾಹಿತ್ಯ-ಸಿನೆಮಾ-ಸಂಗೀತ ಇವುಗಳ ಚೌಕಟ್ಟಿನ ಸಂಸ್ಕೃತಿಯಲ್ಲಿ ಬೌದ್ಧಿಕ ಕುಸಿತ ಉಂಟಾಗಿರುವುದಕ್ಕಲ್ಲವೇ? ಮಾರುಕಟ್ಟೆ ಇರುವುದೇ ಬೌದ್ಧಿಕ ಕುಸಿತದಲ್ಲಿ ಅಲ್ಲವೆ? ಇಂಗ್ಲಿಶ್ ಪದಗುಚ್ಚ ಬಳಸಿ ಹೇಳುವುದಾದರೆ ಇದನ್ನು 'ಡಂಬಿಂಗ್ ಡೌನ್' ಎನ್ನಬಹುದೇನೋ!


ಮಾರುಕಟ್ಟೆ ಒಂದು ಕಡೆ ಬೌದ್ಧಿಕ ಕುಸಿತಕ್ಕೆ ಜನರನ್ನು ಪುಸಲಾಯಿಸುವುದರ ಜೊತೆ ಜೊತೆಗೆ ಸಮಾಜದ ಸಮಸ್ಯೆಗಳನ್ನು ಸಿಂಪತಿಯಿಂದ ನೋಡುವುದನ್ನು ಕೂಡ ಕಲಿಸಿಕೊಡುತ್ತದೆ ಆದರೆ ಸಮಸ್ಯೆಯ ಆಳಕ್ಕೆ ಇಳಿದು ಚಿಂತಿಸುವುದನ್ನು ಕಲಿಸುವುದಿಲ್ಲ. ಇಂದಿನ ತಲೆಮಾರಿನ ಕ್ಲಾಸಿಕ್ ತೊಂದರೆ ಕೂಡ ಇದೆ. ಯಾವ ಐಡಿಯಾಲಜಿಗಳಿಂದ(ಒಳ್ಳೆಯ ಚಿಂತನೆ-ಕಾರ್ಯರೂಪ) ವಿಮುಖರಾಗುತ್ತಿದ್ದೇವೆ ಎಂಬುದರ ಬಗ್ಗೆ ತಮಗೆ ಅರಿವಾಗುತ್ತದೋ ಅಥವಾ ಸಮಾಜದ ಸಮಸ್ಯೆಗಳನ್ನು ಸರಿಪಡಿಸಲು ತಮಗೆ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕೂತಿರುತ್ತಾರೊ ಅಂತಹ ಸಮಸ್ಯೆಗಳನ್ನು ಅಥವಾ ಅದಕ್ಕೆ ಪರಿಹಾರಗಳನ್ನು ಕಥೆಯಲ್ಲೋ-ಸಿನೆಮಾದಲ್ಲೋ-ಟಿವಿ ಶೋಗಳಲ್ಲೋ 'ಅತಿ ಸರಳ'ವಾಗಿ ಪ್ರಸ್ತುತಪಡಿಸಿದಾಕ್ಷಣ ಅದರ ಮೆರಿಟ್ ಬಗ್ಗೆ ಕಿಂಚಿತ್ತೂ ಚಿಂತಿಸದೆ ಬಹುಪರಾಗ್ ಹೇಳಲು ಮುಂದಾಗಿಬಿಡುತ್ತಾರೆ. 'ಸತ್ಯಮೇವ ಜಯತೆ' ಎಂಬ ಕಾರ್ಯಕ್ರಮ ಇದಕ್ಕೆ ಒಳ್ಳೆಯ ಉದಾಹರಣೆ. ಇದು ಕೂಡ 'ಡಂಬಿಗ್ ಡೌನ್'ನ ಭಾಗವೇ!

ಮುಂದೆ ಓದಿ >>

ಮೈತ್ರಿ : ಪರ್ಯಾಯ ಅಧಿಕಾರ ಕೇಂದ್ರದ ವಿಜೃಂಭಣೆ

Mythri Review'ಮೈತ್ರಿ' ಚಿತ್ರದ ವಿಮರ್ಶೆಗೆ ತೊಡಗುವ ಮುನ್ನ ನಮ್ಮ ಮುಖ್ಯವಾಹಿನಿಯಲ್ಲಿ ಸಿನಿಮಾವೊಂದರ ಕುರಿತು ನಡೆಯುವ ಚರ್ಚೆಯ ಕುತೂಹಲಕರವಾದ ಮಗ್ಗುಲು ನಿಮ್ಮ ಗಮನದಲ್ಲಿರಲಿ. ಒಂದು ಚಿತ್ರದ ಟ್ರೇಲರ್, ಪೋಸ್ಟರ್ , ಹಾಡು,ಬಿಡುಗಡೆಗೆ ಮುನ್ನವೇ ಮಾಧ್ಯಮಗಳಲ್ಲಿ ಕೇಳಿ ಬರುವ ಕಥಾ ಹಂದರದ "ಸ್ಕೂಪ್"ಗಳಿಂದ ಆ ಚಿತ್ರ ಇತರ ಭಾಷೆಯ ಇನ್ನ್ಯಾವ ಚಿತ್ರದ ರಿಮೇಕ್, ಇಲ್ಲವೇ ಯಾವ ಚಿತ್ರದಿಂದ ಕದ್ದಿರುವಂಥದ್ದು ಎಂದು ಪತ್ತೇದಾರಿ ನಡೆಸುವುದು ಪತ್ರಕರ್ತರಾದಿಯಾಗಿ ಹಲವರ ಹವ್ಯಾಸ. ಚಿತ್ರವೊಂದನ್ನು ಅದರ ಬಿಡುಗಡೆಗೆ ಮುನ್ನ, ಬಿಡುಗಡೆಯ ನಂತರ ಈ ಬಗೆಯ ಅನುಮಾನದಿಂದ ಎದುರುಗುಳ್ಳುವುದು, ಚಿತ್ರದ ನಿರ್ದೇಶಕನನ್ನು ಕಳ್ಳನೆಂಬಂತೆ ಕಾಣುವುದು ನಮ್ಮ ಸಾಂಸ್ಕೃತಿಕ ವಲಯದ ಅನಾರೋಗ್ಯಕರ ಸ್ಥಿತಿಯನ್ನು ತೋರುತ್ತದೆ.

ಇದಕ್ಕೆ  ಚಿತ್ರ ನಿರ್ದೇಶಕ, ನಿರ್ಮಾಪಕರ ಅಪ್ರಾಮಾಣಿಕತೆ ಎಷ್ಟು ಕಾರಣವೋ ಪ್ರೇಕ್ಷಕರು, ಪತ್ರಕರ್ತರ ಅವಾಸ್ತವಿಕ ನಿರೀಕ್ಷೆಯೂ ಅಷ್ಟೇ ಕಾರಣ. ಪ್ರೇಕ್ಷಕರು, ಸಿನಿಮಾ ಪತ್ರಕರ್ತರು ತಿಳಿಯಬೇಕಾದ ಬಹುಮುಖ್ಯ ಸಂಗತಿಯೆಂದರೆ ಕ್ರಿಯಾತ್ಮಕ ಅಭಿವ್ಯಕ್ತಿ ಬಹುವೇಳೆ ಇತರೆ ಅನೇಕ ಕ್ರಿಯಾತ್ಮಕ ಕೃತಿಗಳ ನೆರಳಿನಲ್ಲೇ ಅರಳುತ್ತದೆ. ನೆಲದ ಮೇಲೆ ಕಾಣುವ ಹಸಿರು ಗಿಡದ ಕಾಂಡ ನೆಲದೊಳಗೆ ಅಸಂಖ್ಯಾತ ಬೇರುಗಳನ್ನು ಬಿಟ್ಟಿರುತ್ತದೆ. ಕ್ರಿಯಾತ್ಮಕ ಕೃತಿಯೂ ಸಹ ತಾನು ಕಣ್ಣು ಬಿಡುವ ಪರಿಸರದಲ್ಲಿನ ಅಸಂಖ್ಯಾತ ಮೂಲಗಳಿಂದ ಸ್ಪೂರ್ತಿ ಪಡೆಯಬೇಕು. ಪ್ರೇರಣೆ, ಸ್ಪೂರ್ತಿಗಳಿದ್ದ ಮಾತ್ರಕ್ಕೆ ಚಿತ್ರವೊಂದರಲ್ಲಿ ತೊಡಗಿಕೊಂಡ ಕ್ರಿಯಾತ್ಮಕ ಮನಸ್ಸು ಭ್ರಷ್ಟವಾಗುವುದಿಲ್ಲ. ಸ್ಪೂರ್ತಿಗೂ, ಅನುಕರಣೆಗೂ , ನಿರ್ಲಜ್ಜ ಕೃತಿಚೌರ್ಯಕ್ಕೂ ನಡುವಿನ ಗೆರೆ ನಿಚ್ಚಳವಾಗಿರುತ್ತದೆ. ಅದನ್ನು ಗುರುತಿಸುವ ಕೆಲಸವಾದರೆ 'ಗಾಳಿ ಪಟ' ಚಿತ್ರದ ಹಂದಿ ಬೇಟೆ ಕುರಿತು ಕಿವಿಗೆ ಬಿದ್ದೊಡನೆ ಆ ಚಿತ್ರಕ್ಕೆ ಯಾವ ಕೋನದಿಂದಲೂ ಸಂಬಂಧಪಡದ ಹಾಲಿವುಡ್ಡಿನ 'ಅಪೋ ಕ್ಯಾಲಿಪ್ಸೋ' ನೆನಪಾಗುವುದಿಲ್ಲ; 'ದೇವರ ನಾಡಿನಲ್ಲಿ' ಶೀರ್ಷಿಕೆ ಓದಿದೊಡನೆ 'ಸಿಟಿ ಆಫ್ ಗಾಡ್' ಎಂಬ ಪೂರ್ಚುಗೀಸ್ ಚಿತ್ರ ಕಣ್ಣೆದುರು ಬರುವುದಿಲ್ಲ. ಒಂದೊಮ್ಮೆ ಸಾಮ್ಯತೆಗಳು ಗೋಚರವಾದರೂ ಅದರಿಂದ ನಮ್ಮೆದುರು ಇರುವ ಕೃತಿಯ ಕ್ರಿಯಾತ್ಮಕ ಮೌಲ್ಯ ಕುಂಠಿತವಾಗುವುದಿಲ್ಲ.

ಮುಂದೆ ಓದಿ >>

ಬೆಂಕಿಪಟ್ಣ - ದೃಶ್ಯವಾಗದ ಒಂದು ಸದಾಶಯ

Benkipatna movie reviewಇಂದು ನಗರ ಉಸಿರಾಡಲು ಕಷ್ಟಪಡುತ್ತಿದೆ , ಹಳ್ಳಿ ನಡೆದಾಡಲು ತ್ರಾಣವಿಲ್ಲದೆ ಕಷ್ಟಪಡುತ್ತಿದೆ . ಅನ್ನ ನೀಡುವಾತ ಆತ್ಮಹತ್ಯೆ ಮಾಡಿಕೊಳ್ಳುತಿದ್ದಾನೆ . ಎಲ್ಲರಿಗೂ ಈಗ ಉಳಿಯಲು ಇರುವ ದಾರಿ ಒಂದೇ - ಇಲ್ಲಿ ಸಮಾನತೆಯ ಕನಸನ್ನು ಬೇಕಾಗಿದೆ . ಬಡವ ಬಲ್ಲಿದರ ನಡುವಿನ ಅಂತರ ಕಮ್ಮಿ ಇರಬೇಕು ಎಂಬ ಆಸೆಗೆ ಮತ್ತೆ ನೀರೆರೆಯಬೇಕಾಗಿದೆ . ವಿಕೇಂದ್ರೀಕರಣ, ಎಲ್ಲರಿಗೂ ಉದ್ಯೋಗ , ಸ್ವಾವಲಂಬನೆ ಎಂಬ ಹುದುಗಿ ಹೋಗಿರುವ ಹಳೇ ಮಾತುಗಳನ್ನು ಮತ್ತೆ ಮತ್ತೆ ಹೇಳಬೇಕಾಗಿದೆ "  ( ಎದೆಗೆ ಬಿದ್ದ ಅಕ್ಷರ - ಸಮಾನತೆಯ ಕನಸು ಕಾಣುತ್ತಾ ) .

ಎದೆಗೆ ಬಿದ್ದ ಅಕ್ಷರದಲ್ಲಿ ದೇವನೂರು ಹೇಳುವ ಈ ಮಾತುಗಳು ಬೆಂಕಿಪಟ್ಣ ಚಿತ್ರದ ಆಶಯವನ್ನು ಹೇಳುತ್ತದೆ .  ಬೆಂಕಿಪಟ್ಣ ಕೇಳಿಸದ ಕೂಗೊಂದಕ್ಕೆ ಧನಿಯಾಗಲು ಹೊರಟ ಸಿನೆಮಾವಾದರೂ ಅನನುಭವಿ ನಿರ್ದೇಶಕನೊಬ್ಬ  ತಾನು ಕಂಡಿರುವ , ತನ್ನನ್ನು ಕಾಡಿರುವ  ಗಂಭೀರ ವಿಚಾರಗಳನ್ನು ದೃಶ್ಯಕ್ಕೆ ಇಳಿಸಲಾಗದೆ ಸೋತಿರುವುದಕ್ಕೆ ಸ್ಪಷ್ಟ ನಿದರ್ಶನ.

ಬೆಂಕಿಪಟ್ಣ ಚಿತ್ರದ ನಿರ್ದೇಶಕ ಟಿ.ಕೆ.ದಯಾನಂದ್. ದಯಾ ಬರೆಯುವ ಕಥೆಗಳಂತೆ ಬೆಂಕಿಪಟ್ಣದಲ್ಲಿಯೂ ನಗರ ಕಂಡಿರದ ಹೊಸ ಲೋಕವೊಂದಿದೆ .  ಗ್ರಾಮ್ಯಜೀವನದ ಸೂಕ್ಷ , ಸಂಬಂಧಗಳ ಆಳ , ಜಾಗತೀಕರಣಕ್ಕೆ ಸಿಕ್ಕು ತನ್ನ ಮೂಲ ಚಹರೆಗಳಿಂದ ದೂರ ಸರಿಯುತ್ತಿರುವ ಹಳ್ಳಿಗಳ ಧನಿಯನ್ನು ,  ಕಾರ್ಮಿಕ ವರ್ಗದ ಬವಣೆ , ಬದುಕಿನ ತಳಮಳ ,ಸಹಜ ನ್ಯಾಯ ವಂಚಿತ ಸಮಾಜದ ಕೂಗು , ಪೌರ ಕಾರ್ಮಿಕರ ದೂರು ದುಮ್ಮಾನಗಳನ್ನು  ಹೇಳುವ ಪ್ರಯತ್ನ ಚಿತ್ರದಲ್ಲಿ ಕಾಣುತ್ತದೆ . ಆದರೆ ಹಾಳೆಯಲ್ಲಿರುವುದೆಲ್ಲ ದೃಶ್ಯವಾಗಿಲ್ಲ .

ಮುಂದೆ ಓದಿ >>

ಇನ್ನಷ್ಟು ಲೇಖನಗಳು