ದೃಶ್ಯಕ್ಕೊಂದು ನುಡಿಗಟ್ಟು

ಅಲೆ ಮೂಡದೆ ನಿಂತ ಸಾಗರ

godhibannaಸುಮಾರು ೩ ತಿಂಗಳ ಗದ್ದಲ ೩-೪ ವಾರಗಳಲ್ಲಿ ಒಂದು ರೀತಿಯ ವಿರಾಮದೆಡೆಗೆ ಬಂದು ನಿಂತಂತಿದೆ . ನಿರೀಕ್ಷೆಯ ಚಿತ್ರಗಳೆಲ್ಲ ಒಂದರ ಹಿಂದೊಂದರಂತೆ ಪೈಪೋಟಿಗೆ ಬಿದ್ದವರಂತೆ ಥಿಯೇಟರಿಗೆ ಬಂದವು . ತಿಥಿ , ಯು ಟರ್ನ್ , ಗೋಧಿ ಬಣ್ಣ.. ಈ ಮೂರೂ ವಿಭಿನ್ನ ನೆಲೆಯವು . ಮೂರು ತನ್ನದೇ ಆದ ಪ್ರಾಮುಖ್ಯತೆ ಉಳಿಸಿಕೊಂಡು ಪ್ರದರ್ಶನ ಕಾಣುತ್ತಿವೆ . ಜಗ್ಗಿರುವ ದಾದಗಳೆಲ್ಲ ಅದೇ ಚಕ್ರವ್ಯೂಹದಲ್ಲಿ ಗಿರಕಿ ಹೊಡೆದುಕೊಂಡಿರುವಾಗ ಈ ಮುಖ್ಯ ಸ್ತರದ ಪ್ಯಾರಲೆಲ್ ಸಿನೆಮಾಗಳು ಮಾರುಕಟ್ಟೆಯ ಮತ್ತು ಪ್ರೇಕ್ಷಕನ ಮೇಲೆ ಬೀರಿದ ಪ್ರಭಾವ ಚಿತ್ರ ರಂಗದ ಮುನ್ನೋಟದಲ್ಲಿ ಒಳ್ಳೆಯದು ಎನ್ನುವುದರಲ್ಲಿ ಎರಡು ಮಾತಿಲ್ಲ .

 

ತಿಥಿ ಬಗ್ಗೆ ಸಾಕಷ್ಟು ಲೇಖನಗಳು ಬಂದಿದ್ದವು . ಆಂಗ್ಲ ಪತ್ರಿಕೆಗಳಿಂದ ಹಿಡಿದು ಪ್ರಜಾವಾಣಿಯ ಪುರವಣಿ ಮುಕ್ತ ಚಂದದ ತನಕ ಎಲ್ಲರೂ ತಿಥಿಯ ಒಳ ಹೊರಗನ್ನು ಜಾಲಾಡಿದ್ದರು . ಯು ಟರ್ನ್ ಬಗ್ಗೆ ಬರೆಯಲು ಏನೂ ಇರಲಿಲ್ಲ ಏಕೆಂದರೆ ಚಿತ್ರದಲ್ಲಿ ಕೂಡ ಏನೂ ಇರಲಿಲ್ಲ . ನನ್ನ ಅಜ್ಜಿ ಹೇಳಿದ ದೆವ್ವದ ಕಥೆ ಅದಕ್ಕಿಂತ ಚೆನ್ನಿತ್ತು . ಈಗ ಗೋಧಿ ಬಣ್ಣ !

 

ಗೋಧಿ ಬಣ್ಣದಲ್ಲಿ ಏನ್ ಚೆನ್ನಾಗಿದೆ , ಏನ್ ಚೆನ್ನಾಗಿಲ್ಲ ಅಂತ ಕೇಳೋ ಚಾಳಿಗೆ ಉತ್ತರದಂತೆ ಹೇಳುವುದಾರದೆ ಚೆನ್ನಿರುವುದು ಮೊದಲಾರ್ಧದ ಅನಂತ ನಾಗ್ ಹೊರತರುವ ವೆಂಕಾಬ್ ರಾವ್ , ಚೆನ್ನಾಗಿಲ್ಲದ್ದು ಕತೆಗಾರ ಮರೆತಿರುವ ಈ ತರದ ಕಥನ ಬೇಡುವ ಸಾವಧಾನ.

 

ನಗರ ಜೀವನ ಕ್ರಮದಲ್ಲಿ ತೆಳುವಾಗುತ್ತಾ ಕಳೆದು ಹೋಗುತ್ತಿರುವ ಮನುಷ್ಯ ಸಂಬಂಧಗಳನ್ನು ಮೂಲ ವಸ್ತುವಾಗಿಟ್ಟುಕೊಂಡ ಚಿತ್ರದ ನಿರ್ದೇಶಕನಿಗೆ ತಾನು ಏನು ಹೇಳುತ್ತಿದ್ದೇನೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇದ್ದರೂ ಅದಕ್ಕೆ ಆಯ್ದುಕೊಂಡ ಮಾರ್ಗಗಳ ಬಗ್ಗೆ ಸ್ಪಷ್ಟತೆ ಇದ್ದಂತಿಲ್ಲ . ಹಾಗಾಗಿ ಚಿತ್ರ ಮನುಷ್ಯ ಸಂಬಂಧ , ಅಲ್ಜ಼ಮಿರ್ ಖಾಯಿಲೆ , ಪ್ರೇಮ ಮತ್ತು ಅಪರಾಧ ಜಗತ್ತಿನ ವಿಚಿತ್ರ ಮಿಶ್ರಣದೊಂದಿಗೆ ಸಾಗುವ ಕಥೆ ಎಲ್ಲೂ ಕೂಡ ಆಳಕ್ಕಿಳಿಯದೆ , ಒಂದರ ಹಿಂದೊಂದರಂತೆ ಬರುವ ದೃಶ್ಯಗಳಿಂದ ಪ್ರೇಕ್ಷಕನ ಕಣ್ಕಟ್ಟಿಸಿ ಮುಕ್ತಾಯವಾಗುತ್ತದೆ . ಕಥನ ಕ್ರಮವೂ ಕೂಡ ಈ ನಾಲ್ಕು ವಿಷಯಗಳಲ್ಲಿ ಯಾವೊಂದನ್ನೂ ಕೂಡ ಗಹನವಾಗಿ ಚರ್ಚಿಸದೆ ಒಂದರಿಂದ ಇನ್ನೊಂದಕ್ಕೆ ನಿರಂತರವಾಗಿ ಜಿಗಿಯುತ್ತಾ ಯಾವುದನ್ನೂ ಪ್ರೇಕ್ಷಕನಿಗೆ ಅನುಭವವನ್ನ ದಾಟಿಸದೆ ಸೋಲುತ್ತದೆ .

 

ಅಪ್ಪ ಮಗನ ಸಂಬಂಧವನ್ನು ಮೊದಲಿಗೆ ಪ್ರತಿಷ್ಟಾಪಿಸುವ ದೃಶವನ್ನೇ ನೋಡಿ . ಶುರುವಾಗುವುದೇ ಸೂಪರ್ ಮಾರ್ಕೆಟ್ ನ ದೃಶ್ಯದಿಂದ . ಜನ ನಿಬಿಡವಾಗಿರುವ ಅಂತಹ ಸ್ಥಳಗಳಲ್ಲಿ ತಂದೆ ಮಗನ ನಡುವಿನ ಸಂಬಂಧವನ್ನು ಪ್ರೇಕ್ಷಕನಲ್ಲಿ ದಾಖಲಿಸುವುದು ಕಷ್ಟದ ಕೆಲಸ . ಅದರ ಮೇಲಾಗಿ ಪಾತ್ರಗಳೂ ಎಲ್ಲೂ ಕುಳಿತು ಮಾತಿಗಿಳಿಯುವ ವ್ಯವಧಾನವನ್ನೇ ತೋರುವುದಿಲ್ಲ . ಎಲ್ಲವೂ ನಿರಂತರ ಚಲನೆಯಲ್ಲೇ . ಈ ಚಲನೆಯಲ್ಲೇ ಕಥೆ ಕಟ್ಟುವ ಕ್ರಮ ಮುಂದೆ ಚಿತ್ರದ ಕೊನೆವರೆಗೂ ಹಾಗೆಯೇ ಇದೆ . ರಕ್ಷಿತ್ ಮತ್ತು ಶ್ರುತಿ ಪಾತ್ರಗಳನ್ನೇ ನೋಡಿ . ನಾಯಕನ ಮದ್ಯಪಾನದ ದೃಶ್ಯವೊಂದನ್ನು ಬಿಟ್ಟರೆ ಆ ಎರಡು ಪಾತ್ರಗಳೂ ನಿರಂತರ ಚಲನಶೀಲವಾಗಿಯೇ ಇವೆ . ಇಂತಹ ಒಂದರ ಮೇಲೊಂದರಂತೆ ದೃಶ್ಯಗಳು ಎರಗಿ ಬರುವ ಸಂಕಲನ ಕ್ರಮದಲ್ಲಿ ಸಂಬಂಧಗಳನ್ನು ಪ್ರತಿಷ್ಟಾಪಿಸ ಹೊರಡುವುದೇ ಅರ್ಥಹೀನ . ಉಳಿದವರು ಕಂಡಂತೆ ಹೊರತು ಪಡಿಸಿ ಲೂಸಿಯಾದಿಂದ ಪ್ರಾರಂಭಗೊಂಡು ಗೋಧಿ ಬಣ್ಣದ ವರೆಗಿನ ಬಹುತೇಕ ಸಂವೇದನಾಶೀಲ ಎನಿಸಿಕೊಂಡ ಚಿತ್ರಗಳ ಬಹುಮುಖ್ಯ ತೊಂದರೆ ಇರುವದೇ ಇಲ್ಲಿ . ಎಲ್ಲಾ ಕಥೆಗಾರನಿಗೆ ಕಥನ ಕ್ರಮಕ್ಕೆ ಬೇಕಾದ ನಿಧಾನತೆಯನ್ನು ಗುರುತಿಸಲು ಸಾಧ್ಯವಾಗಲೇ ಇಲ್ಲ . ಎಲ್ಲೆಲ್ಲೂ ತಂತ್ರಗಳೇ ಮಂತ್ರ . ವೇಗದ ಸಂಕಲನ ಕಥೆಯನ್ನಷ್ಟೇ ಪ್ರೇಕ್ಷಕನಿಗೆ ದಾಟಿಸುತ್ತದೆ ವಿನಾ ಕಥೆಯ ಸೂಕ್ಷತೆಯನ್ನು , ಕಥೆಯೊಳಗಿನ ರಾಜಕೀಯವನ್ನು ಪ್ರೇಕ್ಷಕನಿಗೆ ಮನದಟ್ಟು ಮಾಡುವುದಿಲ್ಲ . ಯಾಕೆಂದರೆ ನಿರ್ದೇಶಕ ಅಷ್ಟು ಸಮಯಾವಕಾಶವನ್ನು ಕಥನ ಕ್ರಮದಲ್ಲಿ ಬೆರೆಸುವುದೇ ಇಲ್ಲ . ಹಾಗಾಗಿ ಚಿತ್ರದ ಹೂರಣ ನಿರ್ಜೀವವಾಗಿದೆ . ಇಲ್ಲಿನವುಗಳಿಗೆ ವಿರುದ್ದ ನೆಲೆಯಲ್ಲಿ ಇದೆ ಕಾಲಘಟ್ಟದ ಜನಮನ್ನಣೆ ಕೂಡ ಗಳಿಸಿದ ಮರಾತಿಯ ಕೋರ್ಟ್ , ಹಿಂದಿಯ ಮಸಾನ್ ಜೀವಂತಿಕೆಯನ್ನು ಉಸಿರಾಡುವುದು . ಒಂದು ಅನುಭವವಾಗಿಯೂ ಗೆಲ್ಲುವುದು .

 

ಕತೆಗಾರ ವೆಂಕಾಬ್ ರಾವ್ ಕಳೆದು ಹೋದ ಮೇಲೆ ಆ ಪಾತ್ರ ಏನೆಲ್ಲ ಮಾಡುತ್ತಿದೆ ಮತ್ತು ಇತರ ಪಾತ್ರಗಳು ಅವರ ಹುಡುಕಾಟಕ್ಕೆ ಮಾಡುವ ಪ್ರಯತ್ನಕ್ಕೆ ಕೊಟ್ಟ ಪ್ರಾಮುಖ್ಯತೆಯನ್ನು ಕಳೆದುಕೊಂಡವರ ತಲ್ಲಣಗಳನ್ನು ದಾಖಲಿಸುವುದಕ್ಕೆ ಕೊಡುವುದಿಲ್ಲ . ಆ ಪ್ರಯತ್ನದಂತೆ ಕಾಣುವ ೩ ದೃಶ್ಯಗಳು ಮೊದಲನೆಯದ್ದು ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ಸಂದರ್ಭ , ಎರಡನೆಯದ್ದು ಮನೆಯಲ್ಲಿ ಹಸ್ತ ಮುದ್ರೆಗಳು ದಾಖಲಾಗಿರುವ ದೃಶ್ಯ ಮೂರನೆಯದಾಗಿ ಮನೆಯೊಳಗೆ ಬಂದು ಚಿಲಕ ಹಾಕೊಂಡವನಿಗೆ ರಸ್ತೆಯ ಇನ್ನೊಂದು ಭಾಗದಿಂದ ತಂದೆ ಕರೆಯುತ್ತಿರುವಂತೆ ಭಾಸವಾಗುತ್ತಿರುವುದು . ಈ ಮೂರು ದೃಶ್ಯಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿವೆ ಎಂದು ಕೇಳಿದರೆ ಪಾಪ್ ಕಾರ್ನ್ ತಿನ್ನುತ್ತಾ ನೋಡಬಲ್ಲಷ್ಟು . ಕತೆಗಾರ (ನಿರ್ದೇಶಕ) ತನ್ನ ಅನುಭವಕ್ಕೆ ಬಂದದ್ದನ್ನು ಮತ್ತು ದೀರ್ಘ ಕಾಲ ತನ್ನನ್ನು ಕಾಡಿದ್ದನ್ನು ತನ್ನ ಕಥನದೊಳಕ್ಕೆ ಬೆರೆಸುತ್ತಾ ಹೋಗುತ್ತಾನೆ . ಹಾಗೆ ಕಥೆ ಬೆಳೆಯುತ್ತಾ ಬೆಳೆಯುತ್ತಾ ಅದಕ್ಕೊಂದು ಆಕಾರದ ಜೊತೆಗೆ ಆತ್ಮವೂ ಹುಟ್ಟುತ್ತದೆ . ಒಂದು ಕಥನವೂ ಹಾಗೆ ಮಥಿಸಿ ಉದಿಸಬೇಕೆ ಹೊರತು ಯು ಟರ್ನ್ ಚಿತ್ರದಂತೆ ಪ್ರೇಕ್ಷಕನನ್ನು ಗೊಂದಲಗೊಳಿಸಲೆಂದೇ ಇಟ್ಟ ಚದುರಂಗದ ನಡೆಗಳಂತೆ ಅಲ್ಲ . ನಿರ್ದೇಶಕ ಜಗತ್ತನ್ನು ನೋಡುವ ವಿಧಾನ ನಮ್ಮಗಳಗಿಂತ ಸಹಜವಾಗಿಯೇ ಭಿನ್ನ . ಹಾಗಾಗಿ ಅವನ ಅನುಭವ ನಮ್ಮ ಅನುಭವವೇ ಆಗಬೇಕೆಂದಿಲ್ಲ . ಆದರೆ ಆ ಸಿನಿಮ ಸಿನೆಮಾ ನೋಡುವ ವೀಕ್ಷಕನಿಗೆ ನಿರ್ದೇಶಕ ತನ್ನ ಅನುಭವವನ್ನು ಪ್ರೇಕ್ಷಕನ ಅನುಭವವಾಗಿ ದಾಟಿಸದಿದ್ದರೆ . ತನಗಾದ ತಲ್ಲಣಗಳನ್ನು ಪ್ರೇಕ್ಷಕನೂ ತಲ್ಲಣಗೊಳ್ಳುವಂತೆ ಹೇಳದಿದ್ದರೆ ಚಿತ್ರ ಸೋಲುತ್ತದೆ . ಗೋಧಿ ಬಣ್ಣದಲ್ಲಿ ಆಗಿರುವುದು ಇದೆ .

 

ಶಿವು ಮತ್ತು ಸಹನಾ ( ರಕ್ಷಿತ್ ಮತ್ತು ಶ್ರುತಿ ) ದಿಕ್ಕೆಟ್ಟವರಂತೆ ಒಂದೆಡೆಯಿಂದ ಇನ್ನೊಂದೆಡೆಗೆ ಓಡುತ್ತಾರೆ. ಎಲ್ಲಿಯವರೆಗೆ ಹೀಗೆ ಓಡಾಡುತ್ತಾ ಒದ್ದಾಡುತ್ತಿರುತ್ತಾರೆ ? ವೆಂಕಾಬ್ ರಾವ್ ಸಿಕ್ಕುವ ವರೆಗೂ. ಸರಿ ಹುಡುಕಾಡುತ್ತ ಏನಾಗುತ್ತದೆ ? ಶಿವು ತಕ್ಕಮಟ್ಟಿಗೆ ಕಳೆದುಹೋಗಿರುವ ತನ್ನನ್ನು ಹುಡುಕಿಕೊಳ್ಲುತ್ತಾನೆ. ಅದು ಬಿಟ್ಟರೆ ಇನ್ನೇನಾಗುತ್ತದೆ ? ಶಿವು ಮತ್ತು ಸಹನಾಳ ನಡುವೆ ವಿಪರೀತ ನೋವು , ಹತಾಶೆ , ಬಳಲಿಕೆಯ ನಡುವೆ ಪ್ರೇಮಾಂಕುರವಾಗುತ್ತದೆ . ಅದೂ ಸುಮಾರು ಒಂದು ವಾರದ ಅಂತರದೊಳಗೆ ಎಂಬಲ್ಲಿಗೆ ......

 

ನೀವು ಒಂದು ಕೀಲಿ ಕೈ ಕಳೆದುಕೊಂಡಿದ್ದೀರಿ ಎಂದುಕೊಳ್ಳಿ . ಅದನ್ನು ಮೊದಲ ೨-೩ ನಿಮಿಷಗಳ ಕಾಲ ದಿಕ್ಕೆಟ್ಟವರಂತೆ ಹುಡುಕಾಡುತ್ತೀರಿ . ಆಗಲೂ ಸಿಗದಿದ್ದಾಗ ಸಾವರಿಸಿಕೊಂಡು ಕುಳಿತು ಕೀಲಿ ಎಲ್ಲೆಲ್ಲಾ ಇಟ್ಟಿರಬಹುದು , ನಾನು ನಡೆದಾಡಿದ ಸ್ಥಳಗಳ ಬಗ್ಗೆ ಆಲೋಚಿಸಿ ಆ ಸ್ಥಳಗಳಲ್ಲಿ ಹುಡುಕಲು ಶುರುಮಾಡುತ್ತೇವೆ . ಎರಡೂ ಹುಡುಕಾಟವೇ . ಒಬ್ಬ ಪಕ್ವ ನಿರ್ದೇಶಕ ಮೊದಲ ೨-೩ ನಿಮಿಷಗಳ ಹುಡುಕಾಟವನ್ನು ಬೇಗನೆ ಹಿನ್ನಲೆಗೆ ಸರಿಸಿ , ಎರಡನೇ ತರದ ಹುಡುಕಾವನ್ನು ಬಹಳ ಬೇಗನೆ ಮುನ್ನಲೆಗೆ ತರುತ್ತಾನೆ . ಅಲ್ಲಿ ಅವನಿಗೆ ಹುಡುಕಾಟದ ಜೊತೆಗೆ ಹುಡುಕಾಡುವವನನ್ನು ಚಿಂತನೆಗೆ ಹಚ್ಚಲು , ಹುಡುಕಾಡುವವನ ಮನಸ್ಥಿತಿಯನ್ನು ಚಿತ್ರಿಸಲು ಅವಕಾಶಗಳಿರುತ್ತವೆ . ಆದರೆ ಗೋಧಿ ಬಣ್ಣದಲ್ಲಿ ಕಾಣುವ ಹುಡುಕಾಟ ಮೊದಲ ತರದ್ದು . ಉಸಿರು ಬಿಡಲೂ ಬಿಡುವಿಲ್ಲದ ತರದ್ದು .(ಹುಡುಕಾಟದ ಸಂದರ್ಭದಲ್ಲಿ ರಕ್ಷಿತ್ ಮತ್ತು ಶ್ರುತಿ ಎರಡು ವಿರುದ್ದ ದಿಕ್ಕಿನಿಂದ ಬಂದು ಒಂದು ಜಾಗದಲ್ಲಿ ಸೇರುವಾಗ ರಕ್ಷಿತ್ ಹೇಳುವ “This is not going to work” ಸಂಭಾಷಣೆ ನೆನಪಿಸಿಕೊಳ್ಳಿ ) ಹೀಗಿರುವಾಗ ಶಿವು ತನ್ನನ್ನು ತಾನೇ ಶೋಧಿಕೊಳ್ಳುವುದಕ್ಕೂ , ಸಹನಾಳ ಜೊತೆ ಪ್ರೇಮಾಂಕುರವಾಗುವುದಕ್ಕೂ ಸಮಯವೆಲ್ಲಿದೆ ? . ಶಿವು ತನ್ನನ್ನು ತಾನು ಕಂಡುಕೊಳ್ಳುತ್ತಿರುವಾಗ ಅವನಿಗೆ ಹುಡುಕಾಟದಲ್ಲಿ ನೆರವಾಗುವ ಸಹನಾ ಹುಡುಕಾಟದಲ್ಲಿ ತನ್ನವರಿಂದ ದೂರ ಸರಿಯುತ್ತಾಳೆ . ಕತೆಗಾರ ನಾಯಕನನ್ನು ಮರುಶೋಧಿಸಿಕೊಟ್ಟು ನಾಯಕಿಯನ್ನು ಆರಂಭದಲ್ಲಿ ನಾಯಕ ಹೇಗಿದ್ದ ಅದೇ ತರಹದ ಪರಿಸ್ಥಿತಿಯೊಂದಕ್ಕೆ ದೂಡುತ್ತಾನೆ . ಹುಡುಕಾಟದಲ್ಲಿ ನಾಯಕ ತನ್ನನ್ನು ತಾನು ಕಂಡುಕೊಂಡರೆ , ನಾಯಕಿ ತನ್ನನ್ನು ತಾನು ಕಳೆದುಕೊಳ್ಳುತ್ತಾಳೆ .

 

ನಿಜದಲ್ಲಿ ಹುಡುಕುವ ಕ್ರಿಯೆಯೇ ಸಿನೆಮಾವಾದರೆ ಏನು ಪ್ರಯೋಜನ . ಸಿನೆಮಾವೊಂದು ಅನುಭವವಾಗಿ ಮಾರ್ಪಾಡಾದಾಗಲು ಸುಳ್ಳೊಂದು ನಿಜವಾಗಿ ಕಾಣಬೇಕು . ನಿಜವನ್ನು ನಾವು ಕಣ್ಣೆದುರೇ ಕಾಣುತ್ತೇವೆ . ಅದು ಸಹಜವೂ ಆಗಿರುತ್ತದೆ. ಆದರೆ ಒಂದು ಕಾದಂಬರಿ ಅಥವಾ ಚಿತ್ರ ವಿಶಿಷ್ಟ ಅನ್ನಿಸಿಕೊಳ್ಳಬೇಕಾದರೆ , ನಿಮ್ಮನ್ನು ವಿಸ್ಮಯಗೊಳಿಸಬೇಕಾದರೆ ಅದು ತೀರಾ ಸಹಜವಿರಲು ಸಾಧ್ಯವೇ ಇಲ್ಲ . ಸಹಜತೆಯ ನಡುವಿನ ಹೊಸತೊಂದು ಕಾಣಲು ಕಥನವೊಂದಕ್ಕೆ ಸುಳ್ಳಿನ ಲೋಕದ ಅನಿವಾರ್ಯತೆ ಇದ್ದೇ ಇದೆ .

 

ಅನಂತನಾಗ್ ಕಳೆದು ಹೋಗುವ ಸ್ಥಳವನ್ನು ನೋಡಿ . ಜೆ ಪಿ ನಗರದ ೬ನೇ ಹಂತದ , ೭ ನೇ ಗಲ್ಲಿಯ ಪಕ್ಕ ರೆಸಿಡೆನ್ಶಿಯಲ್ ಕಾಲೊನಿ ಅನ್ನಿಸುವ ತರದ್ದು . ಕಾರಿನಿಂದಿಳಿದ ರಕ್ಷಿತ್ ಮೊಬೈಲ್ ಎತ್ತುಕೊಂಡು ಹಿಂದೆ ಮುಂದೆ ಓಡಾಡುವಾಗ ಇದ್ದ ರಸ್ತೆಗಳನ್ನು ಗಮಸಿದ್ದರೆ ಅದೂ ಕೂಡ ಖಾಲಿ ಖಾಲಿ . ಸೆಕ್ಯುರಿಟಿಯವನು ಕಾರಿನಿಂದ ಮಾರುದ್ದದಲ್ಲೇ ಇರುವ ಗೇಟಿನ ಬಳಿ ಬರುವಾಗ ಅನಂತ್ ಕಳೆದುಹೋಗುವುದೇ ಅಸಹಜ . ಒಂದು ವೇಳೆ ಕಳೆದು ಹೋದರೂ ಇಳಿ ವಯಸ್ಸಿನಲ್ಲಿ ನಿಧಾನವಾಗಿ ನಡೆಯುವ ವೆಂಕಾಬ್ ರಾವ್ ೨೦೦ -೩೦೦ ಹೆಜ್ಜೆಗಳಿಗಿಂತ ಜಾಸ್ತಿ ಹೋಗುವುದು ಕಷ್ಟ ಸಾಧ್ಯ . ಅಷ್ಟು ದೂರ ಹೋದರೂ ಓಡಿ ಬರುವ ಸೆಕ್ಯುರಿಟಿಯಾದವನಿಗೆ ಕಾಣಿಸಬೇಕು . ಅಲ್ಲವೇ ? . ಗಾಸಿ ಗುಮ್ಮನ ಸಹಚರನ ಪಾತ್ರಕ್ಕೆ ಒಮ್ಮಿಂದೊಮ್ಮೆಲೇ ಗಾಸಿ ಗುಮ್ಮನ ಮೇಲೆ ಅನುಕಂಪ ಮೂಡುತ್ತದೆ , ಮೂರು ನಾಲ್ಕು ಸಲ ಕಿವಿಗೆ ಬೀಳುವ ರಜ಼ಾಕ್ ಹೆಸರು , ಬಾರ್ ಡ್ಯಾನ್ಸರ್ ರೇಶ್ಮಾಳ ಪಾತ್ರದ ಅನಿವಾರ್ಯತೆಯೇ ಚಿತ್ರಕ್ಕಿಲ್ಲ . ಹೀಗೆ ಉತ್ತರವೇ ಇರದ ಹಲವು ಪ್ರಶ್ನೆಗಳಿವೆ .

 

 

ಇತ್ತೀಚಿನ ಚಿತ್ರಗಳ ಛಾಯಾಗ್ರಹಣ ಸಾಮಾನ್ಯವಾಗಿ ಉತ್ತಮ ಮಟ್ಟದಲ್ಲೇ ಇರುತ್ತದೆ . ಅದಕ್ಕೆ ಕಾರಣ ಈಗ ಒಂದೂವರೆ , ಎರಡು ಲಕ್ಷದೊಳಗಡೆ ಒಂದು ಚಲನಚಿತ್ರ ಚಿತ್ರೀಕರಿಸಬಲ್ಲ DSLR ಕ್ಯಾಮೆರಾಗಳು ದೊರಕುತ್ತವೆ . ಏರಿಯಲ್ ಶಾಟ್ಗಳಿಗೋಸ್ಕರ ನಾವು ಈಗ ಹೆಲಿಕಾಪ್ಟರ್ ಗಳನ್ನು ಅವಲಂಬೀಸಬೇಕಾಗಿಲ್ಲ , ೩ ಲಕ್ಷದೊಳಗಿನ ಡ್ರೋನ್ ಕ್ಯಾಮೆರಾಗಳು ಬಂದಿವೆ . ಆದರೆ ಈ ಚಿತ್ರ ಛಾಯಾಗ್ರಹಣ ಮತ್ತು ಬಣ್ಣಗಳ ಲೇಪನ (ಕಲರ್ ಗ್ರೇಡಿಂಗ್ ) ನಲ್ಲಿ ತೀರಾ ಬಡವಾಗಿದೆ . ಅರ್ಥವಿಲ್ಲದ ಫ್ರೇಮ್‌ಗಳು , ತುಂಬಾ ಕಡೆಗಳಲ್ಲಿ ಔಟ್ ಆಫ್ ಫೋಕಸ್ ಗೆ ಜಾರುವ ಕ್ಯಾಮೆರಾ . ಈ ಛಾಯಾಗ್ರಾಹಕನ ನ್ಯೂನ್ಯತೆಯನ್ನು ಕಳೆಯಲು ದೃಶ್ಯದ ಶಾರ್ಪ್‌ನೆಸ್ ಜಾಸ್ತಿ ಮಾಡಿ ಪಾತ್ರಧಾರಿಗಳನ್ನು ಚರ್ಮರೋಗಿಗಳಂತೆ ಮಾಡಿರುವ ಗ್ರೇಡರ್ ಹೀಗೆ . ಛಾಯಾಗ್ರಾಹಕ ಬೆಳಕನ್ನು ಉಪಯೋಗಿಸುವ ಪ್ರಾಥಮಿಕ ಪಾಠವನ್ನು ಇನ್ನೊಮ್ಮೆ ಕಲಿಯಬೇಕು . ಬೆಳಕೆಂದರೆ ಕೃತಕ ಬೆಳಾಕಾಷ್ಟೆ ಅಲ್ಲ , ಸೂರ್ಯನ ಬೆಳಕಿನ ಉಪಯೋಗವೂ ಕೂಡ ಬಹಳಷ್ಟು ಭಾಗದಲ್ಲಿ ಚೆನ್ನಾಗಿಲ್ಲ . ಹಾಗಾಗಿ ತೆರೆಯ ಬೇರೆ ಬೇರೆ ಭಾಗಗಳು ಒಂದೊಂದು ಬೆಳಕಿನಿಂದ ಮಬ್ಬು ಮಬ್ಬಾಗಿ ಕಾಣುತ್ತದೆ . ಅನಂತನಾಗ್ ತನ್ನ ಕಥೆ ಹೇಳುವ ದೃಶ್ಯ ವಂತೂ ಔಟ್ ಆಫ್ ಫೋಕಸ್ನಿಂದಲೇ ಪ್ರಾರಂಭವಾಗುತ್ತದೆ . ಇಂತಹ ತಪ್ಪುಗಳು ಅಕ್ಷಮ್ಯ . ಯಾಕೆಂದರೆ ಅದು ಬಜೆಟ್ ನ ಸಮಸ್ಯೆಯದ್ದಲ್ಲ . ಅದು ಛಾಯಾಗ್ರಾಹಕನ ಅಲಕ್ಷ್ಯತೆ .

 

ಚಿತ್ರ ವೀಕ್ಷಣೆಯನ್ನು ಅಸಹನೀಯವಾಗಿಸುವುದು ಚಿತ್ರದ ಹಾಡುಗಳು ಮತ್ತು ಶಬ್ದಗ್ರಹಣ . ಇವೆರಡನ್ನೂ ಚಿತ್ರದ ಹೊರಗಿಟ್ಟು ನೋಡಿ . ಬಹಳ ಚೆನ್ನಾಗಿದೆ . ಚರಣ್ ಹೊಸದೊಂದು ಲೋಕಕ್ಕೆ ನಿಮ್ಮನ್ನು ಕರೆದೊಯ್ಯುತ್ತಾರೆ . ಆದರೆ ಚಿತ್ರದೊಳಗಲ್ಲ . ನಾ ಈ ಸಂಜೆಗೆ ಬಿಟ್ಟು ಇನ್ಯಾವುದೂ ಚಿತ್ರದೊಂದಿಗೆ ಹೊಂದುವುದಿಲ್ಲ . ನಾಯಕಿ ನಾಯಕನಿಗೆ ಸಹಾಯ ಮಾಡುತಿದ್ದಾಳೆ ಎನ್ನುವ ಮಾತ್ರಕ್ಕೆ "ಕೋಮಲ ಕೋಮಲ ಹೆಣ್ಣೆ " ಎಂದು ಅವಳನ್ನು ವರ್ಣಿಸುವುದು ತಲೆಕೆಟ್ಟ ನಿರ್ಧಾರ . ಕೇವಲ 'ಮೌನ' ಮಾತಾಡಬೇಕಾದ ಜಾಗದಲ್ಲಿ “ಮೌನ ..ಮೌನ” ಎಂದು ಹಾಡು ಶುರುವಾಗುತ್ತದೆ . ಎರಡು ವೀಣೆ ಅಥವಾ ಗಿಟಾರ್ ನ ತಂತಿಗಳು ಎರಡು ಸ್ವರ ಬಿಡಬೇಕಾದ ಜಾಗದಲ್ಲಿ ಹೆಚ್ಚಿನ ತೀವ್ರತೆಯ ಧ್ವನಿಗಳೇಳುತ್ತವೆ . ಮೊದಲಾರ್ಧದಲ್ಲಿ ನಿರ್ದೇಶಕ ಗಂಭೀರವಾಗಿ ಕಥೆಯೊಳಗೆ ಪ್ರವೇಶ ಮಾಡುವ ಮುನ್ನವೇ 3-4 ಹಾಡುಗಳನ್ನು ಕೊಡುತ್ತಾನೆ . ಗಾಸಿಗುಮ್ಮ ನ ಪಾತ್ರ ಆ ದಿನಗಳು , ಎದೆಗಾರಿಕೆಯ ನಾಯಕನ ಪಾತ್ರಗಳಂತೆ ಹೂವಿನ ಹೃದಯದ ಅಪರಾಧಿಯಂತದ್ದು . ಆ ಪಾತ್ರಕ್ಕೆ ಜೋಡಿಸಿದ ಶಬ್ದ ವಿನ್ಯಾಸವೂ ಪಾತ್ರ ಬೇಡುವುದಕ್ಕಿಂತ ಹೆಚ್ಚಿನದ್ದೆ ಆಗಿದೆ .

 

ವೆಂಕಾಬ್ ರಾವ್ ಪಾತ್ರವನ್ನು ಅಕ್ಷರಶಃ ಜೀವಿಸಿರುವ ಅನಂತ್ ನಾಗ್ ರಂತಹ ಪರಿಪೂರ್ಣ ನಟನನ್ನು ಚಿತ್ರದ ದ್ವಿತೀಯಾರ್ಧ ಅಪರಾಧ ಜಗತ್ತಿನ ಬಾಲಿಶ ವಿಜ್ರಂಭಣೆಯಿಂದಾಗಿ ಉಪಯೋಗಿಸಿಕೊಳ್ಳುವುದಿಲ್ಲ . ಗೋಡೆಯಲ್ಲಿ ಬೀಳುವ ರಕ್ಷಿತ್ ಶೆಟ್ಟಿ ನೆರಳು ಚೆನ್ನಾಗಿ ಅಭಿನಯಿಸಿದೆ .ಅವರ ಸಂಭಾಷಣೆಯಲ್ಲಿ ಮಂಗಳೂರು ಕನ್ನಡ ಆಗಾಗ್ಗೆ ನುಸುಳುತ್ತದೆ . ಮಂಗಳೂರಿಗೆ ಸಂಬಂಧವೇ ಇರದ ಆ ಪಾತ್ರ ಆ ಪ್ರಾದೇಶಿಕ ನುಡಿಗಟ್ಟನ್ನು ಬಳಸುವುದು ಅಸಮಂಜಸ . ಕತೆಗಾರ ಸರಿಯಾಗಿ ಪೋಷಿಸದ ಪಾತ್ರವನ್ನು ಶೃತಿ ಅಭಿನಯಿಸಲು ತಡವರಿಸುತ್ತಾರೆ. ಅವರ ಸಂಭಾಷಣೆಯೂ ತೀರಾ ಎಳಸು ಎಳಸಾಗಿದೆ . ಪುರುಷ ಪಾತ್ರಗಳ ಸಂಭಾಷಣೆಗೆ ಕೊಟ್ಟಷ್ಟು ಗಮನ ಈ ಮಹಿಳಾ ಪಾತ್ರಕ್ಕೆ ಕೊಡಲಾಗಿಲ್ಲ .

 

ನಮ್ಮ ಹೊಸ ತಲೆಮಾರಿನ ನಿರ್ದೇಶಕರುಗಳಿಗೆ ಕಥೆಯೊಳಗಿನ ರಾಜಕೀಯ ಮತ್ತು ಕಥೆ ನಡೆಯುವ ಭೌಗೋಳಿಕ ವಲಯದ ಸ್ಥಿತ್ಯಂತರಗಳು ಬಾಧಿಸಿದಂತೆ ಕಾಣುತ್ತಿಲ್ಲ . ಮಂಡ್ಯದ ಹಳ್ಳಿ ನಂದೆಕೊಪ್ಪಲಿನಲ್ಲಿ ತಿಥಿ ಚಿತ್ರೀಕರಿಸುವ ನಿರ್ದೇಶಕನಿಗೆ ಮಂಡ್ಯವನ್ನು ಕಾಡಿದ ಬರ , ರೈತರ ಆತ್ಮಹತ್ಯೆಯಂತಹ ಸಾಮಾಜಿಕ ಬದ್ಧತೆಯ ವಿಷಯಗಳನ್ನು ಚಿತ್ರದೊಳಕ್ಕೆ ತರಬೇಕೆಂದು ಅನ್ನಿಸುವುದಿಲ್ಲ . ಸುಮ್ಮನೆ ಇನ್ನೊಮ್ಮೆ ಆಲೋಚಿಸಿ . ತಿಥಿಯಲ್ಲಿ ಕಾವೇರಿ ಆ ಮೂರು ಜನ ಹೆಂಗಸರೊಡನೆ ಗದ್ದೆಯಲ್ಲಿ ಏನನ್ನೋ ಕೀಳುತಿದ್ದಾಗ ಬರದ ಛಾಯೆಯನ್ನು ನಿರ್ದೇಶಕನಿಗೆ ದೃಶ್ಯದೊಳಕ್ಕೆ ತರುವ ಸಾಧ್ಯತೆಗಳಿರಲಿಲ್ಲವೇ ? . ಖಂಡಿತವಾಗಿಯೂ ಸಾಧ್ಯವಿತ್ತು . ಗೋಧಿಬಣ್ಣದಲ್ಲೂ ಒಂದು ಸಾಫ್ಟ್‌ವೇರ್ ಕಂಪನಿಯ ಆವರಣದೊಳಗಿನ ಸಂಭಾಷಣೆಯನ್ನು ನೋಡಿ . ಮ್ಯಾನೇಜರ್ ಇಂಗ್ಲೀಶ್ ಮತ್ತು ಹಿಂದಿಯಲ್ಲೇ ಮಾತಾಡುತ್ತಾನೆ . ಅದಕ್ಕೆ ಪ್ರತಿಯಾಗಿ ಬೆಂಗಳೂರಿನ ಕನ್ನಡದ ನಾಯಕ ಪಾತ್ರ ಇಂಗ್ಲೀಶ್ ಅಥವಾ ಹಿಂದಿಯಲ್ಲೇ ಉತ್ತರಿಸುತ್ತದೆ . ನಮ್ಮ ನೆಲಕ್ಕೆ ಬಂದವರಿಗೆ ನಮ್ಮ ನುಡಿಯನ್ನು ಕಲಿಸಬೇಕೆನ್ನುವ ಬದ್ದತೆ ನಿರ್ದೇಶಕನಿಗೆ ಬಂದಂತಿಲ್ಲ . ಇದು ರಾಮ್ ರೆಡ್ಡಿ ಅಥವಾ ಹೇಮಂತರ ಸಮಸ್ಯೆಯಲ್ಲ . ನಾವು ಬದುಕುತ್ತಿರುವುದರಲ್ಲೇ ಇರುವ ಸಮಸ್ಯೆ . ಯಾವುದು ತಪ್ಪು , ಯಾವುದು ಸರಿಯೆಂಬುದು ಕೂಡ ಜಿಜ್ಞಾಸೆಯೇ . ಈಗಿನ ನಿರ್ದೇಶಕರು ಅದನ್ನು ತಮ್ಮ ಕಥನದೊಳಕ್ಕೆ ತರುತ್ತಿಲ್ಲ ಎನ್ನುವುದಕ್ಕಿಂತ ಮಿಗಿಲಾಗಿ ಅವನ್ನು ತಮ್ಮ ಕಥನದೊಳಕ್ಕೆ ತರಬೇಕೆಂಬ ತಲ್ಲಣ ಈಗಿನ ನಿರ್ದೇಶಕರುಗಳಿಗೆ ಹುಟ್ಟುತ್ತಿಲ್ಲ ಅನ್ನುವುದು ನನ್ನನ್ನು ಕಾಡುವಂತಹುದ್ದು.

 

 

ಗೋಧಿ ಬಣ್ಣ ಚಿತ್ರವನ್ನು ಸುಮಿತ್ರಾ ಭಾವೆ ಮತ್ತು ಸುನಿಲ್ ಸೂಕ್ತಂಕರ್ ನಿರ್ದೇಶನದ 2013 ರ ಮರಾಠಿ ಚಿತ್ರ ಅಸ್ತು ಜೊತೆಗಿಟ್ಟು ನೋಡಿದರೆ ಒಬ್ಬ ನಗರ ಸಂವೇದನೆಯ ಹೊಸ ನಿರ್ದೇಶಕ ಮತ್ತು ನುರಿತ ಕಥೆಗಾರನ ನಡುವಿನಲ್ಲಿ ಇರುವ ಕಥನ ಕಟ್ಟುವ ಪಕ್ವತೆ ಅರ್ಥವಾಗಬಹುದು . ಗೋಧಿ ಬಣ್ಣ ಅಸ್ತು ವಿನ ನಕಲಲ್ಲ . ಎರಡು ಚಿತ್ರಗಳು ಸಾಮಾನ್ಯ ಎಳೆಯನ್ನು ಹೊಂದಿದ್ದರೂ , ಒಂದೇ ವಿಷಯವನ್ನು ಚರ್ಚಿಸುತಿದ್ದರೂ ಕಥೆಯ ನಿರ್ವಹಣೆ ಮಾತ್ರ ಬೇರೆ ಬೇರೆ . ಮನುಷ್ಯ ಸಂಬಂಧಗಳನ್ನು ಹುಡುಕುವಾಗಲ್ಲಿನ ಸೂಕ್ಷ್ಮವನ್ನು ಅಸ್ತು ಬಹಳ ಚೆನ್ನಾಗಿ ಬಿಡಿಸುತ್ತಾ ಸಾವಧಾನದಿಂದ ನಿಮ್ಮ ಮುಂದಿಡುತ್ತದೆ . ಅದಕ್ಕೆ ಎರಡು ಉದಾಹರಣೆ ಕೊಡುವೆ . ಮೊದಲನೆಯದಾಗಿ ಅಲ್ಲಿ ಕಥೆಯ ಆವರಣ ಒಂದು ಕುಟುಂಬದ ಒಳಗಿನದ್ದು . ತಂದೆ ಕಾಣೆಯಾಗುತ್ತಾರೆ .ಮಕ್ಕಳನ್ನು ಹೊಂದಿರುವ ಮಗಳು ಮತ್ತು ಅಳಿಯ ಹುಡುಕಾಡುತ್ತಾರೆ . ಕಥೆಗಾರನಿಗೆ ಅಲ್ಜ಼ಮಿರ್ ಖಾಯಿಲೆ ಕಥೆ ಹೇಳಲು ನೆಪಮಾತ್ರ . ಅವನಿಗೆ ಯಾವುದರ ಬಗ್ಗೆ ಹೇಳುತಿದ್ದೇನೆ ಎನ್ನುವುದರ ಬಗ್ಗೆ ಸ್ಪಷ್ಟತೆ ಮತ್ತು ಹಿಡಿತ ಎರಡೂ ಇದೆ . ಹಾಗಾಗಿ ಒಮ್ಮೆ ವೈದ್ಯರ ಕೋಣೆಯಲ್ಲಿ ಮಾತ್ರ ಖಾಯಿಲೆಯ ಪ್ರಸ್ತಾಪ ಮಾಡುತ್ತಾನೆ . ಅಲ್ಲಿಂದ ಮುಂದೆ ಆ ಮೋಹನ್ ಅಗಾಸೆ ಮಾಡಿರುವ ಪಾತ್ರವೇ ನಿಮಗೆ ಖಾಯಿಲೆಯ ಅರಿವನ್ನು ಅದರ ಚಲನವಲನಗಳಿಂದ ಮಾಡಿಸುತ್ತದೆಯೇ ಹೊರತು ಬೇರೆ ಯಾವ ಪಾತ್ರವೂ , ಅಥವಾ ಸ್ವತಹ ತಾತನ ಪಾತ್ರವೂ ಖಾಯಿಲೆಯ ಪ್ರಸ್ತಾಪವೇ ಮಾಡುವುದಿಲ್ಲ . ಹಾಗಾಗಿ ಖಾಯಿಲೆ ನೆಪ ಮಾತ್ರ .

ಇನ್ನೊಂದು ತಾತ ಕಳೆದು ಹೋಗುವ ಸಂಧರ್ಭ . ಒಬ್ಬ ಪ್ರೇಕ್ಷಕನಿಗೆ ಆ ಪಾತ್ರ ಕಳೆದು ಹೋಗುವುದೇ ಇಲ್ಲ . ತಾತನ ಪಾತ್ರ ತೆರೆಯ ಮೇಲೆ ಮಗಳಿಂದ ದೂರ ಹೋಗುತ್ತಿದೆಯೇ ವಿನಹಾ ಪ್ರೇಕ್ಷಕನಿಗೆ ಪಾತ್ರ ಕಳೆದು ಹೋಗುವುದಿಲ್ಲ . ಕತೆಗಾರ ಆ ತಾತನ ಪಾತ್ರದ ಮೂಲಕವೇ ನಿಮಗೆ ಕಥೆ ಹೇಳುವುದರಿಂದ ಗೋಧಿ ಬಣ್ಣದಲ್ಲಿ ಆದಂತೆ ಒಂದು ಜಾಗದಿಂದ ತೆರೆಯೆಲ್ಲಿಯೇ ಇಲ್ಲದಂತೆ ಮಾಡಿ ಬೇರೊಂದು ಜಾಗದಲ್ಲಿ ಹಟಾತ್ತನೆ ತೋರಿಸುವುದಿಲ್ಲ . ಹಾಗಾಗಿ ಪ್ರೇಕ್ಷಕ ಮತ್ತು ತಾತನ ಸಂಬಧವೂ ಕಡಿದು ಹೋಗುವುದೇ ಇಲ್ಲ . ಹಾಗಾಗಿ ಅಸ್ತು ತೆರಯ ಮೇಲಿನ ತಲ್ಲಣವನ್ನ ಪ್ರೇಕ್ಷಕನಿಗೂ ದಾಟಿಸುತ್ತದೆ . ಆದರೆ ಗೋಧಿಬಣ್ಣ ಅದನ್ನು ಮಾಡುವುದಿಲ್ಲ .

 

 

ಮುಕ್ತಾಯಕ್ಕೆ ಮುನ್ನ ಒಂದೆರಡು ಮಾತು . ಈಗೀಗ ಚಲನಚಿತ್ರ ನಿರ್ಮಾಣದಲ್ಲಿ ಬದಲಾವಣೆಗಳಾದಂತೆ ವಿನ್ಯಾಸಗಳಲ್ಲೂ ಬದಲಾವಣೆಗಳಾಗುತ್ತಿವೆ . ಅದರಲ್ಲಿ ಮುಖ್ಯವಾದದ್ದು ಇತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಡಾಲ್ಬಿ ಅಟ್‌ಮೊಸ್ ಆಡಿಯೋ ತಂತ್ರಜ್ಞಾನ . ಈ ತಂತ್ರಜ್ಞಾನ ದಿಂದಾಗಿ ಧ್ವನಿ ತರಂಗಗಳನ್ನು 128 ಟ್ರಾಕುಗಳಲ್ಲಿ ಆಡಿಯೋ ಚಾನಲ್ಗಳ ಮೂಲಕ ಚಿತ್ರಮಂದಿರದ ಒಳಗಡೆ ಬಿಡಲಾಗುತ್ತಿದೆ . ಈಗಿನ ಚಿತ್ರಗಳು ಅದಕ್ಕೆ ಬೇಕಾದ ಶಬ್ದ ಗ್ರಹಣವನ್ನು ಮಾಡುತ್ತಿದೆ . ಆದರೆ ನಮ್ಮ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಈ ತಂತ್ರಜ್ಞಾನಕ್ಕೆ ಇನ್ನೂ ಒಗ್ಗಿಕೊಂಡಿಲ್ಲ . ಹಾಗಾಗಿ ಪ್ರೇಕ್ಷಕ ಪರಿಪೂರ್ಣ ಅನುಭವಕ್ಕೆ ಮಲ್ಟಿಪ್ಲೆಕ್ಸ್ಗಗಳಿಗೆ ಅನಿವಾರ್ಯವಾಗಿ ದೂಡಲ್ಪಡುತ್ತಿದ್ದಾನೆ . ಹಾಗೆ ಬಿಡುಗಡೆಯಲ್ಲಿಯೂ ವಿತರಕರು ಲಾಭ ನಷ್ಟದ ಲೆಕ್ಕಾಚಾರಕ್ಕೆ ಬಿದ್ದು ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆ ಮಾಡಿ ಜನಾಭಿಪ್ರಾಯವನ್ನು ನೋಡಿ ರಾಜ್ಯದ ಉಳಿದ ಪ್ರದೇಶಗಳಲ್ಲಿ ಬಿಡುಗಡೆ ಮಾಡುತಿದ್ದಾರೆ . ಇದರಿಂದ ಉಳಿದೆಡೆಯ ಪ್ರೇಕ್ಷಕ ನೋಡುವುದು ವಿಳಂಬವಾಗುತ್ತಿದೆ .

 

ನಾನಿಲ್ಲಿ ಹೇಮಂತ್ ಮತ್ತು ತಂಡದ ಪ್ರಾಮಾಣಿಕತೆಯನ್ನು ಪ್ರಶ್ನೆ ಮಾಡಿಲ್ಲ . ಚಿತ್ರವನ್ನು ಋಣಾತ್ಮಕ ವಿಮರ್ಶೆಗೆ ಒಳಪಡಿಸಿದ್ದೇನಷ್ಟೆ . ಮೆಚ್ಚಿದ್ದ ಅಂಶಗಳು ಹಲವಿವೆ . ಎಲ್ಲರೂ ಅದರ ಬಗ್ಗೆಯೇ ಮಾತಾಡಿದ್ದರಿಂದ ಪುನರಾವರ್ತಿಸಿಲ್ಲ . ಎಲ್ಲಕ್ಕಿಂತ ಮಿಗಿಲಾಗಿ ನನಗೆ ಬಹಳ ಖುಷಿಕೊಟ್ಟದ್ದು ನಾಯಕ ಮತ್ತು ನಾಯಕಿಯ ನಡುವಿನ ನೀವು , ಡಾಕ್ಟ್ರೇ ಮೊದಲಾದ ಬಹುವಚನದ ಸಂಭಾಷಣೆಯನ್ನು ಅವರಿಬ್ಬರ ನಡುವೆ ಸಲಿಗೆ ಬೆಳೆಯುತಿದ್ದಂತೆ 'ನೀನು' ಎನ್ನುವಂತೆ ಏಕವಚನಕ್ಕೆ ಬಹಳ ಜಾಣ್ಮೆಯಿಂದ ತಿರುಗಿಸಿದ್ದು .

 

ಬಸವರಾಜ್ ಇಟ್ನಾಳ್ ಅವರ ಇತ್ತೀಚಿನ ಒಂದು ಫೇಸ್ ಬುಕ್ ಪೋಸ್ಟ್ ನಿಂದಲೇ ಈ ಬರಹವನ್ನು ಮುಗಿಸುತ್ತೇನೆ .

“ನಮ್ಮ ಭಾಷೆಯ ಸಿನಿಮ, ನಮ್ಮ ಹುಡುಗರ ಕಷ್ಟ ಪಟ್ಟು ಮಾಡಿದ್ದಾರೆ, ನನ್ನ ಗೆಳೆಯ /ಗೆಳತಿಯ ಸಿನಿಮ ಅಂತೆಲ್ಲ ದಾಕ್ಷಿಣ್ಯಕ್ಕೆ ಸಿನಿಮ ಓಡುವುದಿಲ್ಲ. ಎರಡು ಗಂಟೆಗಳಷ್ಟು ಕಾಲ ಕತ್ತಲ ಕೋಣೆಯಲ್ಲಿ ಕುಳಿತ ಪ್ರೇಕ್ಷಕನನ್ನು ಮುದಗೊಳಿಸದಿದ್ದರೆ, ಬೆರಗುಗೊಳಿಸದಿದ್ದರೆ, ಕಚಗುಳಿ ಇಟ್ಟು ಖುಷಿಗೊಳಿಸದಿದ್ದರೆ, ಹೊಸ ತೆರನ ತಮಾಷೆ ಮಾಡಿ ನಗಿಸದಿದ್ದರೆ ಯಾವ ಭಾವುಕ ವಾದಗಳೂ ಕೆಲಸ ಮಾಡುವುದಿಲ್ಲ. ಇದನ್ನು ಸಾಧಿಸುವುದು ಅಂತಹ ಅಸಾಧ್ಯ ಕೆಲಸವೂ ಅಲ್ಲ. ಆದರೆ ಅದಕ್ಕೆಲ್ಲ ಮೊದಲು ಸಿನಿಮ ಎಲ್ಲಿ ಎಡವಿದೆ ಅನ್ನುವ ಬಗ್ಗೆ ಪ್ರಾಮಾಣಿಕ ಅರಿವು ಬೇಕು. ಇದೆಲ್ಲಕ್ಕಿಂತ ಮೂಲಭೂತವಾಗಿ, ನೋಡುಗರ ಬುದ್ಧಿಮತ್ತೆಯನ್ನು ಸಿನಿಮಾ ಮಾಡುವವರು ಗೌರವಿಸುವುದನ್ನು ಕಲಿಯಬೇಕು. ನೋಡುಗ ತಮಗಿಂತಲೂ ಜಾಣನೂ, ಸೂಕ್ಷ್ಮ ಮತಿಯೂ ಆಗಿರಬಲ್ಲ ಅಂದುಕೊಂಡು ಹೊರಟಾಗ ಮಾತ್ರ ಯಶಸ್ವಿ ಸಿನಿಮ ಆಗಲು ಸಾಧ್ಯ. ಸರಿಯಾದ ಗುಣಗಳಿಗೆ ಮೆಚ್ಚುಗೆ ಮಾತಾಡುತ್ತಲೇ ನಿರ್ದಾಕ್ಷಿಣ್ಯ ವಿಮರ್ಶೆ ಕೊಟ್ಟಾಗ ಮಾತ್ರ ಕನ್ನಡ ಸಿನಿಮ ಚೇತರಿಸಿಕೊಂಡೀತು.”

 

06-06-16


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು