ದೃಶ್ಯಕ್ಕೊಂದು ನುಡಿಗಟ್ಟು

ರೀಮೇಕ್, ರೌಡಿಸಂ ಚಿತ್ರಗಳ ಕಪ್ಪುಬಿಳುಪಿನ ನಡುವೆ "ರಂಗಿತರಂಗ"

Rangi tarangaಅನುಪ್ ಭಂಡಾರಿ ನಿರ್ದೇಶನದ ರಂಗಿತರಂಗ ಚಿತ್ರವು ನಿಗೂಢ ಸಾವಿನಿಂದ ಪ್ರಾರಂಭವಾಗಿ, ಊಟಿಯಲ್ಲಿರುವ ಅಜ್ಞಾತ ಲೇಖಕನ ಶೋಧನೆಗೆ ಹೊರಟ ಸ್ವಘೋಷಿತ ಪತ್ರಕರ್ತೆಯ ಕಡೆ ಸಾಗಿ "ಮತ್ತೊಂದು ಪ್ರೇಮ ಕಥೆಯಾ?" ಎಂದು ಯೋಚಿಸುತ್ತಿರುವಾಗಲೆ ಕಥೆಯ ದಿಕ್ಕು ಬದಲಾಗಿ ದಕ್ಷಿಣ ಕರ್ನಾಟಕದತ್ತ ಸಾಗುತ್ತದೆ. ಅಯ್ಯೋ, "ಇದು ಇನ್ನೊಂದು ಹಾರರ್ ಸಿನಿಮಾನಾ?" ಅಂತ ಊಹಿಸುವಾಗ ನಿಮ್ಮ ದಿಕ್ಕು ಮತ್ತೆ ತಪ್ಪಿಸುವ ಕೆಲಸ ಮಾಡುತ್ತದೆ. ಆ ಲೇಖಕನ ಗರ್ಭಿಣಿ ಹೆಂಡತಿಯ ಕಾಡುವ ಕನಸುಗಳ ಹೋಗಲಾಡಿಸಿ, ಭೂತ ಪೂಜೆ ಮಾಡಿಸಲು, ತನ್ನ ತವರಾದ "ಕಮರೊಟ್ಟು" ಗ್ರಾಮಕ್ಕೆ ಬರುವರು. ಗ್ರಾಮ್ಯ ಕಥೆಗಳಲ್ಲಿ ಸಾಮಾನ್ಯವಾಗಿ ಗ್ರಾಮಗಳಲ್ಲಿ ಕಾಣಿಸುವ ಪಾತ್ರಗಳಾದ ಪೋಸ್ಟ್ ಮಾಸ್ಟರ್, ಇನ್ಸ್ಪೆಕ್ಟರ್ , ಸ್ಕೂಲ್ ಟೀಚರ್ ಇತ್ಯಾದಿಗಳ ನಡುವೆ ಎಡವುತ್ತಾ, ಸಿಲುಕುತ್ತಾ ಈ ದಂಪತಿಗಳ ಗತಿ ಏನಾಗುತ್ತೆ? ಅನ್ನೋದು ಮಿಕ್ಕ ಕಥೆ.

ಕಥೆಯ ನಿರೂಪಣೆ ಮೊದಲಾರ್ಧದಲ್ಲಿ ತುಂಬಾ ಚುರುಕಾಗಿ ಸಾಗಿ, ದ್ವಿತೀಯಾರ್ಧದಲ್ಲಿ ಗತಿ ಸ್ವಲ್ಪ ಕುಂದುವುದು. ಅಕ್ರಮ ಮರಳು ಸಾಗಾಣಿಕೆ, ಕಥೆಯನ್ನು ಮುಂದೆ ಸಾಗಿಸಲು ಹೆಚ್ಚು ಸಹಾಯ ಮಾಡದ ಪಾತ್ರಗಳು ಬಾರದಿದ್ದರೆ ಚಿತ್ರ ಇನ್ನು ಚೆನ್ನಾಗಿ ಮೂಡಿ ಬರುತ್ತಿತ್ತೇನೋ? ಬಹುಶಃ‌ ಇದೇ ಸಮಯವನ್ನು ಪಾತ್ರಗಳ ಪರಸ್ಪರ ಪ್ರಭಾವಕ್ಕೆ (interplay) ಕೊಡಬೇಕಿತ್ತೇನೋ ಅಂತ ಈಗ ಅನಿಸಿರಬಹುದು. ಇದು ನಿರ್ದೇಶಕನ ಮೊದಲ ಪ್ರಯತ್ನವಾದ್ದರಿಂದ ಇದನ್ನು ನಾವು ನಿರ್ಲಕ್ಷಿಸಬಹುದು.

ಪಾತ್ರ ಪೋಷಣೆ ಚನ್ನಾಗಿ ಮೂಡಿ ಬಂದಿದೆ. ಮಿತಿಮೀರಿದ ಮಾತುಗಳ ಅಬ್ಬರ ಕಿರುಚಾಟ ಇಲ್ಲದೆ ಕಥೆ ಸಲೀಸಾಗಿ ಹರಿಯುವುದು. ಸ್ಪೂರದ್ರೂಪಿ ನಿರೂಪ್ ಭಂಡಾರಿ ನಾಯಕನಾಗಿ (ಮುಂದೊಂದು ದಿವಸ ಹೆಣ್ಣು ಮಕ್ಕಳು ಅವನಿಗಾಗಿ ಚಿತ್ರ ನೋಡುವುದು ಗ್ಯಾರಂಟಿ) ಚನ್ನಾಗಿ ನಟಿಸಿದ್ದಾರೆ, ಸಾಯಿಕುಮಾರ್ ಬಹುಶಃ ಮೊದಲ ಬಾರಿ ಪೋಲಿಸ್ ಡ್ರೆಸ್ ಹಾಕದೆ ಪರದೆ ಮೇಲೆ ಕಾಣಿಸಿ ಕೊಂಡು ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ, ನಟಿಮಣಿಯರು ತಾವು ಇರುವುದಕ್ಕಿಂತ ಹೆಚ್ಚು ಮುದ್ದಾಗಿ ಕಾಣಲು ಹೊರಟು ಅಲ್ಲಿ ಇಲ್ಲಿ ಸ್ವಲ್ಪ ಎಡವಿದ್ದಾರೆ.

ಚಿತ್ರವು ತಾಂತ್ರಿಕವಾಗಿ ತುಂಬ ಗಟ್ಟಿಯಾಗಿ ಮೂಡಿ ಬಂದಿದೆ. ಹಾಲಿವುಡ್ ಇಂದ Lance Kaplan William David ಕ್ಯಾಮರಾ ಕೈ ಚಳಕವಿರಲಿ , ಸಂಕಲನವಿರಲಿ, ಕಲಾ ನಿರ್ದೇಶನವಿರಲಿ, ತುಂಬಾ ಸೊಗಸಾಗಿದೆ. ಅಜನೀಶ್ ರವರ ಹಿನ್ನೆಲೆ ಸಂಗೀತ ವಿಶಿಷ್ಟವಾಗಿ ಕಥೆಗೆ ಹಲವಾರು ಪದರಗಳನ್ನು ಸೇರಿಸಿದೆ. ಹಾಡುಗಳು ಚನ್ನಾಗಿದ್ದರೂ ಬೇಡದ ಕಡೆ ಬಂದು ಚಿತ್ರದ ಲಯವನ್ನು ಸ್ವಲ್ಪ ಭಂಗಮಾಡಿವೆ ಅನಿಸಿತು.

"ಅರೇ ನಾ ಇದನ್ನು ಆಗಲೆ ಊಹಿಸಿದ್ದೆ...." ಅನ್ನುವುದು ಹೆಚ್ಚಾಗಿ ಮಿಸ್ಟರಿ ಚಿತ್ರಗಳಲ್ಲಿ ನಡೆಯುವ ಪ್ರೇಕ್ಷಕ ಮಾಹಾಪ್ರಭುವಿನ ನೆಚ್ಚಿನ ಆಟ. ಆ ಲೆಕ್ಕದಲ್ಲಿ ಈ ತರಹದ ಚಿತ್ರಗಳಿಗೆ ನಿರ್ದೇಶಕನ ಹಾಗು ಪ್ರೇಕ್ಷಕನಿಗೆ ನಡೆವ ಪೈಪೋಟಿ. ಈ ಪೈಪೋಟಿಯಲ್ಲಿ ನಿರ್ದೇಶಕ ಬಹುತೇಕ ಗೆದ್ದು ತನ್ನ ಪ್ರೇಕ್ಷಕನನ್ನು ತನ್ನೊಟ್ಟಿಗೆ ಕರೆದೊಯ್ಯುವುದರಲ್ಲಿ ಯಶಸ್ವಿಯಾಗುತ್ತಾನೆ.

ಕನ್ನಡ ಚಿತ್ರಗಳಲ್ಲಿ ವೈವಿಧ್ಯವಿರುವುದಿಲ್ಲ, ಹೊಸದು ಇರುವುದಿಲ್ಲ ಎಂದು ಬೊಬ್ಬೆ ಹೊಡೆಯುವವರಿಗೆ ಇದು ಸವಾಲಾಗಿ ನಿಲ್ಲುತ್ತೆ, ಚಿತ್ರವನ್ನು ನೀವು ನೋಡಿ ಪ್ರೋತ್ಸಾಹ ನೀಡಿ..


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು