ದೃಶ್ಯಕ್ಕೊಂದು ನುಡಿಗಟ್ಟು

ಮಾಗದ ಮೈತ್ರಿ

 'ಕನ್ನಡದ ಕೋಟ್ಯಾಧಿಪತಿ'ಯಂತಹ (ಅನ್ಯ ಭಾಷೆಯ ಇಂತಹ ಕಾರ್ಯಕ್ರಮಗಳೂ ಸೇರಿದಂತೆ) ರಿಯಾಲಿಟಿ ಕಾರ್ಯಕ್ರಮಗಳ ಬಗ್ಗೆ ಇದ್ದಕ್ಕಿದ್ದ ಹಾಗೆ ಜನರಲ್ಲಿ ಕುತೂಹಲ-ಅರಾಧ್ಯ ಭಾವನೆ ಬೆಳದದ್ದೇಕೆ? ಇನ್ನೂ ಅತ್ಯುತ್ತಮವಾಗಿದ್ದ-ಕ್ಲಿಷ್ಟಕರವಾಗಿದ್ದ ಕ್ವಿಜ್ ಕಾರ್ಯಕ್ರಮಗಳು ಕಾಣೆಯಾದದ್ದೇಕೆ? ಇದಕ್ಕೂ ಹಾಗು ಸಮಾಜದಲ್ಲಿ ಒಟ್ಟಾರೆ ಸಾಹಿತ್ಯ-ಕಲೆ-ಸಂಗೀತ-ಸಿನೆಮಾ ಕ್ಷೇತ್ರಗಳಲ್ಲಿನ ನಿಜಮೌಲ್ಯದ ಕುಸಿತಕ್ಕೂ ಏನಾದರೂ ಸಂಬಂಧವಿದೆಯೆ? ಕ್ವಿಜ್-ಮಾಹಿತಿ ಸಂಗ್ರಹದ ಬಗ್ಗೆ ಅಷ್ಟೇನೂ ಪ್ಯಾಶನ್ ಇರದ ವ್ಯಕ್ತಿ ನಡೆಸಿ ಕೊಡುವ, ಸಾಮಾನ್ಯವಾಗಿ ಅತಿ ಸರಳವಾದ ಪ್ರಶ್ನೆಗಳನ್ನು ಹೊಂದಿರುವ, ಅತಿ ದೊಡ್ಡ ಬಹುಮಾನದ ಆಮಿಶ ಒಡ್ಡುವ, ಕಳಪೆ ಎನ್ನಬಹುದಾದ ಮನರಂಜನೆಯ ಇಂತಹ ರಿಯಾಲಿಟಿ ಕಾರ್ಯಕ್ರಮಗಳನ್ನು ಇಂದು ಸಮಾಜ ಸಂಭ್ರಮಿಸುತ್ತಿದೆ ಎಂದರೆ ಕಲೆ-ಸಾಹಿತ್ಯ-ಸಿನೆಮಾ-ಸಂಗೀತ ಇವುಗಳ ಚೌಕಟ್ಟಿನ ಸಂಸ್ಕೃತಿಯಲ್ಲಿ ಬೌದ್ಧಿಕ ಕುಸಿತ ಉಂಟಾಗಿರುವುದಕ್ಕಲ್ಲವೇ? ಮಾರುಕಟ್ಟೆ ಇರುವುದೇ ಬೌದ್ಧಿಕ ಕುಸಿತದಲ್ಲಿ ಅಲ್ಲವೆ? ಇಂಗ್ಲಿಶ್ ಪದಗುಚ್ಚ ಬಳಸಿ ಹೇಳುವುದಾದರೆ ಇದನ್ನು 'ಡಂಬಿಂಗ್ ಡೌನ್' ಎನ್ನಬಹುದೇನೋ!


ಮಾರುಕಟ್ಟೆ ಒಂದು ಕಡೆ ಬೌದ್ಧಿಕ ಕುಸಿತಕ್ಕೆ ಜನರನ್ನು ಪುಸಲಾಯಿಸುವುದರ ಜೊತೆ ಜೊತೆಗೆ ಸಮಾಜದ ಸಮಸ್ಯೆಗಳನ್ನು ಸಿಂಪತಿಯಿಂದ ನೋಡುವುದನ್ನು ಕೂಡ ಕಲಿಸಿಕೊಡುತ್ತದೆ ಆದರೆ ಸಮಸ್ಯೆಯ ಆಳಕ್ಕೆ ಇಳಿದು ಚಿಂತಿಸುವುದನ್ನು ಕಲಿಸುವುದಿಲ್ಲ. ಇಂದಿನ ತಲೆಮಾರಿನ ಕ್ಲಾಸಿಕ್ ತೊಂದರೆ ಕೂಡ ಇದೆ. ಯಾವ ಐಡಿಯಾಲಜಿಗಳಿಂದ(ಒಳ್ಳೆಯ ಚಿಂತನೆ-ಕಾರ್ಯರೂಪ) ವಿಮುಖರಾಗುತ್ತಿದ್ದೇವೆ ಎಂಬುದರ ಬಗ್ಗೆ ತಮಗೆ ಅರಿವಾಗುತ್ತದೋ ಅಥವಾ ಸಮಾಜದ ಸಮಸ್ಯೆಗಳನ್ನು ಸರಿಪಡಿಸಲು ತಮಗೆ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕೂತಿರುತ್ತಾರೊ ಅಂತಹ ಸಮಸ್ಯೆಗಳನ್ನು ಅಥವಾ ಅದಕ್ಕೆ ಪರಿಹಾರಗಳನ್ನು ಕಥೆಯಲ್ಲೋ-ಸಿನೆಮಾದಲ್ಲೋ-ಟಿವಿ ಶೋಗಳಲ್ಲೋ 'ಅತಿ ಸರಳ'ವಾಗಿ ಪ್ರಸ್ತುತಪಡಿಸಿದಾಕ್ಷಣ ಅದರ ಮೆರಿಟ್ ಬಗ್ಗೆ ಕಿಂಚಿತ್ತೂ ಚಿಂತಿಸದೆ ಬಹುಪರಾಗ್ ಹೇಳಲು ಮುಂದಾಗಿಬಿಡುತ್ತಾರೆ. 'ಸತ್ಯಮೇವ ಜಯತೆ' ಎಂಬ ಕಾರ್ಯಕ್ರಮ ಇದಕ್ಕೆ ಒಳ್ಳೆಯ ಉದಾಹರಣೆ. ಇದು ಕೂಡ 'ಡಂಬಿಗ್ ಡೌನ್'ನ ಭಾಗವೇ!

ಈ ಎರಡು ಅಂಶಗಳನ್ನು ಸಶಕ್ತವಾಗಿ ಬಳಸಿ ಬಿ ಎಂ ಗಿರಿರಾಜ್ 'ಮೈತ್ರಿ' ಎಂಬ ಸಿನೆಮಾ ಮಾಡಿದ್ದಾರೆ. ಈ ಸಿನೆಮಾದ ಬಗ್ಗೆ ಬಹಳಷ್ಟು ಜನ ವಾದಿಸಿರುವಂತೆ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಸಿನೆಮಾ ಇದು ಎಂಬುದು. ಮಕ್ಕಳ ಹಕ್ಕುಗಳ ಬಗೆಗಿನ ಸಮಸ್ಯೆಗಳ ಆಳದ ಚರ್ಚೆ ನಮಗೆ ಸಿನೆಮಾದಲ್ಲಿ ಎಲ್ಲೂ ಕಂಡುಬರುವುದಿಲ್ಲ. ಸಿನೆಮಾದಲ್ಲಿನ ಪಾತ್ರಗಳ ಸೃಷ್ಟಿ ಅತೀ ಸ್ಟೀರಿಯೋಟಿಪಿಕಲ್ ಆಗಿದೆ. ವೇಶ್ಯೆಯನ್ನು ತೋರಿಸುವಾಗ, ಒಬ್ಬಳು ಧಡೂತಿ ಹೆಂಗಸು ತಂಬಾಕು ಕಟ್ಟುತ್ತಾ-ಜಿಗಿಯುತ್ತಾ ಗ್ರಾಹಕನನ್ನು ಬರಮಾಡಿಕೊಳ್ಳುವ ದೃಶ್ಯ ಬಹಳ ಪುರಾತನವಾಯಿತು. ಇವೊತ್ತು ವೇಶ್ಯಾವಾಟಿಕೆಯ ಸ್ವರೂಪವೇ ಬದಲಾಗಿ ಹೋಗಿದೆ. ಇಂದಿನ ದಿನದ ವೇಶ್ಯಾವಾಟಿಕೆ ಚಟುವಟಿಕೆಗಳ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಿದ್ದರೆ, ಸಣ್ಣ ದೃಶ್ಯವಾದರೂ ಅದರ ತೀವ್ರತೆಯೇ ಬೇರೆಯದ್ದಾಗಿರುತ್ತಿತ್ತು. ಹಾಗೆಯೇ ನಿಜ ಜೀವನದಲ್ಲಿ ತಡವಾಗಿ ನಾಯಕ ನಟನಾದ ಪುನೀತ್ ರಾಜಕುಮಾರ್(ಬಾಲ್ಯ ನಟನೆಯನ್ನು ಹೊರತುಪಡಿಸಿ) ಅವರು ಮೂಲದ ಹೆಸರಿನಲ್ಲೇ, ಸಿನೆಮಾ ನಟರಾಗಿಯೇ ಮೈತ್ರಿಯಲ್ಲಿ ಕಾಣಿಸಿಕೊಂಡಿದ್ದಾರೂ, ಅತೀ ಆದರ್ಶ ಪಾತ್ರವನ್ನು ಎಸ್ಟಾಬ್ಲಿಶ್ ಮಾಡುವಲ್ಲಿ ನಿರ್ದೇಶಕ ವಿಫಲರಾಗಿದ್ದಾರೆ. ಇವರು ಕನ್ನಡದ ಧೀಮಂತ ನಟ ಡಾ. ರಾಜಕುಮಾರ್ ಅವರ ಮಗ ಅದಕ್ಕಾಗಿ ಅವರದ್ದು ಉದಾತ್ತ-ಆದರ್ಶ ಚಿಂತನೆಗಳೇ ಇರಬೇಕು ಎಂಬುದನ್ನು ಪ್ರೇಕ್ಷಕನೆ ಅಸ್ಸ್ಯೂಮ್ ಮಾಡಿಕೊಳ್ಳಬೇಕಷ್ಟೆ.. ಆ ನಟನ ನಿಜ ಜೀವನದ ಬಗ್ಗೆ ವ್ಯತಿರಿಕ್ತ ಅಭಿಪ್ರಾಯ ಇರುವವರು ಸಿನೆಮಾ ನೋಡುವುದು ಹೇಗೆ? ಇನ್ನು ರಿಮ್ಯಾಂಡ್ ಹೋಮಿನ ಅಧಿಕಾರಿಯ ಪಾತ್ರವಂತೂ ತುಂಬಾ ಗೋಜಲು ಗೋಜಲಾಗಿದೆ. ಬಹಳ ಆಸಕ್ತಿಯಿಂದ ಆ ಹುದ್ದೆಗೆ ಬಂದವನು, ಬುದ್ಧಿ ಜೀವಿಯಂತೆ ಮಾತನಾಡುವವನು ರಿಮ್ಯಾಂಡ್ ಹೋಮಿನ ಮಕ್ಕಳ ಜೊತೆಗಿನ ನಡತೆಯಲ್ಲಿ ಅವುಗಳನ್ನೆಲ್ಲಾ ಮರೆತಂತೆ ವರ್ತಿಸುತ್ತಾನೆ. ಇಂತಹ ಪಾತ್ರಗಳನ್ನು ಕಾಂಪ್ರಹೆಂಡ್ ಮಾಡಿಕೊಳ್ಳುವುದು ಮನರಂಜನೆಯಿಂದಾಚೆಗೆ ಯೋಚಿಸುವ ಪ್ರೇಕ್ಷಕನಿಗೆ ಕಷ್ಟದಾಯಕವೇ! ಇನ್ನು ಸಿನೆಮಾದ ಮುಖ್ಯ ಪಾತ್ರ, ಸ್ಲಂನಲ್ಲಿ ಜೀವಿಸುವ, ಮಾಡದ ಅಪರಾಧಕ್ಕೆ ರಿಮ್ಯಾಂಡ್ ಹೋಮ್ ಸೇರುವ ಸಣ್ಣ ಹುಡುಗನದ್ದೂ ಕೂಡ ವಯಸ್ಸಿಗೆ ಮೀರಿದ ಪ್ರಭುದ್ಧ ಪಾತ್ರವನ್ನು ಸೃಷ್ಟಿಸಿ ಎಲ್ಲೋ ವಾಸ್ತವಕ್ಕೆ ದೂರವಾದುದ್ದನ್ನು ಚಿತ್ರಿಸಿದ್ದಾರೆ ಗಿರಿರಾಜ್. > > > ಸಿನೆಮಾಲ್ಲಿ ತೋರಿಸುವ ಯಾವ ಸಮಸ್ಯೆಗಳು ಎಲ್ಲೂ ಅಭಿವೃದ್ಧಿ ಕಾಣುವುದಿಲ್ಲ. ರಿಮ್ಯಾಂಡ್ ಹೋಮ್ ಎನ್ನುವುದಾದರೆ ಅಲ್ಲಿನ ಅಧಿಕಾರಿ ಮಕ್ಕಳನ್ನು ಹೊಡೆಯುವುದು ಬಿಟ್ಟರೆ ಅಲ್ಲಿನ ಬೇರೆ ಯಾವ ಸಮಸ್ಯೆಗಳೂ ಅಲ್ಲಿ ನಮಗೆ ದಟ್ಟವಾಗಿ ದೃಶ್ಯದ ಮೂಲಕ ಕಾಣಸಿಗುವುದಿಲ್ಲ. ಮತ್ತೆ ರಿಮ್ಯಾಂಡ್ ಹೋಮ್ ನ ಎಶ್ಟಾಬ್ಲಿಶ್ಮೆಂಟ್(ತೆರೆದ ಗೇಟಿನಿಂದ ಸುಲಭವಾಗಿ ನುಗ್ಗಿಬಿಡುವ ಪೊಲೀಸ್ ಜೀಪು ನೆನಪಿಸಿಕೊಳ್ಳಿ) ಬಹಳ ಪೇಲವವಾಗಿದೆ.'ಡಾರ್ಕ್ ರೂಮ್' ಪ್ರೇಕ್ಷಕರನ್ನು ಅಷ್ಟು ಕನ್ವಿನ್ಸ್ ಮಾಡವುದಿಲ್ಲ. ಹಾಗೆಯೆ ಮಕ್ಕಳು ವೈಟನರ್ ಅನ್ನು ಬಟ್ಟ್ಗೆಗೆ ಬಳಿದು ಮೂಸಿ ನೋಡುವ ಒಂದು ದೃಶ್ಯ ಬಂದು ಹೋಗುತ್ತದೆ. ಅದರ ಬಗ್ಗೆ ಕೆಲವು ಸಂಭಾಷಣೆಗಳೂ! ಇಂದು ಹಲವು ಕಡು ಬಡಮಕ್ಕಳನ್ನು ಇನ್ನಿಲ್ಲದಂತೆ ಕಾಡುತ್ತಿರುವ ವ್ಯಸನ ಇದಾಗಿದ್ದು, ಸಿನೆಮಾದಲ್ಲಿ ಅದರ ತೀವ್ರತೆಯೇ ಕಾಣುವುದಿಲ್ಲ. ಹಾಗೂ ಕೋಟ್ಯಾಧಿಪತಿ ಅಂತಹ ಕಾರ್ಯಕ್ರಮದಿಂದ ರಿಮ್ಯಾಂಡ್ ಹೋಮಿನಂತಹ ಸಮಾಜಿಕ ಪಿಡುಗಿಗೆ ಪರಿಹಾರ ಸಿಗುವಂತೆ ಮಾಡುವುದು ಬಹಳ ಹಾಸ್ಯಾಸ್ಪದ.

ಇಡೀ ಸಿನೆಮಾದಲ್ಲಿ ಒಂದು ರೀತಿಯ ಸಂಚಲನ ಅಥವಾ ಒಂದು ರೀತಿಯ ಪ್ರೌಢ ಚಿಂತನೆ ಸಿಗುವುದು, ಮೋಹನ್ ಲಾಲ್ ಅವರು ಸಿನೆಮಾ ಒಳಗೆ ಹೊಕ್ಕಿದಾಗ. ಸಿನೆಮಾದಲ್ಲಿ ಅಂತಹ ಪ್ರಬುದ್ಧತೆ ಎಲ್ಲಾದರೂ ಕಂಡರೆ, ಮೋಹನ್ ಲಾಲ್ ಅವರು ಪುನೀತ್ ರಾಜಕುಮಾರ್ ಅವರಿಗೆ ತಂದಿಡುವ ಮಾರಲ್ ಡೈಲೆಮಾದಲ್ಲಿ ಹಾಗು ಪುತ್ರಶೋಕದ ದೃಶ್ಯಾವಳಿಗಳನ್ನು ಮೋಹನ್ ಲಾಲ್ ಲೀಲಾಜಾಲವಾಗಿ ನಿರ್ವಹಿಸುವ ಅಭಿನಯದಲ್ಲಿ.

ಒಳ್ಳೆಯ ಸಂದೇಶ ಇದ್ದಾಕ್ಷಣ ಅದು ಒಳ್ಳೆಯ ಕಥೆ ಆಗಬೇಕಿಲ್ಲ. ಒಳ್ಳೆಯ ಕಥೆ ಇದ್ದಾಕ್ಷಣ ಒಳ್ಳೆಯ ಸಿನೆಮಾ ಆಗಬೇಕಿಲ್ಲ. ಮನುಷ್ಯ ಒಳ್ಳೆಯವನಾದಾಕ್ಷಣ ಅವನು ಮಾಡಿದ್ದೆಲ್ಲವನ್ನು ಒಪ್ಪಿ ಹೊಗಳಿ ಹಾಡಬೇಕಿಲ್ಲ. ಸಂದೇಶ, ಕಥೆ, ಪಾತ್ರಗಳು, ದೃಶ್ಯ ಇವೆಲ್ಲಾ ವಿಭಿನ್ನ. ಇವುಗಳ ಸಂಕೀರ್ಣತೆಯನ್ನು ಮರೆತಾಗ ಎಲ್ಲವೂ ಅದ್ಭುತವಾಗಿ ಕಾಣುತ್ತದೆ. ಇಂತಹ ಸಿನೆಮಾಗಳನ್ನು ಸಂಭ್ರಮಿಸುವ ಭರದಲ್ಲಿ ಇದು ಕಮರ್ಷಿಯಲ್ ಸಿನೆಮಾ ಅಲ್ಲ, ಮೆಸೇಜ್ ಹೇಳುವ ಕಲಾತ್ಮಕ ಸಿನೆಮಾ ಎಂಬಿತ್ಯಾದಿಯಾಗಿ ಹೊಗಳಿ ಹಾಡುವುದರಿಂದ ಅಪಾಯವೇ ಹೆಚ್ಚು-ಕಲೆಯಾಗಿ ಸಿನೆಮಾ ಮಾಧ್ಯಮಕ್ಕೂ ಹಾಗೂ ಇಂತಹ ಸಿನೆಮಾಗಳು ತೋರಿಸಲು ಪ್ರಯತ್ನಿಸುವ ಸಾಮಾಜಿಕ ಕಳಕಳಿಗೂ!

ಎಲ್ಲ ಚಿತ್ರನಿರ್ದೇಶಕರಿಗೂ ಒಂದು ಉದ್ದೇಶ-ಆಸೆ ಇರುತ್ತದೇನೋ! ಚಲನಚಿತ್ರರಂಗದ ದಿಗ್ಗಜರ ಜೊತೆ ಕೆಲಸ ಮಾಡಬೇಕು. ಒಳ್ಳೆಯ ಕಥೆ ಹೇಳಬೇಕು. ರಂಜಿಸಬೇಕು. ತಮ್ಮ ಸಾಮಾಜಿಕ ಕಳಕಳಿಯನ್ನು ಸಿನೆಮಾ ಮೂಲಕ ವ್ಯಕ್ತಪಡಿಸಬೇಕು. ಚಲನಚಿತ್ರ ರಂಗದ ಕುಟುಂಬವೊಂದನ್ನು ಹಾಡಿ ಹೊಗಳಬೇಕು. ಸಮಾಜವನ್ನು ತಿದ್ದಬೇಕು. ತನ್ನ ಹೊಟ್ಟೆಪಾಡು ಇತ್ಯಾದಿ. ಈ ಸಿನೆಮಾ ಇವುಗಳ "ಮೈತ್ರಿ"ಯೇ ಎಂದೆನಿಸದೆ ಇರಲಾರದು. ಆದರೆ ಇವ್ಯಾವುದಕ್ಕೂ ಸರಿಯಾದ ನ್ಯಾಯ ಒದಗಿದಂತೆ ಕಾಣುವುದಿಲ್ಲ. ಸಾಮಾಜಿಕ ಕಳಕಳಿ ಸಿನೆಮಾದಲ್ಲಿ ಸಂಭಾಳಿಸುವ ಪ್ರಯತ್ನ ದೊಡ್ಡದು. ಕೆಲವು ತಿಂಗಳ ಹಿಂದೆ ತೆರೆ ಕಂಡ ಅಂಬರೀಶ ಸಿನೆಮಾದಲ್ಲಿ ಭೂ ಮಾಫಿಯಾ ವಿರುದ್ಧದ ಕಥೆ ಹೆಣೆದಿದ್ದರೂ ಹಿರೋಯಿಸಂನಿಂದ ಅದು ಮರೆಮಾಚಿತ್ತು. ಹಾಗೆ ನೋಡಿದರೆ ಬಿಡುಗಡೆ ಕಾಣುವ ಯಾವ ಸಿನೆಮಾದಲ್ಲು ಹುಡುಕಿದರೆ ಸಾಮಾಜಿಕ ಕಳಕಳಿ ಕಂಡೇ ಕಂಡೀತು. ಆದರೆ ಅದನ್ನು ಪ್ರೇಕ್ಷಕನಿಗೆ ದಾಟಿಸುವ ಜಾಣ್ಮೆ, ಪ್ರೇಕ್ಷಕನನ್ನು ಚಿಂತನೆಗೆ ಹಚ್ಚಿಸುವಂತೆ ಮಾಡುವ ಪ್ರೌಢಿಮೆ ಬಹಳ ತ್ರಾಸದಾಯಕ. ಈ ಸಿನೆಮಾದಲ್ಲೂ ಕೂಡ ಹೊಡೆದಾಟದ ಬಡಿದಾಟದ ಹೀರೋಯಿಸಮ್ ಇಲ್ಲದೆ ಹೋದರು ಅತೀ ಆದರ್ಶದ ಹೀರೋಯಿಸಮ್ ಚಲನಚಿತ್ರ ಹೇಳಬೇಕೆಂದಿರುವ ಸಂದೇಶವನ್ನು ಮರೆಮಾಚುತ್ತದೆ. ಹಲವಾರು ಸಾಮಾಜಿಕ ಕಳಕಳಿಗಳನ್ನು ಸಿನೆಮಾದಲ್ಲಿ ತುರುಕುವ ಪ್ರಯತ್ನದಿಂದ ಮನರಂಜನೆಗೆ ಅಡ್ಡ ಬಂದಂತಿದೆ. ವಿಪರೀತ ಸಂಭಾಷಣೆ ಮೌನವನ್ನು ಬೇಡುತ್ತದೆ.  ಕುಸಿದ ಬೌದ್ಧಿಕತೆಯನ್ನು ಸಂಭ್ರಮಿಸುವ ಕಾರ್ಯಕ್ರಮವನ್ನು ಸಮಾಜ ಸಂಭ್ರಮಿಸುತ್ತದೆ. ಇನ್ನು ಅಂತಹ ಕಾರ್ಯಕ್ರಮವನ್ನೇ ಸಿನೆಮಾದಲ್ಲಿ ವಿಜೃಂಭಿಸಿದಾಗ ಆ ಸಿನೆಮಾವನ್ನು ಕೂಡ ಅಂತಹ ಸಮಾಜ ಸಂಭ್ರಮಿಸುವುದರಲ್ಲಿ ಯಾವುದೇ ಆಶ್ಚರ್ಯ ಪಡುವ ಅಗತ್ಯವಿಲ್ಲವೇನೋ! ಕನಿಷ್ಟ ಹುಸಿ ಸಂಭ್ರಮವಂತೂ ಇದ್ದೇ ಇರುತ್ತದೆ. ಸಿನೆಮಾ ಸೋತರೆ ಅದು ಬೇರೆ ಕಾರಣಗಳಿಂದ ಇರಬಹುದು! 


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು