ದೃಶ್ಯಕ್ಕೊಂದು ನುಡಿಗಟ್ಟು

ಮೈತ್ರಿ : ಪರ್ಯಾಯ ಅಧಿಕಾರ ಕೇಂದ್ರದ ವಿಜೃಂಭಣೆ

Mythri Review'ಮೈತ್ರಿ' ಚಿತ್ರದ ವಿಮರ್ಶೆಗೆ ತೊಡಗುವ ಮುನ್ನ ನಮ್ಮ ಮುಖ್ಯವಾಹಿನಿಯಲ್ಲಿ ಸಿನಿಮಾವೊಂದರ ಕುರಿತು ನಡೆಯುವ ಚರ್ಚೆಯ ಕುತೂಹಲಕರವಾದ ಮಗ್ಗುಲು ನಿಮ್ಮ ಗಮನದಲ್ಲಿರಲಿ. ಒಂದು ಚಿತ್ರದ ಟ್ರೇಲರ್, ಪೋಸ್ಟರ್ , ಹಾಡು,ಬಿಡುಗಡೆಗೆ ಮುನ್ನವೇ ಮಾಧ್ಯಮಗಳಲ್ಲಿ ಕೇಳಿ ಬರುವ ಕಥಾ ಹಂದರದ "ಸ್ಕೂಪ್"ಗಳಿಂದ ಆ ಚಿತ್ರ ಇತರ ಭಾಷೆಯ ಇನ್ನ್ಯಾವ ಚಿತ್ರದ ರಿಮೇಕ್, ಇಲ್ಲವೇ ಯಾವ ಚಿತ್ರದಿಂದ ಕದ್ದಿರುವಂಥದ್ದು ಎಂದು ಪತ್ತೇದಾರಿ ನಡೆಸುವುದು ಪತ್ರಕರ್ತರಾದಿಯಾಗಿ ಹಲವರ ಹವ್ಯಾಸ. ಚಿತ್ರವೊಂದನ್ನು ಅದರ ಬಿಡುಗಡೆಗೆ ಮುನ್ನ, ಬಿಡುಗಡೆಯ ನಂತರ ಈ ಬಗೆಯ ಅನುಮಾನದಿಂದ ಎದುರುಗುಳ್ಳುವುದು, ಚಿತ್ರದ ನಿರ್ದೇಶಕನನ್ನು ಕಳ್ಳನೆಂಬಂತೆ ಕಾಣುವುದು ನಮ್ಮ ಸಾಂಸ್ಕೃತಿಕ ವಲಯದ ಅನಾರೋಗ್ಯಕರ ಸ್ಥಿತಿಯನ್ನು ತೋರುತ್ತದೆ.

ಇದಕ್ಕೆ  ಚಿತ್ರ ನಿರ್ದೇಶಕ, ನಿರ್ಮಾಪಕರ ಅಪ್ರಾಮಾಣಿಕತೆ ಎಷ್ಟು ಕಾರಣವೋ ಪ್ರೇಕ್ಷಕರು, ಪತ್ರಕರ್ತರ ಅವಾಸ್ತವಿಕ ನಿರೀಕ್ಷೆಯೂ ಅಷ್ಟೇ ಕಾರಣ. ಪ್ರೇಕ್ಷಕರು, ಸಿನಿಮಾ ಪತ್ರಕರ್ತರು ತಿಳಿಯಬೇಕಾದ ಬಹುಮುಖ್ಯ ಸಂಗತಿಯೆಂದರೆ ಕ್ರಿಯಾತ್ಮಕ ಅಭಿವ್ಯಕ್ತಿ ಬಹುವೇಳೆ ಇತರೆ ಅನೇಕ ಕ್ರಿಯಾತ್ಮಕ ಕೃತಿಗಳ ನೆರಳಿನಲ್ಲೇ ಅರಳುತ್ತದೆ. ನೆಲದ ಮೇಲೆ ಕಾಣುವ ಹಸಿರು ಗಿಡದ ಕಾಂಡ ನೆಲದೊಳಗೆ ಅಸಂಖ್ಯಾತ ಬೇರುಗಳನ್ನು ಬಿಟ್ಟಿರುತ್ತದೆ. ಕ್ರಿಯಾತ್ಮಕ ಕೃತಿಯೂ ಸಹ ತಾನು ಕಣ್ಣು ಬಿಡುವ ಪರಿಸರದಲ್ಲಿನ ಅಸಂಖ್ಯಾತ ಮೂಲಗಳಿಂದ ಸ್ಪೂರ್ತಿ ಪಡೆಯಬೇಕು. ಪ್ರೇರಣೆ, ಸ್ಪೂರ್ತಿಗಳಿದ್ದ ಮಾತ್ರಕ್ಕೆ ಚಿತ್ರವೊಂದರಲ್ಲಿ ತೊಡಗಿಕೊಂಡ ಕ್ರಿಯಾತ್ಮಕ ಮನಸ್ಸು ಭ್ರಷ್ಟವಾಗುವುದಿಲ್ಲ. ಸ್ಪೂರ್ತಿಗೂ, ಅನುಕರಣೆಗೂ , ನಿರ್ಲಜ್ಜ ಕೃತಿಚೌರ್ಯಕ್ಕೂ ನಡುವಿನ ಗೆರೆ ನಿಚ್ಚಳವಾಗಿರುತ್ತದೆ. ಅದನ್ನು ಗುರುತಿಸುವ ಕೆಲಸವಾದರೆ 'ಗಾಳಿ ಪಟ' ಚಿತ್ರದ ಹಂದಿ ಬೇಟೆ ಕುರಿತು ಕಿವಿಗೆ ಬಿದ್ದೊಡನೆ ಆ ಚಿತ್ರಕ್ಕೆ ಯಾವ ಕೋನದಿಂದಲೂ ಸಂಬಂಧಪಡದ ಹಾಲಿವುಡ್ಡಿನ 'ಅಪೋ ಕ್ಯಾಲಿಪ್ಸೋ' ನೆನಪಾಗುವುದಿಲ್ಲ; 'ದೇವರ ನಾಡಿನಲ್ಲಿ' ಶೀರ್ಷಿಕೆ ಓದಿದೊಡನೆ 'ಸಿಟಿ ಆಫ್ ಗಾಡ್' ಎಂಬ ಪೂರ್ಚುಗೀಸ್ ಚಿತ್ರ ಕಣ್ಣೆದುರು ಬರುವುದಿಲ್ಲ. ಒಂದೊಮ್ಮೆ ಸಾಮ್ಯತೆಗಳು ಗೋಚರವಾದರೂ ಅದರಿಂದ ನಮ್ಮೆದುರು ಇರುವ ಕೃತಿಯ ಕ್ರಿಯಾತ್ಮಕ ಮೌಲ್ಯ ಕುಂಠಿತವಾಗುವುದಿಲ್ಲ.

ಕ್ರಿಯಾತ್ಮಕ ಕೃತಿಯೊಂದರ ಸ್ಪೂರ್ತಿಯನ್ನು ಗುರುತಿಸುವ ಪ್ರಬುದ್ಧತೆ ಪ್ರೇಕ್ಷಕರಲ್ಲಿ ಅಪೇಕ್ಷಿಸಿದರೆ, ತನ್ನ ಚಿತ್ರಕ್ಕೆ ಸ್ಪೂರ್ತಿಯಾದ ಚಿತ್ರಗಳನ್ನು ಪ್ರಾಮಾಣಿಕವಾಗಿ ನೆನಪಿಸಿಕೊಳ್ಳುವ ಬದ್ಧತೆಯನ್ನು ನಿರ್ದೇಶಕರಲ್ಲಿ ಕಾಣಬಯಸುತ್ತೇನೆ. 'ಆಡುಕಳಂ' ಚಿತ್ರದ ನಿರ್ದೇಶಕ ಆ ಚಿತ್ರವನ್ನು ನಿರ್ಮಿಸುವಲ್ಲಿ ತನಗೆ ಸ್ಪೂರ್ತಿಯಾದ ಇತರೆ ಸಿನೆಮಾ, ಪುಸ್ತಕಗಳನ್ನು ನೆನಪಿಸಿಕೊಳ್ಳುತ್ತಾರೆ. ಇಂತಹ ನಡವಳಿಕೆ ಕೇವಲ ನಿರ್ದೇಶಕನ ಬದ್ಧತೆಯನ್ನು ಸೂಚಿಸದೆ ನಿರ್ದೇಶಕನಿಗೆ ತಾನು ಕೆಲಸ ಮಾಡುತ್ತಿರುವ ಮಾಧ್ಯಮದಲ್ಲಿ ಬೆವರು ಹರಿಸುತ್ತಿರುವ ಇತರೆ ಕ್ರಿಯಾತ್ಮಕ ಮನಸ್ಸುಗಳ ಕುರಿತು ಇರುವ ಗೌರವವನ್ನೂ ತೋರುತ್ತದೆ. ನಿರ್ದೇಶಕನಲ್ಲಿ ವೈಯಕ್ತಿಕವಾಗಿ ಇಂತಹ ನಡವಳಿಕೆ ಇದ್ದರೂ ಅದು ವ್ಯಕ್ತವಾಗುವುದಕ್ಕೆ ಸೂಕ್ತ ವಾತಾವರಣವೂ‌ ಇರಬೇಕೆನ್ನುವುದನ್ನು ಅಲ್ಲಗಳೆಯಲಾಗದು.

ಈ ಪೀಠಿಕೆಗೆ ಕಾರಣ ಗಿರಿರಾಜ್.ಬಿ.ಎಂ ನಿರ್ದೇಶನದ "ಮೈತ್ರಿ" ಡ್ಯಾನಿ ಬಾಯ್ಲ್ ನಿರ್ದೇಶಿಸಿದ "ಸ್ಲಂ ಡಾಗ್ ಮಿಲೇನಿಯರ್" ಚಿತ್ರದಿಂದ ಹಲವು ಕ್ರಿಯಾತ್ಮಕ ಅಂಶಗಳನ್ನು ಹೀರಿಕೊಂಡಿದೆ. ಆದರೆ ಆ ಚಿತ್ರದ ಅಗ್ಗದ ನಕಲು ಆಗದಂತೆ ತನ್ನ ಕಾಲ ಮೇಲೆ ತಾನು ನಿಂತಿದೆ. ಇದಕ್ಕೆ ನಿರ್ದೇಶಕರ ಸೃಜನಶೀಲತೆ ಎಷ್ಟು ಕಾರಣವೋ ಅಷ್ಟೇ ಮುಖ್ಯವಾದ ಕಾರಣ ಜಾಗತೀಕರಣದ ಒಂದು ವೈಚಿತ್ರ್ಯ. ಅಮೇರಿಕಾದಲ್ಲಿನ ಬಿಗ್ ಬ್ರದರ್, ಹಿಂದಿಯಲ್ಲಿ ಬಿಗ್ ಬಾಸ್ ಆಗಿ ಅಲ್ಲಿಂದ ಮುಂದೆ ಹರಿದು ಕನ್ನಡದ 'ಹೌದು ಸ್ವಾಮಿ' ಬಿಗ್ ಬಾಸ್ ಆಗುವುದು, ಅದರಂತೆ ಅಮೇರಿಕಾದ 'ಹು ವಾಂಟ್ಸ್ ಟು ಬಿ ಎ ಮಿಲೇನಿಯರ್' ಗೇಮ್ ಶೋ, ಕೌನ್ ಬನೇಗಾ ಕರೋಡ್ ಪತಿ ಯಾಗಿ, ಕನ್ನಡದ ಕೋಟ್ಯಾಧಿಪತಿಯಾಗುವುದು - ಈ ಪ್ರಕ್ರಿಯೆ ಇರದೆ ಹೋಗಿದ್ದರೆ ಕಂಡಿತಾ "ಮೈತ್ರಿ"ಗೆ ತನ್ನ ಕಾಲ ಮೇಲೆ ತಾನು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ವಿಪರ್ಯಾಸವೆನಿಸಿದರೂ ಇದು ಸತ್ಯ!

ಸರಳವಾಗಿ ಹೇಳಬೇಕೆಂದರೆ "ಮೈತ್ರಿ"‌ಸ್ಲಂ ಡಾಗ್ ಮಿಲೇನಿಯರ್ ಚಿತ್ರದ ಚೌಕಟ್ಟನ್ನೇ ಹೊಂದಿದೆ. ಸ್ಲಂನಲ್ಲಿ ಹುಟ್ಟಿ ಬೆಳೆದ ಹುಡುಗನೊಬ್ಬ "ಬುದ್ದಿಮತ್ತೆಯನ್ನು ಒರೆಗೆ ಹಚ್ಚುವ" ಗೇಮ್ ಶೋವೊಂದರಲ್ಲಿ ಗೆಲ್ಲುವುದರ ಮೂಲಕ ಕೋಟ್ಯಾಧಿಪತಿಯಾಗುವುದು ಎರಡೂ ಚಿತ್ರಗಳ ಕಥಾಹಂದರ. ಹಾಗೆ ನೋಡಿದರೆ ಈ ಬಗೆಯ rags to riches ಕಥಾಹಂದರ ಹೊಸತೂ ಅಲ್ಲ. ಚಿತ್ರಕತೆಯಲ್ಲೂ ಮೈತ್ರಿ ಸ್ಲಂ ಡಾಗ್ ನ ನೆರಳಿನಲ್ಲೇ ಅರಳಿಕೊಳ್ಳುತ್ತದೆ: ಚಿತ್ರ ಪ್ರಾರಂಭವಾಗುವುದು ಪೊಲೀಸ್ ಸ್ಲಂ ನ ಹುಡುಗನನ್ನು ಅಟ್ಟಿಕೊಂಡು ಬರುವುದರಿಂದ. ಸ್ಲಂನಿಂದ ಹೊರಗೆ ಬಂದ ಬಾಲಕರನ್ನು ಕಾಡು ಪ್ರಾಣಿಯನ್ನು ಬೆನ್ನಟ್ಟಿದಂತೆ ಪೊಲೀಸರು ಅಟ್ಟಿಸಿಕೊಂಡು ಬರುವುದು, ಸ್ಲಂ ಹೊಕ್ಕೊಡನೆ ಅದರ ಇಂಚಿಂಚನ್ನು ಬಲ್ಲವರಂತೆ ಮಕ್ಕಳು ನುಸುಳಿ ಓಡುವುದು ಎರಡೂ ಚಿತ್ರದಲ್ಲಿರುವ ಸಾಮ್ಯತೆ. ಆದರೆ ಡ್ಯಾನಿ ಬಾಯ್ಲ್  ಚಿತ್ರದಲ್ಲಿ ಪೊಲೀಸರು "ಪ್ರೈವೇಟ್ ಪ್ರಾಪರ್ಟಿ" ಯಿಂದ ಆಟವಾಡುವ ಮಕ್ಕಳನ್ನು ಓಡಿಸುತ್ತಾರೆ. ಆ ಒಂದು ಸೂಕ್ಷ್ಮ ವಿವರದಲ್ಲಿ ಚಿತ್ರಕ್ಕೆ ಶಕ್ತವಾದ ರಾಜಕೀಯ ನೆಲೆಯೂ ಸಿಕ್ಕಿಬಿಡುತ್ತದೆ.

ಸ್ಲಂ ಡಾಗ್ ನೊಂದಿಗಿನ ಹೋಲಿಕೆಯನ್ನು ಮುಂದುವರೆಸುವುದಾದರೆ, ಸ್ಲಂ ಡಾಗ್ ನ ಧಾರಾವಿ ಸ್ಲಮ್ಮಿಗೆ ಅಮಿತಾಭ್ ಬಚ್ಚನ್ ಭೇಟಿ ಕೊಡುತ್ತಾನೆ. ಆದರೆ ಅಮಿತಾಭ್ ತೆರೆಯ ಮೇಲೆ ಕಾಣಿಸುವುದಿಲ್ಲ. ಏಕೆಂದರೆ ಚಿತ್ರಕತೆಗೆ ಅಗತ್ಯವಿರುವುದು ಅಮಿತಾಭ್ ನ "ಇಮೇಜ್" ಹೊರತು ಭೌತಿಕವಾದ ಅಮಿತಾಭ್ ಅಲ್ಲ. ಹೀಗಾಗಿ ನಮಗೆ ಬಾಲಕ ಜಮಾಲ್ ಮಲಿಕ್ ನ ಹುಚ್ಚು ಅಭಿಮಾನ, ಆರಾಧನೆ ದಟ್ಟವಾಗಿ ಕಾಣುತ್ತದೆಯೇ ಹೊರತು ಅಮಿತಾಭ್ ನ ಪ್ರಭಾವಳಿ ಕಣ್ಣು ಕುಕ್ಕಿಸುವುದಿಲ್ಲ. ಈ ನೆಲೆಯಲ್ಲಿ "ಮೈತ್ರಿ" ತನ್ನ ನಿಲುವಿನೊಂದಿಗೆ ಬಹುದೊಡ್ಡ ರಾಜಿ ಮಾಡಿಕೊಂಡಿದೆ. ಪ್ರಖ್ಯಾತ ನಟನೊಬ್ಬನ "ಇಮೇಜ್", ಆತನ ಭೌತಿಕ ಉಪಸ್ಥಿತಿ, ಸಿದ್ಧರಾಮನ ಕುರುಡು ಅಭಿಮಾನ ಇವುಗಳನ್ನು ಅನೈತಿಕ ಗೋಂದು ಸುರಿದು ಅಂಟಿಸುವುದರ ಮೂಲಕ ನಿರ್ದೇಶಕ ಪ್ರೇಕ್ಷಕರನ್ನು ಮ್ಯಾನಿಪ್ಯುಲೇಟ್ ಮಾಡುತ್ತಾರೆ. ಮುಖ್ಯವಾಹಿನಿಯ ಚಿತ್ರ ವಿಮರ್ಶೆಗಳಲ್ಲಿ ಪುನೀತ್ ರಾಜ್ ಕುಮಾರ್ ನಿಜ ಜೀವನದ ಪುನೀತ್ ರಾಜ್ ಕುಮಾರ್ ಆಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಅರ್ಥೈಸಿರುವುದು ಈ ಕಾರಣಕ್ಕಾಗಿಯೇ ಅಪಹಾಸ್ಯಕ್ಕೀಡಾಗುತ್ತದೆ. ಪುನೀತ್ ರಾಜ್ ಕುಮಾರ್ ಅಸ್ತಿತ್ವದಲ್ಲಿರುವ, ನಮ್ಮನಿಮ್ಮಂತೆ ಹಸಿವು, ಬಾಯಾರಿಕೆ, ದಣಿವು, ಬೆವರು ಇರುವ ಮನುಷ್ಯ (ಸ್ಲಂ ಡಾಗ್ ನಲ್ಲಿ ಅನಿಲ್ ಕಪೂರ್ ಟಾಯ್ಲೆಟಿನಲ್ಲಿ ಮೂತ್ರ ಮಾಡುವ ದೃಶ್ಯ 'ಇಮೇಜ್' ಒಡೆಯುವ ಉದ್ದೇಶ ಹೊಂದಿದಂತೆ ಈ ಸಂದರ್ಭದಲ್ಲಿ ಭಾಸವಾಗುತ್ತದೆ). ಆದರೆ "ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್" ಒಂದು ಸೃಷ್ಟಿ, ಅದು ಕೇವಲ ಒಂದು ಇಮೇಜ್. ಈ ಎರಡರ ನಡುವೆ ವ್ಯತ್ಯಾಸ ಗುರುತಿಸದಷ್ಟು ಗಿರಿರಾಜ್ ಸಂವೇದನೆ ಇಲ್ಲದವರಲ್ಲ ಎನ್ನುವ ನಂಬಿಕೆ ನನಗಿದೆ. ಆದರೆ ಚಿತ್ರದಲ್ಲಿ ಅವರ ಸಂವೇದನೆ ಕಾಣೆಯಾಗಿದೆ. ಹೀಗಾಗಿಯೇ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ "ಬಡವರ ಏಳಿಗೆ, ಕಷ್ಟದಲ್ಲಿರುವವರ ಉದ್ಧಾರ, ಸಾಮಾಜಿಕ ಕಳಕಳಿ, ಹುಟ್ಟುಹಬ್ಬ ಸಂಭ್ರಮಾಚರಣೆಗಳ ನಿರರ್ಥಕತೆ" ಗಳಲ್ಲಿಯೇ ಮುಳುಗಿ ಹೋಗುತ್ತಾರೆ. ಸ್ಲಂ ನಲ್ಲೇ ಬೆಳೆದು, ಅಲ್ಲಿನ ಬದುಕನ್ನು ಅನುಭವಿಸಿ, ಅಲ್ಲಿನ ಅವಕಾಶ ಹಾಗೂ ಅಪಾಯಗಳಿಗೆ ಎದುರಾಗಿ, ಕೆಪಿಎಸ್ ಪೂರೈಸಿ ರಿಮ್ಯಾಂಡ್ ಹೋಮ್ ನ ವಾರ್ಡನ್ ಆದ ಅತುಲ್ ಕುಲಕರ್ಣಿಗೆ ಬಾಲಾಪರಾಧಿಗಳ ಮನಸ್ಥಿತಿ ಕುರಿತು ಬುದ್ಧಿಮಾತೂ ಹೇಳುತ್ತಾರೆ. ಪುನೀತ್ ರಾಜ್ ಕುಮಾರ್ "ಪಾತ್ರ" ದ ಹಿನ್ನೆಲೆ ಗಮನಿಸಿ: ಪುನೀತ್ ಚಿಕ್ಕ ವಯಸ್ಸಿನಲ್ಲೇ ಶಾಲೆ ಬಿಟ್ಟವರು, ಖಾಸಗಿ ಶಿಕ್ಷಕರಿಂದ ಶಿಕ್ಷಣ ಪಡೆದು ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೊಮ ಪಡೆದವರು. ಅನಂತರ ನಾಯಕ ನಟರಾಗುವ ಮುನ್ನ ಮೈನಿಂಗ್ ಬಿಸಿನೆಸ್ ನಲ್ಲಿ ತೊಡಗಿಕೊಂಡವರು. ಈ ಹಿನ್ನೆಲೆಯ ಪಾತ್ರ ಬಾಲಾಪರಾಧಿಗಳ ಸೈಕಾಲಜಿ ಅರಿತುಕೊಂಡ, ಕೆಪಿಎಸ್ ಪಾಸು ಮಾಡಿದ ವಾರ್ಡನ್ "ಕಣ್ಣು ತೆರೆಸುವುದು" ಹಿರೋಯಿಸಂನ ಭಾಗವೇ.

ಇಷ್ಟು ಹೇಳಿದ ಮಾತ್ರಕ್ಕೆ ಸ್ಲಂ ಡಾಗ್ ಮಿಲೇನಿಯರ್ ಅತ್ಯುತ್ತಮ ಚಿತ್ರ ಕನ್ನಡದ ಚಿತ್ರಕ್ಕೆ ಅದಕ್ಕೆ ಸಾಟಿಯಲ್ಲ ಎನ್ನುವ ನಿರ್ಧಾರಕ್ಕೆ ಬರಬೇಕಿಲ್ಲ. ಸ್ಲಂ ಡಾಗ್ ಮಿಲೇನಿಯರ್ ನಕಲಿ ಅಥೆಂಟಿಸಿಟಿಯನ್ನು ಹೊಂದಿರುವ ಅಂತರಾಷ್ಟ್ರೀಯ ಸಿನೆಮ, ಅದನ್ನು ಇಲ್ಲಿ ಪ್ರಸ್ತಾಪಿಸಿರುವುದು "ಮೈತ್ರಿ" ಚಿತ್ರವನ್ನು ಅವಲೋಕಿಸುವ ಸೀಮಿತ ಉದ್ದೇಶದಿಂದ.

ಚಿತ್ರದ ಮತ್ತೊಂದು ನಿಲುವು ಅಪಾಯಕಾರಿಯಾಗಿ ಕಾಣುತ್ತದೆ. ಚಿತ್ರದ ಜಗತ್ತಿನಲ್ಲಿ ಸಾಂಪ್ರದಾಯಿಕ ಅಧಿಕಾರ ಕೇಂದ್ರಗಳ್ಯಾವೂ ನಂಬಿಕೆ ಉಳಿಸಿಕೊಂಡಿಲ್ಲ. ಪೊಲೀಸ್ ವ್ಯವಸ್ಥೆ ಭ್ರಷ್ಟವಾಗಿದೆ, ರಾಜಕೀಯ ವ್ಯವಸ್ಥೆ ಭ್ರಷ್ಟವಾಗಿದೆ. ಅತುಲ್ ಕುಲಕರ್ಣಿ ಪಾತ್ರ ಪ್ರತಿನಿಧಿಸುವ ಆಡಳಿತ ವ್ಯವಸ್ಥೆ ರಿಫಾರ್ಮ್ ನಲ್ಲಿ ನಂಬಿಕೆ ಕಳೆದುಕೊಂಡಿದೆ. ಕೌಟುಂಬಿಕ ವ್ಯವಸ್ಥೆ ಪತ್ತೆಯೇ ಇಲ್ಲ. ಸಮುದಾಯವೂ ನೆರವಿಗೆ ಬರುವುದಿಲ್ಲ. ಆದರೆ ಈ ಎಲ್ಲ ಭ್ರಷ್ಟತೆಯ ಮಧ್ಯದಲ್ಲಿ ಪುಟಕ್ಕಿಟ್ಟ ಚಿನ್ನದ ಹಾಗೆ ಹೊಳೆಯುವುದು "ಪವರ್ ಸ್ಟಾರ್" ನಡೆಸಿಕೊಡುವ ಗೇಮ್ ಶೋ. ಲಾಟರಿ ಬಡವರ ಮೇಲಿನ ತೆರಿಗೆ ಎನ್ನುವ ಮಾತೊಂದಿದೆ. ಕೌನ್ ಬನೇಗಾ ಕರೋಡ್ ಪತಿಯಂತಹ ಗೇಮ್ ಶೋಗಳು ಲಾಟರಿಗಿಂತ ಭಿನ್ನವಲ್ಲ. ಆದರೆ ಇಂತಹ ಗೇಮ್ ಶೋ ಒಂದನ್ನು ಪರ್ಯಾಯ ಅಧಿಕಾರ ಕೇಂದ್ರದಂತೆ ಚಿತ್ರ ಕಟ್ಟಿಕೊಡುವುದನ್ನು "ಮೈತ್ರಿ"ಯಲ್ಲಿ ಗುರುತಿಸಬಹುದು. ಸಿದ್ರಾಮನ ಅಮಾಯಕತೆ ಅನಾವರಣಗೊಳ್ಳುವುದು ಯಾವುದೇ ನ್ಯಾಯಾಲಯದಲ್ಲಿ ಅಲ್ಲ, ಬದಲಾಗಿ ಗೇಮ್ ಶೋನ ಹಾಟ್ ಸೀಟಿನಲ್ಲಿ. ವಯಸ್ಸು ಮಾಗದ ಸಿದ್ರಾಮನಿಗೆ ರಿಮ್ಯಾಂಡ್ ಹೋಮಿನ ವಿಧಿ (ಶೇಕಡಾ ೯೦ ರಷ್ಟು ೩೫ರ ವಯಸ್ಸು ಮುಟ್ಟುವುದರೊಳಗೆ ಸತ್ತು ಹೋಗುವ ದುರಂತ ವಿಧಿ)ಯಿಂದ ಪಾರಾಗಿ ಕೌಟುಂಬಿಕ ಪರಿಸರ ಸೇರುವುದು ಗೇಮ್ ಶೋನ "ಫೋನ್ ಎ ಫ್ರೆಂಡ್" ಮೂಲಕ. ರಿಮ್ಯಾಂಡ್ ಹೋಮ್ ಸೇರಿದ ಮಕ್ಕಳ ಮನಃಪರಿವರ್ತನೆ ಸಾಧ್ಯವೇ ಇಲ್ಲ ಎಂಬ ತಿರ್ಮಾನಕ್ಕೆ ಬಂದ ವಾರ್ಡನ್ನಿನ ಮನಸ್ಸು ಬದಲಾಗುವುದು, ತಿದ್ದುವಿಕೆ - ಶಿಕ್ಷಣದಲ್ಲಿ ನಂಬಿಕೆ ಮೂಡುವುದು ಗೇಮ್ ಶೋ ನಲ್ಲಿ. ತನ್ನ ಮಗನ ಸಾವಿನಿಂದ ತತ್ತರಿಸಿ ಕಾನೂನು ಕೈಗೆತ್ತಿಕೊಂಡ ವಿಜ್ಞಾನಿಯ ಮನಸ್ಸು ಬದಲಾಗುವುದು (?) ಗೇಮ್ ಶೋನಿಂದಾಗಿ. ತನ್ನ ಪ್ರಾಯೋಜಕರಿಗೆ ಲಾಭ ಮಾಡಿಕೊಡುವ ಉದ್ದೇಶ ಹೊಂದಿದ ಇಂತಹ ಕಾರ್ಯಕ್ರಮವೊಂದನ್ನು ಚಿತ್ರ ಅಸಮಾನತೆಯ ನಿವಾರಣೆ, ಶೋಷಿತರಿಗೆ ನ್ಯಾಯ ಒದಗಿಸುವ, ಸತ್ಯವನ್ನು ಅನಾವರಣ ಗೊಳಿಸುವ, ಸಮಾಜ ಪರಿವರ್ತನೆ ಮಾಡುವ, ಮುರಿದ ಮನಸ್ಸುಗಳನ್ನು ಒಂದು ಮಾಡುವ "ಪ್ರವಾದಿ"ಯಂತೆ ಬಿಂಬಿಸುವುದು ನಿಜಕ್ಕೂ ಅಪಾಯಕಾರಿ.

ಮೇಲಿನ ಅಪಾಯಕಾರಿ ನಿಲುವನ್ನು ಅನುಸರಿಸಿ ಚಿತ್ರಕಥೆ ಕಟ್ಟಲ್ಪಡುವುದರಿಂದ ಅದು ಸಹಜವಾಗಿ ಶ್ರೀಮಂತ ವರ್ಗದ ಬೆನ್ನ ಹಿಂದೆ ನಿಲ್ಲುತ್ತದೆ. ತನ್ನೊಬ್ಬನ ಮಗನ ಸಾವಿನಿಂದ ಕೃದ್ಧನಾದ "ಬಾಂಬು" ತಯಾರಿಸುವ ವಿಜ್ಞಾನಿ ಅದಕ್ಕೆ ಕಾರಣನಾದ ರೌಡಿ (ಜತೆಗೆ ಫ್ಯಾಕ್ಟರಿಯಲ್ಲಿರಬಹುದಾದ ಅಮಾಯಕರನ್ನೂ ಸೇರಿಸಿ)ಯನ್ನು ನಿರ್ನಾಮ ಮಾಡುತ್ತಾನೆ. ತನ್ನ ಮಗನ ಸಾವಿಗೆ ನೇರವಾಗಿ ಕಾರಣನಾಗಿರದ ಅಮಾಯಕ ಸಿದ್ಧರಾಮನನ್ನು "ಕ್ಷಮಿಸಿ" ದೊಡ್ದವನೂ ಆಗುತ್ತಾನೆ. ಆದರೆ ಹುಳಗಳ ಹಾಗೆ ಸಾಯುವ, ತಂದೆ ತಾಯಿಗಳನ್ನು ಕಳೆದುಕೊಳ್ಳುವ, ಅತ್ಯಂತ ಅಪಾಯಕಾರಿ ಸನ್ನಿವೇಶಗಳಲ್ಲಿ ಜೀವನ ನಡೆಸುವ, ಸಮಾಜ ಘಾತುಕ ಶಕ್ತಿಗಳಿಗೆ ಬಲಿಯಾಗುವ ಮಕ್ಕಳ ಕುರಿತು ಚಿತ್ರ ತನ್ನ ಬಿಗುವನ್ನು ಸಡಿಲಿಸುವುದೇ ಇಲ್ಲ. ಮೈನರ್ ಕ್ರಿಮಿನಲ್ ಗಳು ಕ್ರಿಮಿನಲ್ ಗಳಾಗೇ ಉಳಿಯುತ್ತಾರೆ ವಿನಃ ಅವರನ್ನು ಆ ದಾರಿಗೆ ನೂಕಿದ ಪರಿಸರ, ಸಮಾಜ ಪ್ರಶ್ನೆಗೊಳಪಡುವುದೇ ಇಲ್ಲ. ಸಿದ್ಧರಾಮನೊಬ್ಬನನ್ನು ಕೋಟ್ಯಾಧಿಪತಿಯಾಗಿಸಿ, ಆತನಿಗೊಂದು ಕುಟುಂಬವನ್ನು ನೀಡಿ ಚಿತ್ರ ಕೈ ತೊಳೆದುಕೊಳ್ಳುತ್ತೆ. ಸಾವಿರ ಸಿದ್ಧರಾಮರು ಈ ಗೇಮ್ ಶೋ ಲಾಟರಿಯಲ್ಲಿ ತನ್ನದೂ ಅದೃಷ್ಟ ಖುಲಾಯಿಸಬಹುದು ಎಂದು ಕನಸಬೇಕಷ್ಟೇ.

"ಮೈತ್ರಿ" ಚಿತ್ರ ಮುಖ್ಯವಾಹಿನಿಯ ಚಿತ್ರಗಳಿಗಿಂತ ಆಶಯದಲ್ಲಿ ಮೇಲ್ಮಟ್ಟದ ಚಿತ್ರ.ಸಾಮಾಜಿಕ ಕಳಕಳಿ ಹೊಂದಿರುವ ಹಾಗೂ ಸಾಮಾಜಿಕ ಸಮಸ್ಯೆ ಕೇಂದ್ರಿತವಾದ ಚಿತ್ರ. ಆದರೆ ಚಿತ್ರವೇ ಅದರ ಆಶಯದ ವಿರುದ್ಧವಾಗಿ ಕೆಲಸ ಮಾಡಿರುವುದು "ಮೈತ್ರಿ"ಯ ದುರಂತ.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು