ದೃಶ್ಯಕ್ಕೊಂದು ನುಡಿಗಟ್ಟು

ಬೆಂಕಿಪಟ್ಣ - ದೃಶ್ಯವಾಗದ ಒಂದು ಸದಾಶಯ

Benkipatna movie reviewಇಂದು ನಗರ ಉಸಿರಾಡಲು ಕಷ್ಟಪಡುತ್ತಿದೆ , ಹಳ್ಳಿ ನಡೆದಾಡಲು ತ್ರಾಣವಿಲ್ಲದೆ ಕಷ್ಟಪಡುತ್ತಿದೆ . ಅನ್ನ ನೀಡುವಾತ ಆತ್ಮಹತ್ಯೆ ಮಾಡಿಕೊಳ್ಳುತಿದ್ದಾನೆ . ಎಲ್ಲರಿಗೂ ಈಗ ಉಳಿಯಲು ಇರುವ ದಾರಿ ಒಂದೇ - ಇಲ್ಲಿ ಸಮಾನತೆಯ ಕನಸನ್ನು ಬೇಕಾಗಿದೆ . ಬಡವ ಬಲ್ಲಿದರ ನಡುವಿನ ಅಂತರ ಕಮ್ಮಿ ಇರಬೇಕು ಎಂಬ ಆಸೆಗೆ ಮತ್ತೆ ನೀರೆರೆಯಬೇಕಾಗಿದೆ . ವಿಕೇಂದ್ರೀಕರಣ, ಎಲ್ಲರಿಗೂ ಉದ್ಯೋಗ , ಸ್ವಾವಲಂಬನೆ ಎಂಬ ಹುದುಗಿ ಹೋಗಿರುವ ಹಳೇ ಮಾತುಗಳನ್ನು ಮತ್ತೆ ಮತ್ತೆ ಹೇಳಬೇಕಾಗಿದೆ "  ( ಎದೆಗೆ ಬಿದ್ದ ಅಕ್ಷರ - ಸಮಾನತೆಯ ಕನಸು ಕಾಣುತ್ತಾ ) .

ಎದೆಗೆ ಬಿದ್ದ ಅಕ್ಷರದಲ್ಲಿ ದೇವನೂರು ಹೇಳುವ ಈ ಮಾತುಗಳು ಬೆಂಕಿಪಟ್ಣ ಚಿತ್ರದ ಆಶಯವನ್ನು ಹೇಳುತ್ತದೆ .  ಬೆಂಕಿಪಟ್ಣ ಕೇಳಿಸದ ಕೂಗೊಂದಕ್ಕೆ ಧನಿಯಾಗಲು ಹೊರಟ ಸಿನೆಮಾವಾದರೂ ಅನನುಭವಿ ನಿರ್ದೇಶಕನೊಬ್ಬ  ತಾನು ಕಂಡಿರುವ , ತನ್ನನ್ನು ಕಾಡಿರುವ  ಗಂಭೀರ ವಿಚಾರಗಳನ್ನು ದೃಶ್ಯಕ್ಕೆ ಇಳಿಸಲಾಗದೆ ಸೋತಿರುವುದಕ್ಕೆ ಸ್ಪಷ್ಟ ನಿದರ್ಶನ.

ಬೆಂಕಿಪಟ್ಣ ಚಿತ್ರದ ನಿರ್ದೇಶಕ ಟಿ.ಕೆ.ದಯಾನಂದ್. ದಯಾ ಬರೆಯುವ ಕಥೆಗಳಂತೆ ಬೆಂಕಿಪಟ್ಣದಲ್ಲಿಯೂ ನಗರ ಕಂಡಿರದ ಹೊಸ ಲೋಕವೊಂದಿದೆ .  ಗ್ರಾಮ್ಯಜೀವನದ ಸೂಕ್ಷ , ಸಂಬಂಧಗಳ ಆಳ , ಜಾಗತೀಕರಣಕ್ಕೆ ಸಿಕ್ಕು ತನ್ನ ಮೂಲ ಚಹರೆಗಳಿಂದ ದೂರ ಸರಿಯುತ್ತಿರುವ ಹಳ್ಳಿಗಳ ಧನಿಯನ್ನು ,  ಕಾರ್ಮಿಕ ವರ್ಗದ ಬವಣೆ , ಬದುಕಿನ ತಳಮಳ ,ಸಹಜ ನ್ಯಾಯ ವಂಚಿತ ಸಮಾಜದ ಕೂಗು , ಪೌರ ಕಾರ್ಮಿಕರ ದೂರು ದುಮ್ಮಾನಗಳನ್ನು  ಹೇಳುವ ಪ್ರಯತ್ನ ಚಿತ್ರದಲ್ಲಿ ಕಾಣುತ್ತದೆ . ಆದರೆ ಹಾಳೆಯಲ್ಲಿರುವುದೆಲ್ಲ ದೃಶ್ಯವಾಗಿಲ್ಲ .

ಕೆಟ್ಟ ಚಿತ್ರಗಳಿರುವುದಿಲ್ಲ ಆದರೆ ಕೆಟ್ಟ ಚಿತ್ರಕಥೆಗಳಿರುತ್ತವೆಯಂತೆ . ಈ ಚಿತ್ರವೂ ಹಾಗೆಯೇ . ಸೂತ್ರವಿರದೆ ನೇತಾಡುವಂತಿರುವ ದೃಶ್ಯಗಳನ್ನು ಜೋಡಿಸಿರುವ ಚಿತ್ರಕಥೆ . ಹಿಂದು , ಮುಂದು ಎತ್ತ ಕಡೆ ಬಿದ್ದರೂ ದೃಶ್ಯ ಕೂರಲು ಜಾಗವಿಲ್ಲದೆ ಉಸಿರುಗಟ್ಟಿಸಿದಂತ ಸಂಕಲನ , ಒಂದು ಚಿತ್ರ ತನ್ನ ಮೂಲದಲ್ಲೇ ಎಡವಲು ಇಷ್ಟು ಸಾಲದೆ ? ಕನ್ನಡಿಗರೇ ಸೇರಿ ಮಾಡಿರುವ , ಕನ್ನಡದ ಕಲಾವಿದರನ್ನೇ ದುಡಿಸಿಕೊಂಡಿರುವ ಹೊಸಬರ ಪ್ರಯತ್ನವಿದು . ಹೊಸ ಹುಡುಗರ ಬೆನ್ನು ತಟ್ಟುವುದು ನಮ್ಮ ಕರ್ತವ್ಯ  ಕೂಡ . ಹಾಗೆಂದ ಮಾತ್ರಕ್ಕೆ ತಪ್ಪುಗಳ ಹೂರಣವೊಂದನ್ನು ಪರವಾ ಇಲ್ಲ ಎಂದು ಹೊಗಳ ಹೊರಟರೆ ಅದು ಕೆಟ್ಟ ಸಂಪ್ರದಾಯವೊಂದನ್ನು ಸೃಷ್ಟಿಸುವ ಅಪಾಯವಿದೆ . ಪ್ರತಿ ಸಿನೆಮಾವೂ ಒಂದೊಂದು ಉನ್ನತಿಯ ಹೆಜ್ಜೆಯಿಡಬೇಕೆಂಬ ಆಶಿಸುವ ನನ್ನಂತವರಿಗೆ ತಪ್ಪುಗಳನ್ನು ಬೊಟ್ಟು ಮಾಡಿ ತೋರಿಸುವ ಅನಿವಾರ್ಯವೂ ಇರುತ್ತದೆ .

ಚಿತ್ರದ ಆರಂಭದಲ್ಲಿ ನಿರ್ದೇಶಕ ಚಿತ್ರದ ಮುಖ್ಯ ಕಥೆಗೆ ಪೀಟಿಕೆಯಾಗಿ ತರುವ ಕಥೆಯ ಯಾವ ಅಗತ್ಯವೂ ಚಿತ್ರಕ್ಕೆ ಬೇಕಿಲ್ಲ . ಇಂದಿನ ಕನ್ನಡ ಪ್ರೇಕ್ಷಕ ಹಿನ್ನಲೆಯಿರದೆ ಕಥೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಎಂಬುದನ್ನು ನಿರ್ದೇಶಕರು ಮರೆತಂತಿದೆ.  ಯಾವಾಗ ನಿರ್ದೇಶಕನೊಬ್ಬ ಕಥೆಯನ್ನು ಪ್ರೇಕ್ಷಕನಿಗೆ ಅವನಾಗೇ ಅರ್ಥಮಾಡಿಕೊಳ್ಳಲು ಬಿಡದೆ ಅರ್ಥ ಮಾಡಿಸುವ ಹಾದಿಗಿಳಿಯುತ್ತಾನೋ ಆಗಲೇ ದೃಶ್ಯವೊಂದು ಅದರ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ . ಹಿನ್ನಲೆ ಸೂಚಿಸುವ ಆ ದೃಶ್ಯಗಳನ್ನು ಯೋಗರಾಜ್ ಭಟ್ಟರ ಧ್ವನಿಯಲ್ಲಿ ವಾಚ್ಯವಾಗಿಸಿರುವುದು ಅನಗತ್ಯ . ವಾಣಿಜ್ಯಾತ್ಮಕ ಉದ್ದೇಶದಿಂದ ಇಂದಿನ ನಿರ್ದೇಶಕರು  ಭಟ್ಟರ ಧ್ವನಿಗೆ ಜೋತುಬಿದ್ದಿರುವುದು ಕನ್ನಡ ಪ್ರೇಕ್ಷಕನ ದುರ್ದೈವ . ಕಿವಿಗೆ ಆಪ್ತವಾಗದ ದ್ವನಿಯೊಂದು ಹಿನ್ನಲೆಯಲ್ಲಿ ಇದ್ದರೆ ಮುನ್ನಲೆಯನ್ನಿರುವ ಯಾವ ದೃಶ್ಯವೂ ಕಳೆಗಟ್ಟುವುದಿಲ್ಲ . 

ಮೊದಲ ಬಾರಿಗೆ ಖಳನಾಯಕನ ಪ್ರವೇಶವಾಗುವವರೆಗೆ ಯಾವ ದೃಶ್ಯವೂ ನೋಡುಗರ ಮನಸಲ್ಲಿ ಅಚ್ಚಾಗಲು ಸಂಕಲನಕಾರ ಬಿಡುವುದಿಲ್ಲ . ದೂರಿ ದೂರಿ ಹಾಡಿನಲ್ಲಿರುವ ದೃಶ್ಯಗಳೂ ಸೇರಿ ಎಲ್ಲವೂ ಒಂದ ಮೇಲೆ ಒಂದನ್ನು ಹೊಯ್ದಂತಿವೆ .  ಪ್ರಥಮಾರ್ಧದಲ್ಲಿ ದೃಶ್ಯಗಳು ಒಂದಕ್ಕೊಂದು ಸಂಬಂಧವಿರದೆ ಎಲ್ಲೆಲ್ಲಿಂದಲೋ ಹಾರಿಕೊಂಡು  ಬರುತ್ತವೆ . ತೀರಾ ಮುಗ್ಡನಾದ ನಾಯಕನಿಗೆ ಇನ್ನೂ ಪ್ರೀತಿ ಏನೆಂದು ತಿಳಿಯದಿರುವ ಹೊತ್ತಿಗೇ ನಾಯಕಿಗೋಸ್ಕರ ನಾಯಕ ಮರದಿಂದ ಹಕ್ಕಿಗಳನ್ನು ಹಾರಿಸುವ ದೃಶ್ಯ , ಆಗಾಗ ಉದ್ಭವವಾಗುವ ಕೋಡಂಗಿಯಂತ ಹಾಸ್ಯ ಪಾತ್ರಧಾರಿ , ಒಮ್ಮಿಂದೊಮ್ಮೆಲೇ ಎದ್ದು ಬರುವ ಖಳನಾಯಕ ಹೀಗೆ..  ಇಂತಹ ತಲೆಬುಡವಿಲ್ಲದ ಚಿತ್ರಕಥೆ ಮತ್ತು ಸಂಕಲನದ ಜುಗಲ್ಭಂದಿಯಿಂದ ಮೊದಲಾರ್ಧ ಮುಗಿಯುವ ವೇಳೆಗೆ ತನ್ನ ಬಹುತೇಕ ನೋಡುಗರನ್ನು ಬೆಂಕಿಪಟ್ಣ ತನ್ನಿಂದ ದೂರಮಾಡಿಕೊಂಡಿರುತ್ತದೆ .  

ತಕ್ಕಮಟ್ಟಿಗೆ ನಾಯಕ ನಾಯಕಿಯನ್ನು ಹೊರತುಪಡಿಸಿ ಯಾವ ಪಾತ್ರವನ್ನೂ ನಿರ್ದೇಶಕ ಸರಿಯಾಗಿ ಪೋಷಿಸಿಲ್ಲ . ಚಿತ್ರದ ಆರಂಭಿಕ ದೃಶ್ಯಗಳಲ್ಲಿ ನಾಯಕ ಯಾವುದೋ ವೇಷ ಹಾಕಿಕೊಂಡು ಬರುವಾಗ , ಪಟ್ಟಣದಲ್ಲಿ  ಇಲಿ ಪಾಷಣ ಮಾರುವಾಗ ಎದುರೆದುರು ಸಿಕ್ಕಿದಾಗ ಆಪ್ತವಾಗಿರದ ನಾಯಕ ನಾಯಕಿಯ ಪಾತ್ರಗಳು ಮುಂದಿನ ಕೆಲವೇ ಸಮಯಗಳಲ್ಲಿ ಮನೆಯವರೆಲ್ಲರ ಜೊತೆ ಸೇರಿ ಹಾಡೊಂದಕ್ಕೆ ಕುಣಿಯುತ್ತವೆ .  ಇಲಿ ಪಾಷಾಣ ತಯಾರಿಸಿ ಮಾರುವ ತಲ್ಪುರ್ಕಿ, ನಾಯಿ ಹಿಡಿಯುವ ಬಾಬುಲಿಯಂತ ಹೊಸ ತರದ ಪಾತ್ರ ಸೃಷ್ಟಿಸಿದ ಕತೆಗಾರ ಯಾವೊಂದು ಪಾತ್ರದ ಬೆಳವಣಿಗೆಗೆ ಅವಕಾಶ ನೀಡದೆ ಅರ್ಧರ್ಧಕ್ಕೆ ಕೊಲ್ಲುತ್ತಾನೆ . ಕಥೆಗೆ ತುರುಕಿಸಿರುವ ಹಾಸ್ಯ ದೃಶ್ಯಗಳು ತೀರಾ ಪೇಲವ . ಪ್ರಯತ್ನಿಸಿದರೂ ನಗು ಬಾರದು .

ಯಾವುದೇ ಚಿತ್ರವೂ ಸಹಜತೆಯಿಂದ ದೂರ ನಿಲ್ಲಬಾರದು . ಉದಾಹರಣೆಗೆ ನಾಯಿ ಹಿಡಿಯುವ ದೃಶ್ಯಗಳನ್ನೇ ತೆಗೆದುಕೊಳ್ಳಿ . ಹಳ್ಳಿಯ ಬೀದಿಗಳಲ್ಲಿ ಹುಚ್ಚೆದ್ದು ಕುಣಿಯುವ ಬೀದಿನಾಯಿಗಳನ್ನು ಹಿಡಿಯುವ ದೃಶ್ಯದಲ್ಲಿ ಪಳಗಿದ ಜರ್ಮನ್ ಶೆಫರ್ಡ್ ನಾಯಿಯನ್ನು ತೋರಿಸಿದರೆ ಹೇಗೆ ? ನಾಯಿಹಿಡಿಯುವ ಮೊದಲು ಮೈಗೆ ಎಣ್ಣೆ ಹಾಕುವ ದೃಶ್ಯಗಳನ್ನು ನೋಡಿ . ಎಲ್ಲೋ ಇರುವ ಜನಸಂದಣಿಯ ಪ್ರದೇಶಗಳಲ್ಲಿ ನಾಯಿ ಹಿಡಿಯುವುದಕ್ಕೆ ಕ್ಯಾಮರಾಕ್ಕೆ ಚಂದ ಕಾಣುವ ಯಾವುದೊ ಪ್ರಪಾತವೊಂದರಲ್ಲಿ ಮೈಗೆ ಎಣ್ಣೆ ಹಾಕಿಕೊಳ್ಳುವುದು ಮೂರ್ಖತನವಲ್ಲದೆ ಮತ್ತೇನೂ ಅಲ್ಲ .

ಬೊಗಸೆಯಲ್ಲಿ ಮಳೆ ಹಾಡೊಂದು ವಿಚಿತ್ರ . ಮಲೆನಾಡಿನ  ಹಳ್ಳಿಯ ಮನಸೊಂದು ತನ್ನ ಪ್ರೇಮದ ವಿವರಣೆ ಕೊಡಲು ಆಯ್ದುಕೊಳ್ಳುವುದು ಕಡಲು ಮತ್ತು ಜಗಮಗಿಸುವ ಉಡುಪುಗಳನ್ನ . ಹಳ್ಳಿಯೊಳಗೆ ಒಂದು ಸ್ವರ್ಗವಿದೆ ಅಲ್ಲವೇ ? ಕೂ.. ಎಂದರೆ ಎಲ್ಲ ದಿಕ್ಕುಗಳಿಗೂ ಧ್ವನಿ  ಪ್ರತಿಧ್ವನಿಸುವ ಗಿರಿ ಕಂದಕಗಳಿವೆ . ಕಡಲ  ತೆರೆಯ ಸಪ್ಪಳಕ್ಕಿಂತ ಮೆಲುಧನಿಯಲ್ಲಿ  ಜುಳು ಜುಳು ಎಂದು ಪ್ರೀತಿ ಸಾರುವ ತೊರೆಗಳಿವೆ . ಆಡುವ ನವಿಲಿದೆ , ಬೆಳಗನ್ನು ಎದುರುಗೊಳ್ಳುವ ಕೋಳಿಯಿದೆ , ರಸ್ತೆ ತುಂಬುವ ಕುರಿ ಹಿಂಡಿದೆ . ಇದೆಲ್ಲವೂ ಅಲ್ಲಿನ ಸಹಜ ಪ್ರಕೃತಿ . ಒಂದು ಪರಿಸರದ ಪ್ರೀತಿಯನ್ನು ಅಲ್ಲಿನ ಭಾಷೆಯಲ್ಲಿ ಕಟ್ಟಿಕೊಟ್ಟರಷ್ಟೇ ಅದಕ್ಕೊಂದು ಅರ್ಥ  .  ಮಳೆಯನ್ನೇ ತೋರಿಸದೆ ಕೈಯಲ್ಲಿ ನೀರು ಹಾರಿಸಿ  "ಬೊಗಸೆಯಲ್ಲಿ ಮಳೆ ಹಿಡಿದಂತೆ" ಎಂದು ಹೇಳುವುದು , " ಎಂಟಾಣೆ ನಾಣ್ಯಾನೇ ಚಂದ್ರಾಮ " ಎನ್ನುವಲ್ಲಿ ನಾಣ್ಯವನ್ನು ಹಾರಿಸುವುದೆಲ್ಲ ಅತಿರೇಕ . ದೃಶ್ಯವೊಂದನ್ನು ಅಷ್ಟೊಂದು ವಾಚ್ಯವಾಗಿಸುವುದು ಬೇಕಿಲ್ಲ . "ಎರಡು ಜಡೆಯನ್ನು ಹಿಡಿದು ಕೇಳುವೆನು " ಹಾಡನ್ನು ನೋಡಿ . ಅಲ್ಲಿ ನಾಯಕ ನಾಯಕಿಯ ಜಡೆಯನ್ನು ಎಲ್ಲಿಯೂ ಹಿಡಿಯುವುದಿಲ್ಲ . ಇನ್‌ಫ್ಯಾಕ್ಟ್ ಅಲ್ಲಿ ನಾಯಕಿಗೆ ಜಡೆಯೇ ಇಲ್ಲ . ಆದರೂ ಆ ಹಾಡು ಹೇಳಬೇಕಾದದ್ದನ್ನು ದಾಟಿಸುತ್ತದೆ . ದೃಶ್ಯ ಭಾಷೆಗೆ ವಿಷಯವೊಂದನ್ನು ವಾಚ್ಯವಾಗಿಸದೆ ನೋಡುಗನಿಗೆ ದಾಟಿಸುವ ತಾಕತ್ತಿದೆ . ಅದನ್ನು ನಿರ್ದೇಶಕ ಗುರುತಿಸುವುದು ಮುಖ್ಯ .

ನೀರಿನ ಬಳಕೆಯೊಂದಿಗೆ ಸಂಯೋಜಿಸಿದ ಸಾಹಸ ದೃಶ್ಯವೊಂದು ನೋಡಲು ಚೆಂದವಿದೆ . ಸ್ಟೀವ್ ಕೌಶಿಕ್ ಸಂಗೀತದ ಘಮ ಎರಡು ಹಾಡಿಗಷ್ಟೇ ಸೀಮಿತ .  ನಿರಂಜನ  ಬಾಬು ಕ್ಯಾಮರಾ ಮೇಲೊಮ್ಮೆ , ಕೆಳಗೊಮ್ಮೆ , ವೈಡ್ , ಜ಼ೂಮ್ ಇನ್ , ಜ಼ೂಮ್ ಔಟ್ ಮಾಡುವುದಲ್ಲೇ ನಿರತರಾಗಿರುವುದರಿಂದ ದೃಶ್ಯವೊಂದಕ್ಕೆ ಅಗತ್ಯವಾಗಿರುವ ವಿವರಗಳನ್ನ ತನ್ನಲ್ಲಿ ಹಿಡಿದಿಡುವುದೇ ಇಲ್ಲ .

ಜಾಗತಿಕ ಸಿನೆಮಾಗಳನ್ನು ಕನ್ನಡದ ಓದುಗರಿಗೆ ಪರಿಚಯಿಸಿಕೊಂಡು ಬಂದಿರುವ ದಯಾನಂದ್ ನಿರ್ದೇಶನದ ಚಿತ್ರಕ್ಕೆ ಸಹಜ ನಿರೀಕ್ಷೆಗಳಿರುತ್ತವೆ .  ನಮ್ಮೊಂದಿಗಿರುವ ಉತ್ತಮ ಬರಹಗಾರರಲ್ಲಿ ಒಬ್ಬರಾಗಿರುವ ದಯಾನಂದ್ ದೃಶ್ಯಕಟ್ಟುವ ಕಲೆಯನ್ನು ಕಲಿಯುವುದು ಸಾಕಷ್ಟಿದೆ . ಒಳ್ಳೆಯ ಸಂದೇಶವಿರುವ , ತುಳಿತಕ್ಕೊಳಗಾದ ಸಮಾಜದ ದ್ವನಿಯಾಗ ಬಯಸಿದ ಚಿತ್ರಗಳೆಲ್ಲ ಒಳ್ಳೆಯ ಸಿನಿಮಾಗಳಾಗುವುದಿಲ್ಲ . ಸಿನೆಮಾಕ್ಕೆ ಅದರದ್ದೇ ಆದ ಒಂದು ಭಾಷೆಯಿದೆ. ಸಿನೆಮಾ ಒಂದಕ್ಕಿರುವ ಮಾನದಂಡಗಳಾಚೆ ನಿಂತು ನೋಡಿದರೆ ಒಳ್ಳೆಯದು ಕಾಣಿಸುತ್ತವಯೇ ಹೊರತು , ಒಂದು  ಸಿನೆಮಾವಾಗಿ  ಬೆಂಕಿಪಟ್ನ  ಕೆಟ್ಟ ಅನುಭವ .

ನಮ್ಮ ಇಂದಿನ ತುರ್ತು ಕನ್ನಡ ಚಿತ್ರಗಳಿಂದ ದೂರ ಉಳಿದಿರುವ ಪ್ರೇಕ್ಷಕವರ್ಗಗಳನ್ನು ನಮ್ಮ ಚಿತ್ರಗಳೆಡೆಗೆ ಬರಿಸಿಕೊಳ್ಳುವುದು . ಕಾಸರವಳ್ಳಿಯಂತ ಹಿರಿಯ ನಿರ್ದೇಶಕರ ಚಿತ್ರಗಳನ್ನು ಇಂದಿನ ಹೊಸ ಪ್ರೇಕ್ಷಕ ವರ್ಗಕ್ಕೆ ತಲುಪಿಸಿವ ಕೆಲಸಗಳಾಗುವ ಯಾವುದೇ ಕುರುಹುಗಳೂ ಕಾಣದೆ ಇರುವ ಸಂಧರ್ಭದಲ್ಲಿ , ತರುಣರ ಹೊಸ ನೀರಿನ ಅಪಾರ ಭರವಸೆ ಹುಟ್ಟುಹಾಕಿರುವ ಚಿತ್ರಗಳಿದ್ದೂ , ಹೊಸ ಪೀಳಿಗೆಯನ್ನು ಬೆಂಬಲಿಸುವ ಜವಾಬ್ದಾರಿ ಮರೆತು ಸ್ವಹಿತಾಸಕ್ತಿಯ ರಾಜಕೀಯದ ಮೇಲಾಟದಲ್ಲಿ  ರಾಜ್ಯ ಪ್ರಶಸ್ತಿ , ಸರ್ಕಾರಿ ಪ್ರಾಯೋಜಿತ ಚಿತ್ರೋತ್ಸವಗಳ ಪ್ರಶಸ್ತಿ ದಕ್ಕಿಸಿಕೊಳ್ಳುವ  ಅದೇ ಹಳೇ ನೀರಿನ ಚಿತ್ರಗಳ ನಡುವೆ  ದಯಾನಂದರಂತ  ಪ್ರತಿಭಾವಂತ ನಿರ್ದೇಶಕರು ಪ್ರಬಲ ಚಿತ್ರಗಳೊಡನೆ  ಮತ್ತೊಮ್ಮೆ ಪುಟಿದೆದ್ದು ಬರುವುದನ್ನು ನಾನು ಎದುರುನೋಡುತ್ತೇನೆ .


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು