ದೃಶ್ಯಕ್ಕೊಂದು ನುಡಿಗಟ್ಟು

ನಾನಾರೆಂಬುದು ನಾನಲ್ಲ,ನೀಯೆಣಿಸುವ ಗುಣ ನಾನಲ್ಲ

ಮನುಷ್ಯ ಜೀವನದ ವಿವಿಧ ಹಂತಗಳನ್ನು ವಿವರಿಸುವ ಜಾಗತಿಕ ಶ್ರೇಷ್ಟ ಸಿನೆಮಾಗಳ ಕಥೆಗಳ ಎಳೆಯಂತಿರುವ   , ಮೈನ್ ಸ್ಟ್ರೀಮ್  ಕನ್ನಡ ಸಿನೆಮಾಗಳಿಗೆ ಅಪುರೂಪ ಎನ್ನಬಹುದಾದ ಉತ್ತಮ ಪ್ರಯತ್ನವೊಂದು  ಬಹುಪರಾಕ್‌ನಲ್ಲಿ ಆಗಿದೆ .

ಸಿಂಪಲ್ ಆಗಿ ಒಂದು ಲವ್ ಸ್ಟೋರಿಯ ನಂತರ ಗೆದ್ದೆತ್ತಿನ ಬಾಲ ಹಿಡಿಯದೆ ಸುನಿ ಸವಾಲಿನ ಕತೆಯೊಂದನ್ನು ಆಯ್ಕೆ ಮಾಡಿಕೊಂಡಿಕೊಂಡಿದ್ದಾರೆ .ಬದುಕಿನ ವೈಪರೀತ್ಯಗಳನ್ನು ಮೂರು ಹಂತಗಳನ್ನಾಗಿಸಿ ,  ಅದನ್ನು ಮೂರು ಕಥೆಗಳ ಸಮಾನಾಂತರ ನಿರೂಪಣೆಯಲ್ಲಿ ಹೇಳುತ್ತಾನೆ ನಿರ್ದೇಶಕ . ಸಂತ ಶಿಶುನಾಳ ಶರೀಫರ "ನಾನಾರೆಂಬುದು ನಾನಲ್ಲ " ರಚನೆಯಂತೆ ಮಾನವನೊಬ್ಬ ತನ್ನೊಳಗನ್ನು , ತಾನು ನಡೆದು ಬಂದ ಹೆಜ್ಜೆಗುರುತುಗಳನ್ನು ಮೆಲುಕು ಹಾಕಿಕೊಳ್ಳುತ್ತಾನೆ .  ಕೊನೆಯಲ್ಲಿ ಪರಿಸ್ತಿತಿಯ ಕೈಗೊಂಬೆಯಾಗಿ , ಖಿನ್ನತೆಯಿಂದ ಎಲ್ಲವನ್ನೂ ಬಿಟ್ಟು ಬೇರೆಡೆಗೆ ಮುಖ ಮಾಡುತ್ತಾನೆ . ನಾಯಕನ ಜೀವನವನ್ನು ಯವ್ವನದಲ್ಲಿ ಕಾಲೇಜು ಹುಡುಗ ಮನಸ್ ,ಮಧ್ಯ ವಯಸ್ಸಿನಲ್ಲಿ ಭೂಗತ ಜಗತ್ತಿನ ಡಾನ್  ಮಣಿ , ಕೊನೆಯ ದಿನಗಳಲ್ಲಿ ರಾಜಕಾರಣಿ   ಮೌನಿ ಯಾಗಿ ಚಿತ್ರಿಸಲಾಗಿದೆ . ಅಂತ್ಯವನ್ನು ಕಾತರದಿಂದ ಕಾಯುವ  ಪ್ರೇಕ್ಷಕನಿಗೆ ನಾಯಕನ ಜೀವನ "ನೀಯೆಣಿಸುವ ಗುಣ ನಾನಲ್ಲ"  ಎಂದು ಕೊನೆಯಲ್ಲಿ ತಿಳಿಯುತ್ತದೆ .

ಬಹುಪರಾಕ್‌ ನ್ನು ಉತ್ತಮ ಚಿತ್ರವಾಗಿಸುವುದು ಅದರ ಕಥೆ,  ಸಂಭಾಷಣೆ  ಮತ್ತು ಪಾತ್ರಗಳ ಪೋಷಣೆ . ಮನಸ್ ನ  ಯವ್ವನದ ಸಂಭಾಷಣೆಯಲ್ಲಿ ಎಷ್ಟು ವಾಚಾಳಿ ,ಹುಚ್ಚುತನವಿದೆಯೊ , ಅಷ್ಟೇ ಗಡಸನ್ನು , ಪ್ರಜ್ಞಾವಂತಿಕೆಯನ್ನು ಮೌನಿಯಲ್ಲಿ ತುಂಬಿದ್ದಾರೆ  .  " ಎಲ್ಲರೂ  ಬಲೂನ್ ಹೊರಗಿನ ಗಾಳಿಯಿಂದ ಮೇಲೆ ಹೋಗುವುದು ಎಂದು ಕೊಳ್ಳುತ್ತಾರೆ . ಆದ್ರೆ ಅದು ನಿಜವಾಗಿ ಹಾರುವುದು ಅದರೊಳಗಿನ ಗಾಳಿಯಿಂದ  " ಇಂಥ ಹಲವಾರು ಗಾಂಭೀರ್ಯ ಭರಿತ ಸಂಭಾಷಣೆಗಳಿವೆ ಚಿತ್ರದಲ್ಲಿ . ಪ್ರತಿಯೊಂದು ಪಾತ್ರದ ಬೆಳವಣಿಗೆಯ ಕೆಲಸ ಅಚ್ಚುಕಟ್ಟಾಗಿದೆ . ಯಾವುದೇ ಪಾತ್ರ ಅಪೂರ್ಣವೆನಿಸಿ ಕೊನೆಗೊಳ್ಳುವುದಿಲ್ಲ . ಎಲ್ಲಕ್ಕೂ ಅದರದ್ದೇ ಆದ ಅವಕಾಶಗಳಿವೆ . ಪಾತ್ರವರ್ಗವೂ ಅದನ್ನು ಚೆನ್ನಾಗಿ ನಿರ್ವಹಿಸಿದೆ . ಕಾಲೇಜು ಹುಡುಗನಾಗಿ ಕಿಟ್ಟಿಯನ್ನು ನೋಡುವುದು ಕಷ್ಟ .  ಮೌನಿಯಾಗಿ ಅವರಲ್ಲಿನ ಮಾಗಿದ ನಟನೊಬ್ಬ ಕಾಣುತ್ತಾನೆ . ನಿರ್ದೇಶಕ 3 ಹಂತದ ಕಥೆಗೆ ಒಬ್ಬನೇ ನಾಯಕನ ಬದಲಾಗಿ ಆಯಾ ವಯಸ್ಸಿನ ಪಾತ್ರಧಾರಿಗಳನ್ನು ಬಳಸಿ , ಕಥೆಯ ತಿರುಳನ್ನು ಚಿತ್ರದಲ್ಲಿ ಬಳಕೆಯಾದ ನಾಟಕದ ನಿರೂಪಕನಿಂದ ಹೇಳಿಸಿದ್ದರೆ ಚಿತ್ರ ನಾಯಕ ಪಾತ್ರದ ದೃಷ್ಟಿಯಿಂದ ಚಿತ್ರ ಇನ್ನಸ್ಟು ಸಧೃಡಗೊಳ್ಳುತಿತ್ತು . ಸಂಗೀತ ನಿರ್ದೇಶಕ ಭರತ್ ಬಿ ಜೆ ಗಮನಸೆಳೆಯುತ್ತಾರೆ  . 3 ಬೇರೆ ಬೇರೆ ಶೇಡ್ ನ ಕಥೆಗಳು ಸಮಾನಾಂತರವಾಗಿ ಚಲಿಸಿದರೂ ಹಿನ್ನಲೆ ಸಂಗೀತ ಒಂದರಿಂದ ಮತ್ತೊಂದು ಕಥೆಗೆ ಸರಾಗವಾಗಿ ವರ್ಗಾವಣೆಗೊಳ್ಳುತ್ತದೆ .

ಚಿತ್ರದಲ್ಲಿ ಬಣ್ಣಗಳ ಬಳಕೆಗೆ ಗಮನ ಕೊಟ್ಟಿರುವುದು, ಯವ್ವನದಲ್ಲಿನ ಸ್ನೇಹ , ಪ್ರೀತಿಗಳ ನಡುವಿನ ಜಂಜಾಟವನ್ನು ಬಿಳಿ ಮತ್ತು ಕೆಂಪು ಬಣ್ಣಗಳಿಂದ ತೋರಿಸಲಾಗಿದೆ  . ಆದರೆ ಬಣ್ಣಗಳ ಬಳಕೆಯನ್ನು ಬಣ್ಣಗಳಿಂದಲೇ ವ್ಯಕ್ತ ವಾಗಲು ಬಿಡದೆ ಅದನ್ನು ತೀರಾ ವಾಚ್ಯವಾಗಿಸಿದ್ದಾರೆ ನಿರ್ದೇಶಕ  . ಕೆಂಪು ಬಣ್ಣದಲ್ಲಿರುವ ವಿವಿಧ ಪ್ರಕಾರಗಳೆಡೆ ಗಮನ ಕೊಡದೆ ಒಂದೇ ಕಡು  ಕೆಂಪು ಬಣ್ಣದಿಂದ ತುಂಬಿಸಲಾಗಿದೆ   ಹಾಗಾಗಿ ಬಣ್ಣಬಳಕೆ ಸಹಜತೆ ಇಲ್ಲದೆ ಸೊರಗುತ್ತದೆ . ಎಲ್ಲೆಲ್ಲಿ ಪಾತ್ರಗಳಲ್ಲಿ ಸ್ನೇಹ , ಪ್ರೀತಿಯ ನಡುವೆ  ದ್ವಂದ್ವವಿದೆಯೊ ಅಲ್ಲಲ್ಲಿ ಕೆಂಪು , ಮತ್ತು ಬಿಳಿ ಎರಡೂ ಬಣ್ಣಗಳಿರುವ ಉಡುಪನ್ನು ಬಳಸಲಾಗಿದೆ .  ದೇವಸ್ಥಾನಕ್ಕೆ ಸ್ನೇಹ ಬರುವಾಗ ಅವಳು ಉಟ್ಟ  ಬಿಳಿ ಸೀರಿಗೆ ಕೆಂಪು ಪಟ್ಟಿಯಿದೆ .  ಉಸಿರಾಗುವೆ ಹಾಡಿನಲ್ಲಿ ನಾಯಕನಿಗೆ ಸ್ನೇಹನ ಮೇಲಿರುವುದು ಕೇವಲ ಸ್ನೇಹವಷ್ಟೆ  ಅನ್ನುವುದನ್ನು ಹೇಳಲು ಕೆಂಪು ಜ್ಯಾಕೆಟ್  ಹಾಕಿಕೊಂಡು ಬಂದ ನಾಯಕ ಜಾಕೆಟ್ ತೆಗೆದಿಟ್ಟು ಒಳಗಿದ್ದ ಬಿಳಿಯುಡುಗೆಯಲ್ಲಷ್ಟೆ ಬರುತ್ತಾನೆ ಎಂದು ತೋರಿಸುವುದರಲ್ಲಿ ಜಾಣ್ಮೆಯಿದೆ . ಚೆಸ್ ಮಣೆಯ ಕಾಯಿಗಳು  ಕಪ್ಪು ಬಿಳುಪಿನಲ್ಲಿರದೆ ಕಪ್ಪು ಮತ್ತು ಕೆಂಪಿನಲ್ಲಿದೆ . ಅಲ್ಲಲ್ಲಿ ಬಳಸುವ ಬಣ್ಣಗಳ ಬಳಕೆ ಕೆಲವೊಮ್ಮೆ ವಿಪರೀತಕ್ಕೆ ಹೋಗುತ್ತದೆ . ತೆರೆಯನ್ನು ಬಣ್ಣಗಳಿಂದ ತುಂಬಿಸುವ ಅದಮ್ಯ ಬಯಕೆ ಕೆಲವೊಮ್ಮೆ ಸಹಜತೆಯನ್ನು ಮರೆಮಾಚುತ್ತದೆ . ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಕಂಬ , ನೆಟ್ ಎಲ್ಲವೂ ಕೆಂಪಾಗಿರುವುದು ಅಸಹಜ .  ಸ್ನೇಹಕ್ಕೆ ಬಳಕೆಯಾದ ಬಿಳಿ ನಾಯಕ ನಾಯಕಿಗೆ ಮಾತ್ರವೇ ಆಗಿ ಉಳಿಯುತ್ತದೆ . ನಾಯಕನ ಅಪ್ಪಟ ಸ್ನೇಹಿತನ  ಬೈಕ್ , ಬಟ್ಟೆ ಎಲ್ಲ ಕಪ್ಪು ಎಂಬುದು ವಿಚಿತ್ರ . ನಾಯಕ ಸ್ನೇಹಳೊಂದಿಗೆ ಡೈನಿಂಗ್ ಟೇಬಲ್ನಲ್ಲಿ ಮಾತನಾಡುವಾಗ ಕರೆಮಾಡುವ ಪ್ರೀತಿಯ ಚಿತ್ರ  ಮೊಬೈಲ್ ನಲ್ಲಿ  ತೋರಿಸುವಾಗ ಕೆಂಪಿನ ಬದಲಾಗಿ  ಬಿಳಿ ಬಟ್ಟೆಯಿದೆ .  ಯವ್ವನದಲ್ಲಿ ಬಣ್ಣದ ಬಳಕೆಗೆ ಕೊಟ್ಟ ಪ್ರಾಮುಖ್ಯತೆಯನ್ನು  ಉಳಿದೆಡೆ ನೀಡಿಲ್ಲ . ಮೌನಿಯ ಉಗ್ರತೆಗೆ ಬಳಕೆಯಾದ ಕೇಸರಿ ಕೇವಲ ಬಾವುಟಗಳಿಗಸ್ಟೆ ಸೀಮಿತ .

 ಆರಂಭದಲ್ಲಿ ಕುತೂಹಲ ಹುಟ್ಟಿಸುವ , ಅಂತ್ಯದಲ್ಲಿ ಬಿಡದೆ  ಕಾಡುವ ಚಿತ್ರಕಥೆ ಮಧ್ಯಭಾಗದಲ್ಲಿ ಹಿಡಿತವಿಲ್ಲದೆ ಸೊರಗಿದೆ . ಚಿತ್ರದ ಕೊನೆಯಲ್ಲಿ ಮೂರು ಕಥೆಗಳನ್ನು ಒಂದೆಡೆ ತರಲು ನಿರ್ದೇಶಕ ಹೆಣಗಾಡುತ್ತಾನೆ .  ಮಣಿ ಮೌನಿಯಾಗಿ ಪರಿವರ್ತನೆಯಾಗುವುದನ್ನು ತೋರಿಸಿ , ಮನಸ್ ಮಣಿಯಾಗುವುದನ್ನು ಹೇಳದೆ ಉಳಿಸುತ್ತಾನೆ .  ಹಾಗಾಗಿ ಕಥೆಯ ಅಗತ್ಯ ಕೊಂಡಿಯೊಂದು ತಪ್ಪಿ ಹೋಗುತ್ತದೆ . ಕಥೆಯ ಹಿಮ್ಮುಖ ಚಲನೆಗೆ ಕೊಟ್ಟ ಕಾಲಾವಕಾಶ ( screen presence ) ಒಂದೆರಡು ನಿಮಿಷಗಳಷ್ಟೆ ಆಗಿರುವುದರಿಂದ ಅದು ಆಸ್ಪಷ್ಟತೆಯೊಂದಿಗೆ ಕೊನೆಗೊಳ್ಳುತ್ತದೆ . ಮೌನಿ ವಿದೇಶಿ ಚಪ್ಪಲಿಯನ್ನು ತಂದು ಕೊಟ್ಟಾಗ ಮಗಳು ಅದು ತನಗೆ ಬೇಡವೆಂದು ತನ್ನಿಷ್ಟದಂತೆ ಕನಸು ಕಾಣಲು ಬಿಡಬೇಕೆಂದು ತಂದೆಯಲ್ಲಿ ಮನವಿ ಮಾಡುತ್ತಾಳೆ . ಆದರೆ ಮುಂದೆ ಎರಡು ಮೂರು ದೃಶ್ಯಗಳ ಅಂತರದಲ್ಲಿ ಯಾವುದೇ ಪೂರ್ವ ಪೀಟಿಕೆಯ ದೃಶ್ಯಗಳಿಲ್ಲದೆ  ಆಕೆ ತಂದೆಯ ಆಸೆಯಂತೆ ಬದಲಾಗುತ್ತಾಳೆ .  ಮೌನಿಯ ಮನಪರಿವರ್ತನೆಗೆ ಸನ್ಯಾಸಿಯೊಬ್ಬನಿಂದ ಪ್ರವಚನ ಮಾಡಬೇಕಾದ ಯಾವುದೇ ಅಗತ್ಯವಿಲ್ಲ . ಯಾಕೆಂದರೆ ಮೌನಿಯ ಜೀವನದಲ್ಲಾದ ಏರಿಳಿತಗಳು ಮತ್ತು ತನ್ನೊಂದಿಗಿರುವ ಕೆಲಸಗಾರರ ಮಾತುಗಳಷ್ಟೇ ಸಾಕು ಪ್ರಜ್ಞಾವಂತನನ್ನು ಬದಲಾಯಿಸಲು .  ಹಾಗಾಗಿ ಸನ್ಯಾಸಿ ಮತ್ತು ವೇಶ್ಯೆಯ ಪಾತ್ರಗಳ ಬಳಕೆ ತೆರೆಯ ಸಮಯವನ್ನು ಆಕ್ರಮಿಸುತ್ತದೆಯೇ ಹೊರತು ಇಡೀ ಚಿತ್ರಕ್ಕೆ ಏನನ್ನು ಸೇರಿಸುವುದಿಲ್ಲ .

 ಛಾಯಾಗ್ರಾಹಕ ಕೆಲವು ಉತ್ತಮ ಶಾಟ್ ಗಳನ್ನು ಕಟ್ಟಿಕೊಟ್ಟರು ಕೆಲವೊಮ್ಮೆ ತೀರಾ ಸೋಮಾರಿಯೆನಿಸುತ್ತಾರೆ . ಅಲ್ಲಲ್ಲಿ ಹಲವೆಡೆ ಫ್ರೇಮ್ನಲ್ಲಿ ಅಗತ್ಯವಿಲ್ಲದ ವಸ್ತುಗಳು ಹಾಗೆಯೇ ಉಳಿಯುತ್ತವೆ .  ಅಲ್ಲಲ್ಲಿ ಅಗತ್ಯವಿರದೆ ವೈಡ್ ಆಂಗಲ್ ಶಾಟ್ ಗಳು ಬಳಕೆಯಾಗಿವೆ . ಮನೆಯ ಹೊರಾಂಗಣದಲ್ಲಿ ನಡೆಯುವ ಸಭೆಯ ದೃಶ್ಯವನ್ನು ತೋರಿಸಲು  ಮನೆಯ ಒಂದು ತುದಿಯ ಮೇಲಿಂದ ಕಾಮೆರಾ ಚಲಿಸಬೇಕಾದ  ಅಗತ್ಯವಿರುವುದಿಲ್ಲ ಅಲ್ಲವೇ ?.  ಉತ್ತರ ಕರ್ನಾಟಕ ಭಾಗದ ಚಿತ್ರೀಕರಣ ನೋಡಲು ಅದ್ಬುತ .  ಕೋಟೆಯಂತಿರುವ ಮನೆಯ ಮೂಲದ್ವಾರದ ಸೊಬಗು , ಮಣ್ಣಿನ ಬಣ್ಣ , ಮಾತನಾಡಲು ನಿಂತಂತಿರುವ ಬೃಹತ್  ಕಲ್ಲುಗಳನ್ನು ಹಾಗೆಯೇ ನಿಮ್ಮೆದುರು ತಂದು ನಿಲ್ಲಿಸುತ್ತಾನೆ ಛಾಯಾಗ್ರಾಹಕ . ಉತ್ತಮವಾಗಿದ್ದ ಐಟಮ್ ಸಾಂಗ್ ಒಂದು ಕಲಾನಿರ್ದೇಶನ ಮತ್ತು ಛಾಯಾಗ್ರಹಣದ ಹುಳುಕಿನಿಂದ ತೀರಾ ಸಾಧಾರಣವೆನಿಸುತ್ತದೆ .   

ಉಳಿದವರು ಕಂಡಂತೆಯಲ್ಲಿ ನಿರ್ದೇಶಕ ರಕ್ಷಿತನಷ್ಟೆ  ಭರವಸೆ ಮೂಡಿಸಿದ್ದ , ಈಗಿರುವ ಕನ್ನಡದ ಕೆಲವೇ ಆತುತ್ತಮ ಸಂಕಲನಕಾರರಲ್ಲಿ  ಒಬ್ಬರೆಂದು ಗುರುತಿಸಬಹುದಾದ ಸಚಿನ್ ಕೆಲಸ  ಮೌನಿಯ ಕಥೆಯಲ್ಲಿ ಮಾತ್ರ ಇಷ್ಟವಾಗುವುದು .  ಮನಸ್ ನ ಕತೆಯುದ್ದಕ್ಕೂ ಬಳಕೆಯಾದ ವಿಪರೀತವಾದ  "ಗ್ಲೋ "  ಇಫ್ಫೆಕ್ಟ್ ಉಸಿರಾಗುವೆ ಹಾಡನ್ನು ಬಿಟ್ಟು ಎಲ್ಲ ದೃಶ್ಯಗಳ ಅಂದ ಕೆಡಿಸುತ್ತದೆ .  ನಾಯಕಿ , ನಾಯಕನ ದೃಶ್ಯಗಳನ್ನು ಹೊರತುಪಡಿಸಿ ನಾಯಕನ ತಂದೆಯನ್ನು ಗ್ಲೋ ಇಫ್ಫೆಕ್ಟ್‌ಗೆ ಒಳಪಡಿಸುವುದು ಸರಿಯೆನಿಸುವುದಿಲ್ಲ . ಪ್ರೇಮಿಸುವ ದೃಶ್ಯಗಳಲ್ಲಿ  ಮದುವೆ ಮುಂಜಿಯ ವಿಡಿಯೋಗಳಂತೆ ಕೃತಕವಾಗಿ ಸೃಷ್ಟಿಸಿದ ಗಾರ್ಡನ್ಗಳ ಬಳಕೆ ಸಹಜತೆಯಿಂದ ದೂರ ನಿಲ್ಲುತ್ತದೆ .   ಉತ್ತರ ಕರ್ನಾಟಕದ ಪರಿಸರವನ್ನು ವಿಶೇಷವಾದ ಬಣ್ಣ ಬಳಕೆ ( ಕಲರ್ ಗ್ರೇಡಿಂಗ್ ) ಇಂದ ಶ್ರೀಮಂತಗೊಳಿಸಿದ್ದಾರೆ ಸಚಿನ್ .

ನಿರ್ದೇಶಕ ತನ್ನ ಕನಸನ್ನು ಹಾಕಿದ ಬಂಡವಾಳ ಮತ್ತು ಸಾಮಾನ್ಯ ಪ್ರೇಕ್ಷಕನ ಅಭಿರುಚಿಗಳೊಂದಿಗೆ ರಾಜಿ ಮಾಡಿಕೊಂಡಿರುವುದರಿಂದ  ಶ್ರೇಷ್ಟತೆಯಮೆಟ್ಟಿಲುಗಳನ್ನೇರುವ  ಅಪಾರ ಅವಕಾಶಗನ್ನು ತನ್ನೊಳಗೆ ಇಟ್ಟುಕೊಂಡಿದ್ದ ಕಥೆಯೊಂದು ನಿರೂಪಣೆ ಮತ್ತು ಚಿತಕಥೆಯಲ್ಲಿನ ತಪ್ಪುಗಳಿಂದಾಗಿ  ಉತ್ತಮ ಪ್ರಯತ್ನ ವಾಗಷ್ಟೇ ಉಳಿಯುತ್ತದೆ .  ಆದರೆ ನಿರ್ದೇಶಕರೇ ಹೇಳುವಂತೆ ಪ್ರಯೋಗಕ್ಕೆ ಸಾವಿದೆ ಪ್ರಯತ್ನಕ್ಕಲ್ಲ .   ಒಂದೊಳ್ಳೆ ಸಿನಿಮಾ ಮಾಡುವ ತುಡಿತ ಇಡೀ ಸಿನಿಮಾದಲ್ಲಿ ನಿಮಗೆ ಕಾಣುತ್ತದೆ  . ಆದಕ್ಕಾಗಿ ಸುನಿಗೆ ಶ್ಲಾಘನೆ  .  ವೇಗವಾಗಿ ಪಕ್ವಗೊಳ್ಳುತ್ತಿರುವ ಕನ್ನಡ ಕಮರ್ಶಿಯಲ್ ಸಿನೆಮಾ ಪ್ರಪಂಚಲ್ಲಿ ಬಹುಪರಾಕ್ ಮತ್ತೊಂದು  ದಿಟ್ಟ ಹೆಜ್ಜೆ .


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು