ದೃಶ್ಯಕ್ಕೊಂದು ನುಡಿಗಟ್ಟು

ಕಾಸರವಳ್ಳಿ ಕಂಡಂತೆ ಉಳಿದವರು..

(ಸಂವಾದ ಡಾಟ್ ಕಾಂ ಆಯೋಜಿಸಿದ ಉಳಿದವರು ಕಂಡಂತೆ ಸಂವಾದದಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಗಿರೀಶ್ ಕಾಸರವಳ್ಳಿಯವರ ಮಾತಿನ ಅಕ್ಷರ ರೂಪ) 

 

ನಮ್ಮಲ್ಲಿ ಒಂದು ಜನಪದ ಕತೆಯಿದೆ. ಅದು ಕುರುಡರು ಆನೆಯನ್ನ ಕಂಡಿದ್ದು. ನಾಲ್ಕು ಜನ ಕುರುಡರು ಆನೆಯನ್ನ ಮುಟ್ಟಿ ಅದನ್ನ ವರ್ಣಿಸುತ್ತಾರೆ. ಅದರ ಕಾಲನ್ನ ಮುಟ್ಟಿ ನೋಡುವವನಿಗೆ ಅದು ಕಂಬದ ತರಹ ಕಾಣುತ್ತದೆ. ಇನ್ನೊಬ್ಬ ಬಾಲವನ್ನ ಮುಟ್ಟಿ ನೋಡುತ್ತಾನೆ. ಅವನಿಗೆ ಆನೆ ಅಂದರೆ ಆ ಬಾಲ ಮಾತ್ರ. ಈ ಕತೆ ತುಂಬಾ ಮಹತ್ವದ ವಿಚಾರವೊಂದನ್ನ ಹೇಳುತ್ತದೆ. ಅದು 'ಅಂತಿಮ ಸತ್ಯ' ವೆಂಬುದು ಇಲ್ಲ. ಸತ್ಯ ನಮ್ಮ ನಮ್ಮ ಗ್ರಹಿಕೆಗೆ ತಕ್ಕಂತೆ ಎನ್ನುವುದು. ಉಳಿದವರು ಕಂಡಂತೆ ಚಿತ್ರದಲ್ಲಿ ಈ ತರಹದ ಕತೆ ಹೇಳುವ ಕ್ರಮವಿದೆ. ಬಹಳ ಮುಖ್ಯವಾಗಿ ಮೂರು ಕಾರಣಗಳಿಗಾಗಿ ಉಳಿದವರು ಕಂಡಂತೆ ಚಿತ್ರವನ್ನ ನಾನು ಮೆಚ್ಚಿಕೊಂಡೆ. ಸಂಕ್ಷಿಪ್ತವಾಗಿ ಅದನ್ನಿಲ್ಲಿ ವಿವರಿಸುತ್ತೇನೆ.

 

ನಮ್ಮ ಜನಪ್ರಿಯ ಸಿನೆಮಾಗಳಲ್ಲಿ ಕತೆ ಉದ್ದಕ್ಕೂ ಏಕ ಪ್ರಕಾರವಾಗಿ ಹರಿದು ಹೋಗಿ ಕೊನೆಗೆ ಕ್ಲೈಮ್ಯಾಕ್ಸ್ ಅನ್ನು ಮುಟ್ಟುತ್ತದೆ. ನಾನು ಯಾವುದೇ ಸಿನೆಮಾ ನೋಡುವಾಗ ಎರಡು ಸಂಗತಿಗಳನ್ನ ಹುಡುಕ್ತಾ ಇರ್ತೇನೆ. ಒಂದು ಚಿತ್ರದ ವಸ್ತು. ಆ ವಸ್ತು, ಅಥವಾ ಕತೆ ಯಾವ ಬಗೆಯಲ್ಲಿ ಸಾಮಾಜಿಕವಾದ ಸಾಂಸ್ಕೃತಿಕವಾಗಿ ಮಹತ್ವದ್ದಾದ ವಿಷಯವನ್ನ ಹೇಳುತ್ತಿದೆ ಎಂಬುದು ನನಗೆ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಉಳಿದವರು ಕಂಡಂತೆ ಚಿತ್ರ ಹೊಸದೇನನ್ನೂ ಹೇಳುತ್ತಿಲ್ಲ. ಆದರೂ ನಾನಿದನ್ನ ಮೆಚ್ಚಲು ಕಾರಣ ಇದರ ಪ್ರದರ್ಶನ ಕಲೆಯ ಗುಣಕ್ಕಾಗಿ. ಸಿನೆಮಾ ಕಥೆ ಹೇಳುವುದರ ಜೊತೆಗೆ ಪ್ರದರ್ಶನ ಕಲೆ ಕೂಡ ಎಂಬುದನ್ನ ಮರೆಯಬಾರದು. ಸಿನೆಮಾ ಆ ಕ್ಷಣದಲ್ಲಿ ತೆರೆ ಮೇಲೆ ಕಾಣ್ತಾ ಇರುವಾಗ ನಾವದನ್ನ ನೋಡಿ ಅನುಭವಿಸುತ್ತ ಇರುತ್ತೇವಲ್ಲ ಆ ಕಾರಣಕ್ಕಾಗಿಯೇ ಸಿನೆಮಾ ನಮಗೆ ಹೆಚ್ಚು ಇಷ್ಟವಾಗುತ್ತ ಹೋಗುತ್ತೆ.


ಈ ಸಿನೆಮಾ ನಮ್ಮ ಜನಪ್ರಿಯ ಸಿನೆಮಾ ಗಳ ಶಾಸ್ತ್ರೀಯವಾಗಿ ಹೇಳುವ ಕಥನ ಶೈಲಿಯನ್ನ ಬ್ರೇಕ್ ಮಾಡುತ್ತೆ. ಬ್ರೇಕ್ ಮಾಡಿ, ಇದು ಯಾವ ರೀತಿಯಲ್ಲಿ ನಮ್ಮನ್ನ ಬೌದ್ದಿಕವಾಗಿ ಕೆಣುಕುತ್ತಾ ಹೋಗುತ್ತೆ ಅಂದ್ರೆ , ನಿರ್ದೇಶಕ ನಾನಿದನೆಲ್ಲ ಪಜಲ್ ಥರ ಹೇಳ್ತಾ ಹೋಗ್ತೀನಿ. ಅದನ್ನ ನೀವು ಪುನರ್ ರೂಪಿಸಿಕೊಳ್ಳುತ್ತ ಹೋಗಿ ಎನ್ನುತ್ತಾನೆ. ಹಾಗೆ ಕಟ್ಟಿಕೊಳ್ಳುವ ಕ್ರಿಯೆಯಲ್ಲಿ ನಮಗೆ ಸಾಕಷ್ಟು ಹೊಸ ಆಯಾಮಗಳು ದೊರಕುತ್ತ ಹೋಗುತ್ತವೆ. ಭಾರತೀಯ ಸಿನೆಮಾ ಸಂದರ್ಭದಲ್ಲಿ ತುಂಬಾ ಕಡಿಮೆ ಜನ ಮಾಡಿರೋ ಪ್ರಯೋಗ ಇದು. ನಮಗೆ ಯಾವಾಗಲು ಒಂದು ಹೆದರಿಕೆ ಇರುತ್ತೆ. ಜನರನ್ನ ಯಾವಾಗ ಬೌದ್ಧಿಕವಾಗಿ ಸಿನೆಮಾದಲ್ಲಿ ತೊಡಗಿಕೊಳ್ಳಿ ಅಂದಾಕ್ಷಣ ಅವರು ಸಿನೆಮಾದಿಂದ ದೂರ ಹೋಗಿಬಿಡುತ್ತಾರೆ ಅಂತ. ಈ ಚಿತ್ರದ ವಿಮರ್ಶೆಗಳು ಬಂದಾಗ ಕೂಡ ಚಿತ್ರದಲ್ಲಿ ತುಂಬಾ ಗೊಂದಲ ಇದೆ ಎನ್ನುವ ಮಾತುಗಳು ಬಂದಿದ್ದವು. ಈ ಗೊಂದಲ ಯಾಕೆ ಹುಟ್ಟುತ್ತೆ ಅಂದರೆ ನಮ್ಮಲ್ಲಿ ತುಂಬಾ ಜನ ಕತೆಯನ್ನ ಸಿನೆಮಾ ತೀರಾ ಸರಳವಾಗಿ ಹೇಳಿಬಿಡಬೇಕು ಎಂದು ನಂಬಿದ್ದಾರೆ. ನಾನು ಖುರ್ಚಿಯಲ್ಲಿ ಆರಾಮಾಗಿ ಕುಳಿತು ತನ್ನ ತಲೆಗೆ ಕೆಲಸ ಕೊಡದೇ ಸಿನೆಮವನ್ನ ಆಸ್ವಾದಿಸಬೇಕು ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಒಂದು ಕತೆ, ಕವನ ನಮಗೆ ಅರ್ಥವಾಗದಿದ್ದಾಗ ಇನ್ನೊಮ್ಮೆ , ಮಗದೊಮ್ಮೆ ಓದಿ ಅರ್ಥ ಮಾಡಿಕೊಳ್ತೇವೆ. ಆದರೆ ಅದೇ ಸಿನೆಮಾ ಮಾತ್ರ ಮೊದಲ ನೋಟದಲ್ಲೇ ನಮ್ಮ ಗ್ರಹಿಕೆಗೆ ಅದು ದಕ್ಕಿ ಬಿಡಬೇಕೆಂಬ ಭಾವ ನಮ್ಮಲ್ಲಿದೆ. ಆದರದು ಹಾಗಾಗಬೇಕಾದ್ದಿಲ್ಲ. ಸಿನೆಮಾ ಕೂಡ ನೋಡಿ ಎಷ್ಟೋ ದಿನಗಳಾದ ಮೇಲೆ ನಮಗೆ ಅರ್ಥವಾಗಬಹುದು. ಈ ರೀತಿಯ ಕಟ್ಟುವ ಕ್ರಮ ನನಗೆ ಯಾಕೆ ಇಷ್ಟ ಅಗುತ್ತದೆ ಎಂದರೆ ಒಂದೇ ಬಗೆಯಲ್ಲಿ ಕತೆಯ ಬೆಳವಣಿಗೆ ನೋಡಿ ನೋಡಿ ನಮ್ಮ ಗ್ರಹಿಕೆಯೂ ಅಷ್ಟಕ್ಕೇ ಸೀಮಿತವಾಗಿಬಿಟ್ಟಿರುತ್ತದೆ. ಕತೆ ಬೆಳೆಯುವ ಹಾದಿ ನಮಗೆ ಮೊದಲೆ ತಿಳಿದಿದ್ದರಿಂದ ಹೀಗಾಗುತ್ತದೆ. ಆದರೆ ಈ ಬಗೆಯ (ಉಳಿದವರು ಕಂಡಂತೆ) ಸಿನೆಮಾದಲ್ಲಿ, ನಾವಂದುಕೊಂಡ ರೀತಿಯಲ್ಲಿ ಕತೆ ಸಾಗದಿದ್ದಾಗ ಸಹಜವಾಗಿಯೆ ಸಿನೆಮಾದ ಜೊತೆಗೆ ನಾವೂ ಬೆಳೆಯುತ್ತೇವೆ ನಮ್ಮ ಗ್ರಹಿಕೆಯೂ ವಿಸ್ತರಿಸುತ್ತ ಹೋಗುತ್ತದೆ. ರೋಚಕತೆಯನ್ನೇ ಪ್ರಧಾನವಾಗಿಟ್ಟುಕೊಳ್ಳದೇ, ಹಲವು ಸೆಗ್ಮೆಂಟ್ ಗಳಲ್ಲಿ ತುಣುಕು ತುಣುಕಾಗಿ ಹೇಳ್ತಾ ಹೋಗೋದರಲ್ಲೇ ಈ ಕತೆಯ ಸ್ವಾರಸ್ಯವಿದೆ.

 

ಎರಡನೇ ಕಾರಣವೆಂದರೆ, ಈ ಚಿತ್ರದ ಶಕ್ತಿಯಿರುವುದು ಅದರ ವಿವರಗಳ ಸಮೃದ್ದಿಯಲ್ಲಿ. ಸಾಮಾನ್ಯವಾಗಿ ಏನಾಗುತ್ತೆ ಅಂದ್ರೆ ನಮ್ಮ ಜನಪ್ರಿಯ ಸಿನೆಮಾಗಳಲ್ಲಿ ವಿವರಗಳೇ ಇರುವುದಿಲ್ಲ. ಇದು ಜನಪ್ರಿಯ ಸಿನೆಮಾಗಳ ಕುರಿತು ನನ್ನ ಆಕ್ಷೇಪವೂ ಹೌದು. ಅವರು ಬೇರೆ ಬೇರೆ ಭೌಗೋಳಿಕ ಪ್ರದೇಶದಲ್ಲಿ ಚಿತ್ರವನ್ನ ಚಿತ್ರೀಕರಿಸಿರಬಹುದು. ಆದರೆ ಕತೆಗೆ ಸಂಬಂಧಪಟ್ಟ ವಿವರಗಳು ಅಥವಾ ಕಥನವನ್ನ ವಿಸ್ತರಿಸುವ ವಿವರಗಳು ಈ ಜನಪ್ರಿಯ ಸಿನೆಮಾಗಳಲ್ಲಿರುವುದಿಲ್ಲ. ಇಂತಹ ಸಣ್ಣ ಪುಟ್ಟ ವಿವರಗಳು ಕತೆಗೆ ಬೇರೆಯದೇ ಅಯಾಮ ಕೊಡುವಷ್ಟು ಸಶಕ್ತವಾಗಿರುತ್ತದೆ. ಆ ಕೆಲಸ ಈ ಚಿತ್ರದಲ್ಲಿ ಆಗಿದೆ. ಅದನ್ನ ನಾನು ಮೈನರ್ ನರೇಟಿವ್ ಎಂದು ಕರೆಯುತ್ತೇನೆ. ನಮ್ಮ ಎಲ್ಲ ಪ್ರಮುಖ ಕಾದಂಬರಿಗಳಲ್ಲಿ ಇದನ್ನ ಕಾಣಬಹುದು. ಒಂದು ಮುಖ್ಯ ಕಥಾನಕದ ಜೊತೆಗೆ ಇಂತಹ ಸಮೃದ್ಧ ವಿವರಗಳ ಉಪ ಕಥಾನಕವೂ ಸಾಗುತ್ತಿರುತ್ತದೆ. ನಮ್ಮ ಜನಪ್ರಿಯ ಸಿನೆಮಾಗಳಲ್ಲಿ ಅದು ನಿಮಗೆ ಸಿಗುವುದಿಲ್ಲ. ಆದರೇ ಉಳಿದವರು ಕಂಡಂತೆ ಇಂತಹ ಸಶಕ್ತ ವಿವರಗಳಿಂದ ಸಮೃದ್ಧವಾಗಿದೆ ಎನ್ನುವ ಕಾರಣಕ್ಕೆ ನನಗೆ ಮೆಚ್ಚಿಗೆಯಾಗಿದೆ. ಹೇಗೆ ಚಿಕ್ಕ ಚಿಕ್ಕ ಶಾಟ್ ಮತ್ತು ಸಂಭಾಷಣೆಗಳಲ್ಲಿ ಇದು ವ್ಯಕ್ತವಾಗಿದೆ ಎನ್ನುವುದನ್ನ ಹಲವು ದೃಶ್ಯಗಳಲ್ಲಿ ನೋಡಬಹುದು.

ಡೆಮಾಕ್ರಸಿ ರೇ ಬಾನ್ ಗ್ಲಾಸ್ ಗಾಗಿ ಹಾತೊರೆಯುವುದನ್ನ ನೀವೊಂದು ಕಾಮಿಡಿ ದೃಶ್ಯ ಅಂತ ತೊಗೊಂಡು ಸುಮ್ಮನಾಗಿಬಿಟ್ರೆ ತಪ್ಪಾಗಿಬಿಡುತ್ತೆ. ಆ ಚಿಕ್ಕ ವಿವರದ ಮೂಲಕ , ಕರಾವಳಿಯ ಸುತ್ತ ಸಣ್ಣ ಸಣ್ಣ ಆಸೆಗಳನ್ನ ಹುಟ್ಟಿಹಾಕುವ ವ್ಯಾಪಾರದ ಜಾಲವನ್ನ ಸೂಕ್ಷ್ಮವಾಗಿ ತೋರಿಸುತ್ತೆ. ರಘು ದೇಶಪಾಂಡೆಯ ಪಾತ್ರ "ನೀ ದುಬೈ ಗೆ ಬಾ ಅನ್ನುವುದು.." ಒಂದು ಚಿಕ್ಕ ಸಂಭಾಷಣೆ ಎನಿಸಿದರೂ ಇಡೀ ಕರಾವಳಿಯ ಕನಸು ಅದರಲ್ಲಿ ಅಡಕವಾಗಿದೆ. ಇದನ್ನೇ ನಾನು ಪುಟ್ಟ ಪುಟ್ಟ ವಿವರಗಳ ಸಮೃದ್ಧಿ ಎಂದು ಕರೆಯುವುದು. ಈ ತರಹದ್ದು ಸಾಕಷ್ಟು ಉಳಿದವರು ಕಂಡಂತೆ ಯಲ್ಲಿದೆ ಮತ್ತು ಇಂತಹ ಸಮೃದ್ದ ವಿವರಗಳು ಚಿತ್ರಕ್ಕೊಂದು ಪೌಷ್ಟಿಕ ದೇಹವನ್ನೊದಗಿಸಿದೆ.

 

ಇನ್ನು ಪ್ರಾದೇಶಿಕತೆಯೂ ಚಿತ್ರದೊಳಗೆ ಹಾಸು ಹೊಕ್ಕಿರುವುದನ್ನ ಮಚವೆ ಕಟ್ಟುವ ದೃಶ್ಯ, ಹುಲಿ ವೇಷ, ಯಕ್ಷಗಾನದ ದೃಶ್ಯಗಳಲ್ಲಿ ಕಾಣಬಹುದು. ಭಾಷೆಯ ಬಳಕೆ ಕೂಡ ಈ ಚಿತ್ರದ ಇನ್ನೊಂದು ಗಮನಾರ್ಹ ಅಂಶ, ನಾನೂ ಕುಂದಾಪುರದ ಕನ್ನಡವನ್ನ ಬಳಸಿ ಗುಲಾಬಿ ಟಾಕೀಸ್ ಚಿತ್ರ ಮಾಡಿದ್ದೆ. ಇದರಲ್ಲಿ ಕುಂದಾ ಕನ್ನಡದ ಜೊತೆಗೆ ಉತ್ತರ ಕನ್ನಡದ ಭಾಷೆ ಇದೆ ಜೊತೆಗೆ ಮಂಡ್ಯ ಭಾಷೆಯೂ ಇದೆ. ಕಿಶೋರ್ ಮಾಡಿದ ಪಾತ್ರ ಮಂಡ್ಯ ಭಾಷೆ ಮಾತನಾಡುವುದು ಕೇವಲ ವೈವಿಧ್ಯತೆಗಾಗಿ ತಂದಂತೆ ನನಗನಿಸಿಲ್ಲ. ಲೇಬರ್ ಪ್ಲೋ ಬಗ್ಗೆ ಇಂಟರಸ್ಟಿಂಗ್ ಕಮೆಂಟ್ ಅದು ಅನಿಸ್ತು. ಅಂದರೆ ಕೆಲಸಕ್ಕಾಗಿ ಜನ ಮಂಗಳೂರಿನಿಂದ ದುಬೈ ಗೆ ಹೋಗುವುದು, ಮಂಡ್ಯದಿಂದ ಮಂಗಳೂರಿಗೆ ಬರುವುದು, ಇದು ಇಂಟರೆಸ್ಟಿಂಗ್ ಆಗಿದೆ.

 

ಇನ್ನೊಂದು ಬಹಳ ಮುಖ್ಯವಾದದ್ದು ಏನಂದರೆ ಈ ಚಿತ್ರದಲ್ಲಿ ಎಲ್ಲವನ್ನ ಸಬ್ ವರ್ಟ್ ಮಾಡುವ ಪ್ರಯತ್ನ ನನಗೆ ತುಂಬಾ ಮೆಚ್ಚಿಗೆ ಆಯ್ತು. ಸಬ್ ವರ್ಷನ್ ಅಂದ್ರೆ ಈ ಕತೆಯ ಮುಖ್ಯ ಎಳೆಯೇ ಭೂಗತ ಜಗತ್ತಿಗೆ ಸಂಬಂಧ ಪಟ್ಟಿದ್ದು. ಭೂಗತ ಜಗತ್ತು ಅಂದ ತಕ್ಷಣ ಅದರಲ್ಲಿ ರಕ್ತಪಾತ, ಹಿಂಸೆ ಇವುಗಳೇ ತುಂಬಿಕೊಂಡಿರುತ್ತವೆ. ಈ ಚಿತ್ರದಲ್ಲಿ ಅದೆಲ್ಲವೂ ಇದೆ ಆದರೆ ತೆರೆ ಮೇಲೆ ಯಾವುದೂ ನಿಮಗೆ ಕಾಣುವುದಿಲ್ಲ, ಹಿಂಸೆಯನ್ನ ತೆರೆಯ ಮೇಲೆ ವೈಭವಿಕರಿಸದೇ ಇರುವುದು. ಒಂದು ಕತೆ , ಕಥಾನಕವಾಗಬೇಕಾದರೆ ಇದು ತುಂಬಾ ಮುಖ್ಯ. ಉದಾಹರಣೆಗೆ ರಿಚಿ, ನಿಕ್ಸನ್ ನ ಮೂಗನ್ನ ಚಚ್ಚುವುದು. ಅದನ್ನ ಚಿತ್ರೀಕರಿಸಿರುವ ಕ್ರಮ ನೋಡಿ. ಅವನು ನಿಕ್ಸನ್ ಗೆ ಸಿಕ್ಕಾಪಟ್ಟೆ ಹೊಡೆದದ್ದು ನಮಗೆ ಅನುಭವ ಗಮ್ಯವಾಗುತ್ತದೆ, ಆದರೇ ಆ ಹಿಂಸೆ ತೆರೆಯ ಮೇಲಿಲ್ಲ. ಜನಪ್ರಿಯ ಸಿನೆಮಾದ ಈ ಆಕರ್ಷಕ ತಂತ್ರಗಳನ್ನ ಸಬ್ ವರ್ಟ್ ಮಾಡಿ ಅವರದನ್ನ ಬಳಸದೇ ಇರುವುದು ಗಮನಾರ್ಹ. ಮುಖ್ಯ ನಾಯಕ ಪಾತ್ರಧಾರಿಯ ಸಂಭಾಷಣೆಯೂ ಅಷ್ಟೇ. ನಮ್ಮ ಜನಪ್ರಿಯ ನಾಯಕರ ಥರ ಅನಾವಶ್ಯಕ ಏರಿಳಿತಗಳಿಲ್ಲದೇ ತೀರಾ ಸಹಜವಾಗಿ ಬಂದಿದೆ.ಹೊಡೆತ ತಿಂದ ನಿಕ್ಸನ್ ನ ಮುಖ ತೋರಿಸುವಾಗ ಮಧ್ಯೆ ಕ್ರಿಕೆಟ್ ಸ್ಟಂಪ್ಸ್ ಕಾಣುತ್ತದೆ. ಕ್ರಿಯೆ ಅನುಭವಕ್ಕೆ ಬರಬೇಕು ಆದರದು ತೆರೆಯ ಮೇಲೆ ಕಾಣಬಾರದು. ಇದೇ ಸಂದರ್ಭ ಜನಪ್ರಿಯ ಸಿನೆಮಾದಲ್ಲಿದ್ದರೇ ಪ್ರೆಕ್ಷಕನನ್ನೇ ಹೊಡೆಯುವಷ್ಟು ರೋಚಕವಾಗಿ ಅದನ್ನ ಚಿತ್ರಕರಿಸಲಾಗುತ್ತಿತ್ತು . ಒಂದು ಸಿನೆಮಾ ಫ್ಯಾಸಿಸ್ಟ್ ಆಗೋದು ಅದು ಆ ಕ್ಷಣದ ಪ್ರತಿಕ್ರಿಯೆ ಬೇಡಿದಾಗ. ಒಂದು ಒಳ್ಳೆಯ ಸಿನೆಮಾ ನಿಮ್ಮನ್ನ ಡಿಸ್ಟರ್ಬ್ ಮಾಡುತ್ತೆ. ಈ ಚಿತ್ರವೂ ನಿಮ್ಮನ್ನ ಡಿಸ್ಟರ್ಬ್ ಮಾಡುತ್ತೆ. ಈ ಸಿನೆಮಾದ ಶಕ್ತಿ ಅದು ಹಿಂಸೆಯ ಬಗ್ಗೆಯೇ ಆಗಿರಬಹುದು-ಭೂಗತ ಜಗತ್ತೇ ಆಗಿರಬಹುದು- ಆದರೇ ಪ್ರಾದೇಶಿಕ ಸಂಸ್ಕೃತಿಯನ್ನ ಬಹಳ ಗಟ್ಟಿಯಾಗಿ ಕಟ್ಟಿಕೊಡುತ್ತದೆ ಮತ್ತು ಇಡೀ ಸಿನೆಮಾ ಅದಮ್ಯ ಜೀವನ ಪ್ರೀತಿಯಿಂದ ಕೂಡಿದೆ. ಇದೆಲ್ಲದರ ಜೊತೆಗೆ ಪ್ರೇಕ್ಷಕನನ್ನ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸುತ್ತದೆ.

 

ಈ ಸಿನೆಮಾದ ಕುರಿತು ಸಾಕಷ್ಟು ಆಕ್ಷೇಪಣೆಗಳೂ ಇವೆ. ಅದರಲ್ಲಿ ಮುಖ್ಯವಾದದ್ದು ತಂತ್ರಗಾರಿಕೆಯ ಕುರಿತು. ಛಾಯಾಗ್ರಹಣ ಸುಂದರವಾಗಿದೆ ಆದರೆ ಅದರಲ್ಲಿ ಕನ್ಸಿಸ್ಟೆನ್ಸಿ ಇಲ್ಲ. ಕೆಲವು ಕಡೆ ಮೊನೊ ಕ್ರಾಮಾಟಿಕ್ ಆಗುತ್ತೆ. ಇಡೀ ಶೈಲಿಗೆ ಇದು ಹೊಂದಿಕೊಳ್ಳುತ್ತಾ ಅನ್ನುವುದರ ಬಗ್ಗೆ ನನಗೆ ಅನುಮಾನವಿದೆ. ಇನ್ನೊಂದು ಆಕ್ಷೇಪಣೆ ಚಿತ್ರದ ಆರಂಭ ಮತ್ತು ಅಂತ್ಯ ತೀರಾ ವಾಚ್ಯವಾಗಿದೆ. ಆದರೆ ಇದು ಯಾಕೆ ಬಂತು ಅನ್ನೋದು ನನಗೆ ಗೊತ್ತಿದೆ. ಪ್ರೇಕ್ಷಕ ಗೊಂದಲಕ್ಕಿಡಾಗಿಬಿಡಬಹುದು ಎನ್ನುವ ಕಾರಣಕ್ಕೆ ಅದು ಹಾಗಾಗಿರಬಹುದು. ಉಳಿದವರಿಗೆ ಅದು ಸರಿ ಎನಿಸಿರಬಹುದು ಆದರೆ ನನಗೆ ಆರಂಭ ಮತ್ತು ತುದಿ ಸ್ವಲ್ಪ ಹೆಚ್ಚೇ ವಾಚ್ಯವಾಯಿತೆನೋ ಅನಿಸಿತು.

 

ಉಳಿದವರು ಕಂಡಂತೆ ಕನ್ನಡ ಸಿನೆಮಾಗಳ ಮಟ್ಟಿಗೆ ಬಹಳ ಒಳ್ಳೆಯ ಮತ್ತು ವಿಶಿಷ್ಟ ಪ್ರಯತ್ನ.

 

 

 

 


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು