ದೃಶ್ಯಕ್ಕೊಂದು ನುಡಿಗಟ್ಟು

ಸಂವಾದ ಶಿಬಿರದ ಒಂದು ವರದಿ

ಸಂವಾದ ಡಾಟ್ ಕಾಮ್ ಆಯೋಜಿಸಿದ್ದ ಸಿನಿಮ ಓದುವುದು ಹೇಗೆ: ಸಿನಿಮ ವಿಮರ್ಶೆಯ ಮೊದಲ ಹೆಜ್ಜೆಗಳು ಶಿಬಿರದ ವರದಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿ ವಿನಯ್ ವಾಂಡ್ಕರ್ ಕಳಿಸಿಕೊಟ್ಟಿದ್ದಾರೆ. ಅವರಿಗೆ ಸಂವಾದ ಡಾಟ್ ಕಾಮ್ ಪರವಾಗಿ ವಂದನೆಗಳು.

How to read a film camp attendeesಸಂವಾದ ಡಾಟ್ ಕಾಮ್ ನ ವತಿಯಿಂದ ಸಿನಿಮಾ ಓದುವುದು ಹೇಗೆ ? ಎಂಬ ವಿಷಯವಾಗಿ ಜನೆವರಿ ೧೦,೧೧ ಮತ್ತು ೧೨ ರಂದು ತುಮಕೂರು ಜಿಲ್ಲೆ ತೋವಿನಕೆರೆ ಹತ್ತಿರದ ಓದೇಕಾರ್ ಫಾರ್ಮ್‌ನಲ್ಲಿ ೩ ದಿನಗಳ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಾಗಾರದ ಮುಖ್ಯ ಉದ್ಧೇಶ ಒಂದು ಸಿನಿಮಾವನ್ನು ಸಂಪೂರ್ಣವಾಗಿ ಓರೆಗೆ ಹಚ್ಚಿ , ಅದನ್ನು ಹಲವಾರು ಮಾನದಂಡಗಳಿಂದ ಪರಿಶೀಲಿಸಿ , ವಿಮರ್ಶಿಸುವ ಸಾಧ್ಯತೆಗಳನ್ನು ಚರ್ಚಿಸುವುದಾಗಿತ್ತು. ಇನ್ನು ಕಾರ್ಯಾಗಾರದ ಸಂಪೂರ್ಣ ಉತ್ಸುವಾರಿ ಸಂವಾದ.ಕಾಮ್ ಬಳಗ ವಹಿಸಿಕೊಂಡಿತ್ತು. ಮುಖ್ಯ ಅಥಿತಿಗಳಾಗಿ  ಚಲನಚಿತ್ರ ಇತಿಹಾಸಕಾರ ಡೇವಿಡ್ ಬಾಂಡ್ , ಚಿತ್ರನಿರ್ದೇಶಕ ಬಿ.ಸುರೇಶ್ ಭಾಗವಹಿಸಿದ್ದರು.ಶಿಬಿರದ ಮುಖ್ಯ ಸಮನ್ವಯಕರಾಗಿ ಅದರ ಸಂಪೂರ್ಣ ನಿರ್ದೇಶನ ವಹಿಸಿದ್ದು ಪತ್ರಕರ್ತ ಮತ್ತು ಸಂವಾದ ಬಳಗದ ಮುಖ್ಯ ಸದಸ್ಯರಾಗಿರುವ ಶೇಖರ್ ಪೂರ್ಣ.ಅಲ್ಲದೇ ಈ ಕಾರ್ಯಾಗಾರದಲ್ಲಿ
ಬೆಂಗಳೂರು,ತುಮಕೂರು,ಧಾರವಾಡ,ಶಿವಮೊಗ್ಗ ಹೀಗೆ ರಾಜ್ಯದ ನಾನಾ ಕಡೆಗಳಿಂದ ಸಿನಿಮಾ ಆಸಕ್ತರು, ವಿಧ್ಯಾರ್ಥಿಗಳು ಶಿಭಿರಾರ್ಥಿಗಳಾಗಿ ಭಾಗವಹಿಸಿದ್ದರು.

ಶಿಬಿರದ ಮೊದಲ ದಿನವಾದ ಶುಕ್ರವಾರ ಸಂಜೆ ೭ ಗಂಟೆ ಸುಮಾರಿಗೆ ಸಂವಾದ ಬಳಗದ ಶೇಖರ್ ಪೊರ್ಣರವರಿಂದ ಶಿಬಿರಾರ್ಥಿಗಳಿಗೆ ಮಾಹಿತಿ ಕೊಡುವುದರ ಮೂಲಕ ಶಿಬಿರಕ್ಕೆ ಅಧಿಕೃತ ಚಾಲನೆ ದೊರಕಿತು. ನಂತರ ಸಿನಿಮಾ ಇತಿಹಾಸಕಾರ ಡೇವಿಡ್ ಬಾಂಡ್ ಸಿನಿಮಾ ವಿಮರ್ಶೆಯ ಬಗ್ಗೆ ಹಲವು ಉಪಯುಕ್ತ ಮಾಹಿತಿಗಳನ್ನು
ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರು. ನಂತರ ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ ಸ್ಲಂ ಡಾಗ್ ಮಿಲೇನಿಯರ್ ಚಿತ್ರವನ್ನು ಪ್ರದರ್ಶಿಸಲಾಯಿತು.

ಶಿಬಿರದ ಎರಡನೇದಿನ ಬೆಳಿಗ್ಗೆ ಹಿಂದಿನ ದಿನ ನೋಡಿದ ಸ್ಲಂ ಡಾಗ್ ಮಿಲೇನಿಯರ್ ಚಿತ್ರದ ಬಗ್ಗೆ ವಿಮರ್ಶೆ ಬರೆಯುವಂತೆ ಶಿಬಿರಾರ್ಥಿಗಳಿಗೆ ಸೂಚಿಸಲಾಯಿತು. ಅದರಂತೆ ಶಿಬಿರಾರ್ಥಿಗಳು ಬರೆದಂತಹ ವಿಮರ್ಶೆಗಳನ್ನೇ ಕೇಂದ್ರವಾಗಿಟ್ಟುಕೊಂಡು ಸುಮಾರು ೨ ಗಂಟೆಗಳ ಕಾಲ ಸುಧೀರ್ಘ ಚರ್ಚೆ ನಡೆಯಿತು. ಈ ಚರ್ಚೆಯಲ್ಲಿ ಡೇವಿಡ್ ಬಾಂಡ್,ಶೇಖರ್ ಪೊರ್ಣ,ಚಿತ್ರ ನಿರ್ದೇಶಕ ಬಿ.ಸುರೇಶ್ ಮುಂತಾದವರು ಭಾಗವಹಿಸಿದ್ದರು. ಬ್ರಿಟನ್ ಮೂಲದ ನಿರ್ದೇಶಕನೊಬ್ಬ ಭಾರತೀಯ ಜನಜೀವನವನ್ನು ಹಿಡಿದಿಟ್ಟ ಬಗೆಯ ಬಗ್ಗೆ ಹೆಚ್ಚು ಚರ್ಚೆಯಾಯಿತು. ಚರ್ಚೆಯಲ್ಲಿ ಶೇಖರ್ ಪೊರ್ಣರವರು ಒಂದು ಚಿತ್ರವನ್ನು ಯಾವ ದೃಷ್ಟಿಕೋನದಿಂದ ನೋಡಬೇಕು, ಮತ್ತು ಚಿತ್ರವನ್ನು ಯಾವ ಯಾವ ಮಾನದಂಡಗಳಿಂದ ವಿಮರ್ಶಿಸಬೇಕು ಎಂಬೆಲ್ಲ ವಿಷಯಗಳನ್ನು ಶಿಬಿರಾರ್ಥಿಗಳೊಂದಿಗೆಹಂಚಿಕೊಂಡರು.

ಖ್ಯಾತ ಚಿತ್ರ ನಿರ್ದೇಶಕ ಬಿ.ಸುರೇಶ್ ಚಿತ್ರವನ್ನು ನೋಡುವಾಗ ಮತ್ತು ವಿಮರ್ಶಿಸುವಾಗ ಕೆಲವೊಂದು ಮುಖ್ಯವಾದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು , ಇದರಿಂದ ಚಿತ್ರ ನಿರ್ದೇಶಕ ಏನನ್ನು ಹೇಳ ಹೊರಟಿದ್ದಾನೆ ಎಂಬುದನ್ನು ತಿಳಿಯಬಹುದು  ಎಂಬೆಲ್ಲ ಅಂಶಗಳನ್ನು ತಿಳಿಸಿಕೊಟ್ಟರು. ಇನ್ನು ಚಿತ್ರ ಇತಿಹಾಸಕಾರ ಡೇವಿಡ್ ಬಾಂಡ್ ತಮ್ಮ ಅಪಾರ ಅನುಭವಗಳ-ಅಧ್ಯಯನಗಳ ಬುತ್ತಿಯಿಂದ ಸಾಂದರ್ಭಿಕ ಉಧಾಹರಣೆಗಳ ಸಹಿತ ಚಿತ್ರವಿಮರ್ಶೆಗಳ ಕೌತುಕಗಳನ್ನು ವಿವರಿಸಿದರು.

ಅವತ್ತೇ ಸಂಜೆ ಭಾರತೀಯ ಮೂಲದ ನಿರ್ದೇಶಕ ನಿರ್ದೇಶಿಸಿದ ದಿ ವಿಲೇಜ್ ಚಿತ್ರ ಪ್ರದರ್ಶನ ನಡೆಯಿತು. ಶಿಬಿರದ ಕೊನೆಯದಿನದ ಬೆಳಿಗ್ಗೆ ದಿ ವಿಲೇಜ್ ಚಿತ್ರದ ಬಗ್ಗೆ ಚರ್ಚಿಸಿ, ಶಿಬಿರಾರ್ಥಿಗಳಲ್ಲಿ ೪-೫ ಜನರ ೪ ಗುಂಪುಗಳನ್ನು ಮಾಡಿ ಚಿತ್ರದ ಬಗ್ಗೆ ವಿಮರ್ಶೆ ಬರೆಯುವಂತೆ ಶಿಬಿರಾರ್ಥಿಗಳಿಗೆ ಸೂಚಿಸಲಾಯಿತು. ನಂತರ ಅವೆಲ್ಲಾ ವಿಮರ್ಶೆಗಳನ್ನು ಓರೆಗೆ ಹಚ್ಚಿ ಚರ್ಚಿಸಲಾಯಿತು.

ಕೊನೆಯ ದಿದ ಅಪರಾಹ್ನ ಶಿಬಿರಕ್ಕೆ ಅಧಿಕೃತವಾಗಿ ಸಮಾರೋಪ ಸಮಾರಂಭವನ್ನು ನಡೆಸಿಕೊಡಲಾಯಿತು. ಸಮಾರೋಪ ಸಮಾರಂಭದಲ್ಲಿ ಈ ಶಿಬಿರದ ಕುರಿತು ಶಿಬಿರಾರ್ಥಿಗಳೆಲ್ಲ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕೊನೆಯಲ್ಲಿ ಶಿಬಿರದಲ್ಲಿ ಭಾಗವಹಿಸಿದವರೆಲ್ಲರಿಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಒಟ್ಟಿನಲ್ಲಿ ೩ ದಿನಗಳ ಈ ಕಾರ್ಯಾಗಾರವು ತುಂಬಾ ಅಚ್ಚುಕಟ್ಟಾಗಿ ಹಾಗೆಯೇ ಅಷ್ಟೇ ಅರ್ಥಪೂರ್ಣವಾಗಿ ನಡೆಯಿತು. ಈ ಮೂಲಕ ಸಂವಾದ ಬಳಗದ ಮತ್ತೊಂದು ಪ್ರಯತ್ನ ಸಾರ್ಥಕ್ಯ ಪಡೆಯಿತು.

 


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು