ದೃಶ್ಯಕ್ಕೊಂದು ನುಡಿಗಟ್ಟು

ಶ್ರದ್ಧಾ ಮತ್ತು ಸ್ಟೈನ್‍ಲೆಸ್ ಸ್ಟೀಲ್ ಪಾತ್ರೆಗಳು

A review on shraddha stainless steel patregalu drama, ಶ್ರದ್ಧಾ ಮತ್ತು ಸ್ಟೈನ್‍ಲೆಸ್ ಸ್ಟೀಲ್ ಪಾತ್ರೆಗಳುವಟಿ ಕುಟೀರದ ನಾಟಕಗಳೆಂದರೆ ತಿಂಗಳುಗಟ್ಟಲೇ ಮೊದಲೇ ನಿರೀಕ್ಷೆ ಹುಟ್ಟಿಸಿರುತ್ತವೆ, ಪುನೀತ್ ನ ಸಿನಿಮಾಗಳ ಹಾಗೆ! ಅದರಲ್ಲೂ ಶ್ರೀನಿವಾಸ ವೈದ್ಯ ಮತ್ತು ವಸುದೇಂದ್ರ ರಂತಹ ಹಾಟ್ ಕೇಕ್ ಗಳ ಕಥೆಗಳೆಂದರೆ ನಿರೀಕ್ಷೆಗಳ ತೂಕ ಕೊಂಚ ಹೆಚ್ಚೇ ಇರುತ್ತದೆ. ತಾಸುಗಟ್ಟಲೇ ಮಾತನಾಡಿದರೂ  ತನ್ನ ಜೊತೆ ನಿಂತವರಿಗೆ ಒಂದಿನಿತೂ ಬೋರಾಗದಂತೆ ಸ್ವಾರಸ್ಯಕರವಾಗಿ ಮಾತನಾಡಬಲ್ಲ, ಘಟನೆಗಳನ್ನು ಹೆಣೆದು ಕಥೆಯಾಗಿಸಿ ಮುಂದಿಡಬಲ್ಲ ಕಲೆ ಕಿರಣ್ ವಟಿಗೆ ಸಹಜವೆಂಬಂತೆ ಸಿದ್ಧಿಸಿದೆ.ಅವರ ಮಾತಿನ ಲಹರಿಯನ್ನು ಮೆಚ್ಚುವವರಲ್ಲಿ ನಾನೂ ಒಬ್ಬ. ವಟಿಯ ಅನೇಕ ನಾಟಕಗಳನ್ನು ಹಿಂದೆ ನೋಡಿದಾಗ ಒಬ್ಬೊಬ್ಬರಿಗೂ ಇಷ್ಟುದ್ದದ ಸಂಭಾಷಣೆಗಳೇಕಿವೆ ಎಂದೆನಿಸುತ್ತಿತ್ತು. ಇದು ಶ್ರದ್ಧಾ ಮತ್ತು ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳಿಗೂ ಅನ್ವಯಿಸುತ್ತದೆ. ಬಹುಷಃ ಇದು ಯಾವುದೇ ಘಟನೆಯನ್ನು ವಿಸ್ತೃತವಾಗಿ ಹೇಳುವ ಕಿರಣ್ ವಟಿಯ ವ್ಯಕ್ತಿತ್ವದ ಮುಂದುವರಿದ ಭಾಗವೇ ಎನ್ನಬಹುದೇನೋ!

ಲೋ ವೇಸ್ಟ್ ಪೈಜಾಮ ಧರಿಸಿದ  ಶ್ರೀನಿವಾಸ ವೈದ್ಯರ ಪಾತ್ರಧಾರಿಯ ನಿತಂಬದರ್ಶನದ ಮೂಲಕ ಶುರುವಾದ ಶ್ರದ್ಧಾ (http://kendasampige.com/article.php?id=1877) ನಾಟಕ, ಮುಖ್ಯ ಪಾತ್ರಧಾರಿಯ ಸಂಭಾಷಣೆಯ ಒಂದು ವಾಕ್ಯ ಧಾರವಾಡ ಕನ್ನಡ ಮತ್ತು ಒಂದು ವಾಕ್ಯ ಮೈಸೂರು ಕನ್ನಡದ ನಡುವೆ ತುಯ್ದಾಡುತ್ತಾ ಮುಂದೆ ಸಾಗಿತು! ಆಗದಿದ್ದರೆ ಬಿಟ್ಟರಾಯಿತು..ಅನುಕೂಲವಾಗುವ ನುಡಿಯಲ್ಲೇ ಮಾತನಾಡಿದರಾಯಿತು.  ಅದೇಕೆ ಮಾತನಾಡಲಾಗದೇ ತಿಣುಕಿ ನಮ್ಮ ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಪೇಲವಗೊಳಿಸಬೇಕು? ಏನು ಮಾತನಾಡಿದರೂ ನಡೆಯುತ್ತದೆ ಎಂಬ ಅಸಡ್ಡೆಯ ಪ್ರತಿಫಲ ಇದು. ಉತ್ತರ ಕರುನಾಡಿನ ಕನ್ನಡದಲ್ಲಿ ಸುಮಾರು ಇಪ್ಪತ್ತು ವೈವಿಧ್ಯಗಳಿವೆ. ಧಾರವಾಡ ಬ್ರಾಹ್ಮಣರ ಭಾಷೆಗೆ ತನ್ನದೇ ನಾಜೂಕಿದೆ. ಅದೇ ನಾಜೂಕು ಮೈಸೂರು ಬ್ರಾಹ್ಮಣರ ನಾಲಿಗೆಗೆ ಇದೆ. ಈ ನಾಜೂಕುಗಳ ಸಮನ್ವಯವೇ ಸಂಭಾಷಣೆಯನ್ನು ಕೊಂಚ ಸಹನೀಯವೆನಿಸುವಂತೆ ಮಾಡಿತ್ತು ಎಂದರೆ ತಪ್ಪಾಗಲಾರದು.
ಕಿರಣ್ ವಟಿ ಉತ್ತರ ಕರುನಾಡಿನ ಮಣ್ಣಿನ ವಾಸನೆಯನ್ನು ಹಿಡಿದಿಡಲು ತಪ್ಪಿದ್ದಾರೆ ಎನ್ನಲು ಅನೇಕ ಸಾಕ್ಷಿಗಳಿದ್ದವು. "ತಲಿ ಬೋಳಿಸ್ಕೋಳಲಿಕ್ಕೆ ಹೇಳ್ರಿ " ಎಂಬ ಪಂಚಿಂಗ್ ಡಯಲಾಗನ್ನು ಪಾತ್ರಧಾರಿ ಬಹಳವೇ ಪೇಲವವಾಗಿ ಹೇಳಿದರು. ಆ ಮಾತಿನ ಹಿಂದಿದ್ದ ಭಾವವನ್ನು ಅರಿಯಲು ಪಾತ್ರಧಾರಿ ಸಂಪೂರ್ಣ ಸೋತಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಅಸಲಿಗೆ ಪಾತ್ರಧಾರಿಯ ಆಯ್ಕೆಯೇ ತಪ್ಪಾಗಿತ್ತು! ಧ್ವನಿಯಲ್ಲಿ ಗಡಸಿಲ್ಲ, ಸಂಭಾಷಣೆಯಲ್ಲಿ ಬಿರುಸಿಲ್ಲ. ತಲೆ ಬೋಳಿಸ್ಕೊಳ್ಳಿ ಎಂದು ಯಾಕೆ ಹೇಳುತ್ತಿದ್ದರು ಎಂಬುದು ಕಥೆ ಓದದ ಯಾರಿಗೂ ಅರ್ಥವಾಗಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅಲ್ಲದೇ ನಿಂಬೆ ಹಣ್ಣನ್ನು ಚುಚ್ಚಿಕೊಳ್ಳಬಲ್ಲ ಚೂಪು ಮೀಸೆ ಎಲ್ಲಿ ಹೋಗಿತ್ತು ? ತಿಳಿಯಲಿಲ್ಲ. 

ಕಥೆಗೆ ಆದ ಅನ್ಯಾಯದ ಮಟ್ಟ ಹೋಲಿಸಿದರೆ ವಸುದೇಂದ್ರರ "ಸ್ಟೀಲ್ ಪಾತ್ರೆ" ಶ್ರದ್ಧಾಕಿಂತಾ ಬಹಳವೇ ಲಕ್ಕಿ! ಮನೋರಂಜನಾತ್ಮಕವಾಗಿ ಮುಂದಿಟ್ಟಿರುವ ಪರಿ ಅತ್ಯಂತ ಮೆಚ್ಚತಕ್ಕದ್ದು. ಅದರಲ್ಲೂ ಪಾತ್ರೆ ಕೊಳ್ಳುವ ಸಮಯದಲ್ಲಿ ದುರ್ಗೆಯ ಅವತಾರವಕ್ಕೆ ಸಮೀಕರಿಸಿದ ರೀತಿ ಅಗದೀ ಸೂಪರ್! ಕಿರಣ್ ವಟಿಯಲ್ಲಿರುವ ತುಂಟ ಪ್ರತಿಭಾವಂತ ಎದೆ ಸೆಟೆಸಿ ಹೊರಬಂದ ಗಳಿಗೆ ಅದು. ಆ ಸೀನಿನಲ್ಲಿ ಪಾತ್ರಧಾರಿಗಳು, ಕಥೆಗಾರ, ರಂಗಸಜ್ಜಿಕೆ ಎಲ್ಲವೂ ನೈಪಥ್ಯಕ್ಕೆ ಸರಿದು ನಿರ್ದೇಶಕ ವಿಜೃಂಭಿಸುತ್ತಾನೆ. 

ಎಲ್ಲ ಆಕ್ಷೇಪಗಳಿಗೂ ರಂಗಕರ್ಮಿಗಳ ಬಳಿ ವಿವರಣೆಗಳಿರುತ್ತವೆ. ನಾಟಕ ಅಂದರೆ ಅದೆಂತಹ ಕಷ್ಟ, ನಾಟಕ ಮಾಡುವ ಮೂಲಕ ಅದೆಂತಹ ದೇಶೋದ್ಧಾರದ ಕೆಲಸ ಮಾಡುತ್ತಿದ್ದೇವೆ, ನಾಟಕವನ್ನು ವಿಮರ್ಶಿಸುವುದು ಅದೆಂತಹ ಮಹಾಪಾಪ, ನಾಟಕಕ್ಕೆ ಹಣ ಕೊಡುವುದು ತಿರುಪತಿಯ ಹುಂಡಿಗೆ ಹಣ ಹಾಕಿದಷ್ಟೇ ಪುಣ್ಯದ ಕೆಲಸ ಎಂಬಿತ್ಯಾದಿ ವಿವರಣೆ ಕೊಡಲು ಶುರುವಿಟ್ಟುಕೊಳ್ಳುತ್ತಾರೆ. ಕಿರಣ್ ಇದಕ್ಕೆ ಹೊರತಲ್ಲ. ಆದರೆ ಒಂದು ಕೆಲಸಕ್ಕೆ ಇಂತಿಷ್ಟು ಹಣ ಎಂದು ಫಿಕ್ಸ್ ಮಾಡಿ ಸಂಗ್ರಹಿಸಿದ ಮೇಲೆ ಅದು ಬಿಸಿನೆಸ್ ಆಗುತ್ತದೆ. ಬಿಸಿನೆಸ್ ಎಂದ ಮೇಲೆ ಹಣಕ್ಕೆ ಸರಿಯಾದ ಪ್ರತಿಫಲವನ್ನು ನೀಡಲೇಬೇಕು. ಉಳಿದ ಬಿಸಿನೆಸ್ ಗಳಿಗೆ ಹೋಲಿಸಿದರೆ ಕಲಾವಿದರು ಕೊಂಚ ಅದೃಷ್ಟವಂತರು ಏಕೆಂದರೆ ತಮ್ಮ ಬೆಲೆಯನ್ನು ನಿಗದಿಪಡಿಸಿಕೊಳ್ಳುವ ಸ್ವಾತಂತ್ರ ಅವರಿಗಿದೆ. ಕಲೆಯ ಬೆಲೆ ಮಾರುಕಟ್ಟೆಯ ಹಂಗಿನಿಂದ ಹೊರತಾದದ್ದು!

ಸಮಾಜಸೇವೆಯ ಸೋಗಿನಿಂದ ಹೊರಬಂದು ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ವೃತ್ತಿಪರತೆಯನ್ನು ರೂಢಿಗೊಳಿಸಿಕೊಂಡದ್ದೇ ಆದರೆ ಇಂತಹ ಗೋಳಾಟಗಳಿಂದ ಹೊರಬರಬಹುದು.

ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು