ದೃಶ್ಯಕ್ಕೊಂದು ನುಡಿಗಟ್ಟು

ಹೂವದೋ ಹಣ್ಣಾದೊ: ದ್ಯಾವ್ರೆ ಚಿತ್ರ ವಿಮರ್ಶೆ

ಕನ್ನಡ ಚಿತ್ರರಂಗದಲ್ಲಿ ಹೊಸ ನೀರು ಹರಿಯುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಇದು . ಭಟ್ಟರ ಶಿಷ್ಯರು ಭಟ್ಟರಿಂದ ಚಿತ್ರಿಕೆಯನ್ನು ಚಿತ್ರಿಸುವ ವಿಧಿ ವಿಧಾನವನ್ನು ಕಲಿತಿದ್ದಾರೆಯೇ ಹೊರತು ಭಟ್ಟರ ಶೈಲಿಯ ಪಡಿಯಚ್ಚನಲ್ಲ ಎಂಬುದಕ್ಕೆ ಇಂಬು ನೀಡುತ್ತದೆ ಕೂಡ .

ಚಿತ್ರದ ಕಥೆ ಜೈಲಿನಲ್ಲಿರುವ ಕೈದಿಗಳು ಕೈದಿಗಳಾಗಲು ಕಾರಣಗಳನ್ನು ತಿಳಿಸಿ ಅವರ ಬದುಕಿನ ಕಥೆ ವ್ಯಥೆ ಯೊಂದಿಗೆ ಸಾಗುತ್ತದೆ . ಪ್ರತಿ ಕೈದಿಯು ದೇವರನ್ನು ಪ್ರಾರ್ಥಿಸುವಂತೆ ಹೊರಜಗತ್ತಿಗೆ “ಒಂದೇ ಒಂದು ಕಿಂಡಿ ಕೊಡು ಪ್ಲೀಸ್ ” ಎಂದು ಬೇಡುತಿರುತ್ತಾನೆ . ಅದು ಸಿಕ್ಕಾಗ ಹೊರ ಹೋಗಲು ಪ್ರಯತ್ನಿಸಿ ಮುಂದೆ ಉಂಟಾಗುವ ಪರಿಣಾಮಗಳೇ ಕಥೆಯ ಸಾರ . ಜೈಲುಗಳ ದುರಾವಸ್ಥೆಯನ್ನು ಹೇಳುತ್ತಾ ಅದಕ್ಕೆ ಕಾರಣವಾದ ಆಡಳಿತ ವರ್ಗದ ಸ್ವಾರ್ಥವನ್ನು ಟೀಕಿಸುತ್ತದೆ ದ್ಯಾವ್ರೇ .

ಚಿತ್ರಕಥೆ ತನ್ನ ಆರಂಭವನ್ನು ಪಡೆದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ . ಅಲ್ಲೇ ಕಥೆ ಹೆಣೆದ ಪರಿಯಲ್ಲಿ ಚಿತ್ರ ಸೊರಗಿದೆ . ಮೊದಲ 30 -45 ನಿಮಿಷಗಳ ನಂತರ ಚಿತ್ರ ನಿಮಗೆ ಹಿಡಿಸುತ್ತದಾದರೂ ಅಲ್ಲಲ್ಲಿ ಚಿತ್ರಕಥೆಯ ತನ್ನ ವೇಗವನ್ನು ಕಳೆದುಕೊಳ್ಳುವುದರಿಂದ ಕೆಲವರು ಚಿತ್ರಮಂದಿರದಿಂದ ಹೊರನಡೆಯುವುದನ್ನು ನೋಡುತ್ತೇನೆ . ಹಾಗೆಂದು ದ್ಯಾವ್ರೆ ಚೆನ್ನಾಗಿಲ್ಲವೆಂದಲ್ಲ . ತುಂಬಾ ಕಥೆಗಳನ್ನು ಒಟ್ಟಿಗೆ ಜೋಡಿಸುವಿದರಿಂದಾಗಬಹುದಾದ ಅಪಾಯವನ್ನು ವಿಜಿ ಸಮರ್ಥವಾಗಿ ನಿಭಾಯಿಸಿದ್ದಾರೆ . ನಾಲ್ಕೈದು ಕಥೆಗಳನ್ನು ಒಟ್ಟಿಗೆ ಹೇಳಿರುವುದರಿಂದ ಅಲ್ಲಲ್ಲಿ ಕಥೆಯ ಜೋಡಣೆ ಇನ್ನೂ ಸಮರ್ಪಕವಾಗಿರಬಹುದಿತ್ತೇನೋ ಎಂದು ಎನಿಸಿದರೂ ಕಥೆಯ ಗಟ್ಟಿತನ ಅದನ್ನು ಮರೆಸುತ್ತದೆ .

ಆದ್ರೆ ಒಳ್ಳೆಯ ಕತೆಯೊಂದೇ ಉತ್ತಮ ಚಿತ್ರವಾಗುವುದಿಲ್ಲ . ಚಿತ್ರದ ಕಥೆಯನ್ನು ಕಟ್ಟಿಕೊಡುವ ಅಂಶಗಳಿಂದಲೇ ಚಿತ್ರ ತನ್ನ ಶ್ರೇಷ್ಟತೆಯನ್ನು ಹೊಂದುವುದು . ಹಾಗೆ ಗಮನಿಸಿದಾಗ ನನಗೆ ಅನಿಸುವುದು ದ್ಯಾವ್ರೆ loosely coupled (ಸಡಿಲಾಗಿ ಜೋಡಿಸಿರುವುದು) ಅಂತ . ಚಿತ್ರದ ಮುಕ್ಕಾಲು ಮುಕ್ಕಾಲು ಭಾಗ ಜೈಲಿನಲ್ಲೇ ನಡೆಯುವುದರಿಂದ ಅದಕ್ಕಾಗಿ ಬಳಸಿದ color tone ಗಮನಸೆಳೆಯುತ್ತದೆ . ಚಿತ್ರದುದ್ದಕ್ಕೂ ನಿಮ್ಮನ್ನು ಅಲ್ಲಲ್ಲಿ ಎಚ್ಚರಿಸುವುದು ಜೈಲರ್ ಯೋಗರಾಜ್ ಭಟ್ರ ತತ್ವ ಮಿಶ್ರಿತ ಮಾತುಗಳು . ಚಿತ್ರ ನೀಡುವ ಬೇಸರದ ಭಾವವನ್ನು ವೀರ್ ಸಮರ್ಥ್ ಸಂಗೀತ ನಿಮ್ಮಿಂದ ಮರೆಸುತ್ತದೆ . ಚಿತ್ರದ ಆರಂಭದಿಂದ ಅಂತ್ಯದವರೆಗೂ ಕೇವಲ ಸಂಗೀತ ವಾದ್ಯಗಳಿಂದ ಮೂಡುವ ಹಿನ್ನಲೆ ಸಂಗೀತಕ್ಕೆ ಹೊರತಾದ ತತ್ವ ಲೇಪಿತ ಪದ್ಯಗಳಿಂದಲೇ ದ್ರಶ್ಯಗಳನ್ನು ಕಳೆಕಟ್ಟುವಂತೆ ಮಾಡಿದ್ದಾರೆ ಸಂಗೀತ ನಿರ್ದೇಶಕರು .

ಚಿತ್ರದಲ್ಲಿ ಬರುವ ಎಲ್ಲ ಮಹಿಳಾಪಾತ್ರಗಳು ಅಗತ್ಯವೆನಿಸಿದರು ಯಾವುದಕ್ಕೂ ಹೇಳಿಕೊಳ್ಳುವಂಥ ಅವಕಾಶಗಳಿಲ್ಲ . ಆದರೆ ಅವುಗಳೆಲ್ಲವೂ ತಮ್ಮ ಛಾಯೆಯನ್ನು ಮೂಡಿಸುತ್ತವೆ . ಮುಂಚೂಣಿಗೆ ಬರುವ ಎಲ್ಲ ಪುರುಷ ಪಾತ್ರಗಳಿಗೂ ನ್ಯಾಯ ಸಲ್ಲಿಕೆಯಾಗಿದೆ . ಯಾವುದೂ ಅಗತ್ಯಕ್ಕಿಂತ ಜಾಸ್ತಿ ಮೆರೆಯುವುದಿಲ್ಲ . ಹಾಗೆ ನೋಡಿದರೆ ಚಿತ್ರದ ಹೀರೊ ಜೈಲರ್ ಭೀಮಸೇನನೇ ( ಯೋಗರಾಜ್ ಭಟ್) . ಇಡೀ ಚಿತ್ರದ ಕಥೆಯನ್ನು ಹೇಳಿದ್ದೆ ಅವರ ಸ್ವಗತದಲ್ಲಿ . ಭಟ್ಟರ ನಿರ್ದೇಶನವನ್ನು ನೋಡಿರುವ ನಮಗೆ ಅವರೊಳಗೆ ಇಂಥ ಒಬ್ಬ ನಟನಿದ್ದ ಎಂಬುದನ್ನು ನೋಡಲು ಸಿಕ್ಕಿದ್ದೇ ಖುಷಿ . ಭಟ್ಟರು ತಮ್ಮ ಅಭಿನಯವೆನಿಸದ ಸಹಜ ಮ್ಯಾನರಿಸಂನಿಂದ ಹತ್ತಿರವಾಗುತಾರೆ . ಕೆಲವೊಂದು ಸನ್ನಿವೇಶಗಳಲ್ಲಿ ಅವರ ಧ್ವನಿಗೆ  ಇನ್ನಷ್ಟು ಗಡಸುತನ ಮತ್ತು ಗಾಂಭೀರ್ಯ ಬೇಕೆನಿಸುತ್ತದೆ . ಆದರೆ  ಅವರ ದ್ವನಿ ಅಲ್ಲಿಗೆ ನಿಲುಕದ ಕಾರಣ ಅದನ್ನು ತಮ್ಮ ಕಣ್ಣುಗಳಲ್ಲೇ ಹೇಳುತ್ತಾರೆ . ದೇವಣ್ಣ ಮತ್ತು ಬಿಲ್ಡಿಂಗ್ ಕಾಂಟ್ರ್ಯಾಕ್ಟರ್ ನ ಪಾತ್ರದ ಅನಿವಾರ್ಯತೆ ಚಿತ್ರಕ್ಕೆ ಇಲ್ಲ . ಇಂಥ ಕೆಲವು ಅಗತ್ಯವೆನಿಸದ ದ್ರಶ್ಯಗಳ ತೂರಿಕೆಯಿಂದ ಚಿತ್ರಕಥೆಯ ವೇಗಕ್ಕೆ ಪೆಟ್ಟು ಬೀಳುತ್ತದೆ .

ಚಿತ್ರದ ಕಥೆಹೆಣೆಯುವುದಕ್ಕೆ , ಸಂಗೀತ ಮತ್ತು ಸಂಭಾಷಣೆಗೆ ಕೊಟ್ಟ ಗಮನವನ್ನು ಚಿತ್ರದ ತಾಂತ್ರಿಕ ಸೂಕ್ಷ್ಮತೆಗಳಿಗೆ ಕೊಟ್ಟಿಲ್ಲ ಎಂಬುದು ನನಗೆ ಬೇಸರ ಮೂಡಿಸುತ್ತದೆ. ಓಡುತ್ತಿರುವ ಚಿತ್ರಕಥೆ ಕೆಲವೊಮ್ಮೆ ಅಲ್ಲಲ್ಲಿ ತೆವಳುತ್ತದೆ . ತೆರೆಯಮೇಲೆ ಎರಡು ಪಾತ್ರಗಳು ಸಮಾನಾಂತರವಾಗಿ ನಿಂತು ಮಾತಾಡುವಾಗ ಕ್ಯಾಮರ ಎರಡು ಪಾತ್ರಗಳನ್ನು ಫೋಕಸ್ನಲ್ಲಿಡುವಲ್ಲಿ ಛಾಯಾಗ್ರಾಹಕ ಪದೇ ಪದೇ ಎಡವುತ್ತಾನೆ . ಅದನ್ನು ಬಿಟ್ಟು ನೋಡಿದಾಗ ಮಚ್ಚು ಲಾಂಗ್ ವಾಚಾಳಿ ಸಂಭಾಷಣೆಗಳನ್ನು ತನ್ನ ಮೊದಲ ಚಿತ್ರದಿಂದ ಹೊರಗಿಟ್ಟು , ಸೇಫ್ ಆಗಬಯಸದೆ ತನ್ನದೇ ಶೈಲಿಯಲ್ಲಿ ಕಥೆ ಹೆಣೆದ ವಿಜಿ ಮೊದಲ ಪ್ರಯತ್ನದಲ್ಲಿ ಭರವಸೆ ಮೂಡಿಸುತ್ತಾರೆ .

ಚಿತ್ರದ ಕಥೆಯ ಗಟ್ಟಿತನಕ್ಕೆ , ಅದನ್ನು ಹೆಣೆದ ಪರಿಗೆ ಮತ್ತು ಸಂಭಾಷಣೆಯ ಸತ್ವಕ್ಕೆ 4 ಅಂಕಗಳನ್ನು ಕೊಡಬಹುದಾದ್ರೂ ಚಿತ್ರ ತಾಂತ್ರಿಕವಾಗಿ ಸ್ವಲ್ಪ ಸೊರಗಿರುವುದರಿಂದ 3.5 ಸಾಕು .

ಕೇವಲ ಗಿಡ ಮರಗಳೊಂದಿಗೆ ಸುತ್ತು ಹಾಕುತಿದ್ದ ಕನ್ನಡ ಪ್ರೇಕ್ಷಕ ಈಗಷ್ಟೇ ಕಾಡಿನೊಳಕ್ಕೆ ಪೂರ್ಣ ಪ್ರಮಾಣದಲ್ಲಿ ಹೊಗುತ್ತಿದ್ದಾನೆ . ಆದ್ದರಿಂದ ಕಾಡಿನ ವಾತಾವರಣಕ್ಕೆ ಹೊಂದಿಕೊಳ್ಳಲು ಮತ್ತು ಕಾಡಿನ ಸೌಂದರ್ಯದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಲು ಅವನಿಗೂ ಸಮಯ ಹಿಡಿಯಬಹುದು ಎನ್ನುವುದು ನನ್ನ ಭಾವನೆ . ಈ ಹೊಂದಿಕೊಳ್ಳುವ ಗುಣ ಕನ್ನಡದ ಎಲ್ಲ ಪ್ರೇಕ್ಷಕವರ್ಗಕ್ಕೂ ಆದಷ್ಟು ಬೇಗ ಬರಲೆಂಬುದೇ ಪ್ರಾರ್ಥನೆ.

ಕೊನೆಯಲ್ಲಿ ಚಿತ್ರನೋಡಿದ ನನಗೆ ಸಾರ್ಥಕತೆ ಎನಿಸುವಂತೆ ಮಾಡಿದ್ದು ಭಟ್ಟರ ಅಂಗಣಿ ಮಿಂಗಣಿಯ ಈ ಕೆಳಗಿನ ಸಾಲುಗಳು -
” ಭೂ ಕೈಲಾಸ ಪಾತಾಳ ನರುಕ ಸ್ವರುಗ
ಧೂಳು ಕಣದಿಂದ್ದೆದದೊ !
ಗಿಡ ಮರ ಹುಟ್ಟಿ ಸುರಿಮಳೆಯಾದೊ
ಹೂವದೋ ಹಣ್ಣಾದೊ
ತಾಯಾದೊ ಕೂಸಾದೊ !!! ”

ಅನುರಾಗ್ ಕಶ್ಯಪ್ ಹೇಳಿದ್ದ ಮಾತು ನೆನಪಾಗುತ್ತಿದೆ ಆರಂಭದಲ್ಲಿ ತನ್ನ ಚಿತ್ರಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಇದ್ದಾಗ ತನ್ನದೇ ಆದ ಒಂದು ಪ್ರೇಕ್ಷಕ ವರ್ಗವನ್ನು ಸೃಷ್ಟಿಸುತ್ತೇನೆ ಎಂದಿದ್ದರು . ಅದು ಈಗ ನಿಜವಾಗಿದೆ . ಕನ್ನಡಲ್ಲೂ ಇಂತಹ ಚಿತ್ರಗಳನ್ನು ವೀಕ್ಷಿಸುವ ನಮ್ಮಿಂದ ದೂರವಾದ ಕನ್ನಡ ಮತ್ತು ಕನ್ನಡೇತರ ಪ್ರೇಕ್ಷಕ ವರ್ಗವನ್ನು ನಾವು ಸೃಷ್ಟಿಸುವ ಅನಿವಾರ್ಯತೆ ಇದೆ . ಇಲ್ಲದಿದ್ದರೆ ಇಂತಹ ಪ್ರಯತ್ನಗಳು ಹುಟ್ಟುತ್ತಲೇ ಸಾಯುತ್ತವೆ . ಹಾಗಾಗದಿರಲಿ .


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು