ದೃಶ್ಯಕ್ಕೊಂದು ನುಡಿಗಟ್ಟು

6-5=2 : ಸೈಲೆನ್ಸುಗಳ ನಡುವೆ ಲೈಸೆನ್ಸ್ ಟು ಕಿಲ್..!

6-5=2 Horror Cinema poster"ನನ್ನ ಹಾರರ್ ಸಿನಿಮಾವನ್ನ ನೋಡಿ ಮನೆಗೆ ಹೋದ ಪ್ರೇಕ್ಷಕ ಸೋಫಾ ದ ಮೇಲೆ ಕಡ್ಲೆ ತಿಂತಾ ಕೂತಾಗ ಕರೆಂಟ್ ಹೋದ್ರೆ ಪಕ್ಕದಲ್ಲೇ ಬ್ಯಾಟ್ರಿ ಇದ್ರೂ ಫ್ರಿಜ್ಜಿನ ತನಕ ಎದ್ದು ಹೋಗಿ ನೀರು ಕುಡಿಯೋಕೆ ಭಯ ಬಿದ್ರೆ ಅಲ್ಲಿಗೆ ಆ ಸಿನಿಮಾ ಗೆದ್ದಂತೆ..!"

ವರ್ಷಗಳ ಹಿಂದೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಮಾತುಗಳನ್ನಾಡಿದ್ರು. ಅವರ ಕೆಲವು ಸಿನಿಮಾಗಳು ಅಂಥದ್ದೊಂದು ಭಯವನ್ನ, ಆ ಮಟ್ಟಕ್ಕಲ್ಲದಿದ್ರೂ ಕೆಲವು ಪರ್ಸೆಂಟೇಜಿಗಾದ್ರೂ ಕ್ರಿಯೇಟ್ ಮಾಡಿದ್ವು ಅನ್ಬೋದು. ನಾವೆಲ್ಲ ಕಂಡಂತೆ ಸಿನಿಮಾದ ಹಲವು Genere ಗಳಲ್ಲಿ ಈ 'ಹಾರರ್' ಕೂಡಾ ಒಂದು. ತೀರಾ ಹಳೆಯದ್ದು ಬಿಟ್ಟು ಅಮೇಲಾಮೇಲೆ ಬಂದ "ದಿ ಎಗ್ಸೋರ್ಸಿಸ್ಟ್","ಈವಿಲ್ ಡೆಡ್" ನಂಥಾ ಸಿನಿಮಾಗಳು 'ಹಾರರ್' ಜಾನ್ರಾವನ್ನ ಇನ್ನಷ್ಟು ಗಟ್ಟಿಗೊಳಿಸಿದ್ದವು ಮತ್ತು ಇವತ್ತಿಗೂ ಆ ಸಿನಿಮಾಗಳನ್ನ ಮೇಲಿಂದ ಮೇಲೆ ನೋಡಿದರೂ ಅವು ಉಂಟುಮಾಡುವ ಭಯದ ತೀವ್ರತೆ ಕಡಿಮೆಯಾಗಿಲ್ಲ. ಕನ್ನಡದಲ್ಲೂ ದೆವ್ವ ಭೂತಗಳ ಸಿನಿಮಾಗಳಿಗೆ ಜಾಗವೇನು ಕಡಿಮೆಯಿಲ್ಲ. 'ನಾ ನಿನ್ನ ಬಿಡಲಾರೆ','ಅದೇರಾಗ ಅದೇಹಾಡು','ಶ್..' ಮತ್ತಿನ್ನಷ್ಟು ಸಿನಿಮಾಗಳು ಮಕ್ಕಳ ಚೆಡ್ಡಿ ಒದ್ದೆ ಮಾಡಿದಂಥವೇ..! ಅವುಗಳಲ್ಲಿ ವಿಕಾರ ರೂಪಗಳಿದ್ದವು,ನಾಯಿಗಳ ಊಳಿದ್ದವು,ಒಂಥರದ ಹೊಗೆಯಿತ್ತು,ಮುಖ್ಯವಾಗಿ ರಾತ್ರಿಯಿತ್ತು. ಆದರೆ ಜನರ ಮೆಂಟಾಲಿಟಿ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗಲಾರಂಭಿಸಿದಾಗ 'ಪ್ಯಾರಾನಾರ್ಮಲ್ ಆಕ್ಟಿವಿಟಿ'ಯಂಥ ರಿಯಲಿಸ್ಟಿಕ್ ಸಿನಿಮಾಗಳು ರೂಪುಗೊಳ್ಳತೊಡಗಿದವು. ಅತ್ಯಂತ ಕಡಿಮೆ ಬಜೆಟ್ಟಿನಲ್ಲಿ ಮಾಡಿದ ಆ ಸಿನಿಮಾ ಜಗತ್ತಿನಾದ್ಯಂತ ಯರ್ರಾಬಿರ್ರಿ ದುಡ್ಡು ಬಾಚಿಬಿಟ್ಟಿತು. ಈಗ ಅದೇ ಥರದ್ದೊಂದು ರೂಪವಿಟ್ಟುಕೊಂಡು, ಕನ್ನಡದಲ್ಲೀಗ ಏಳುತ್ತಿರುವ ಹೊಸ ಅಲೆಗಳ ನಡುವೆ, ಹೊಚ್ಚ ಹೊಸಾ ಹುಡುಗರ ಸಿನಿಮಾವೊಂದು ತಯಾರಾಗಿದೆ. ಅದು "6-5=2".

ಈಗ ಬೆಂಗಳೂರಿನ ಕೆಲವು ಬೀದಿಗಳ ಗೋಡೆಗಳಲ್ಲಿ 'ಖತರ್ನಾಕ್','ಕೂಲ್ ಗಣೇಶ','ಚೆಡ್ಡಿ ದೋಸ್ತ್'ಗಳ ಮಧ್ಯೆ ಅಲ್ಲೆಲ್ಲೋ ಒಬ್ಳು ಗಾಳೀಲಿ ತೇಲಿ ಮಲಗಿರೋ ಪೋಸ್ಟರ್ ಒಂದಿರುತ್ತೆ ಗಮನಿಸಿರ್ತೀರಿ. ಇದ್ಯಾವ್ದೋ ಇಂಗ್ಲೀಷ್ ಪಿಚ್ಚರ್ರು ಅನ್ಕೊಂಡು ಹೆಸರು ನೋಡಿದರೆ ಎರಡನೇ ಕ್ಲಾಸ್ ಮಗು ಮೈನಸ್ ಲೆಕ್ಕ ಮಾಡ್ತಾ ತಪ್ಪು ಮಾಡಿರೋ ಥರ 6-5=2 ಅಂತ ಟೈಟಲ್. ಹಿಂದೆ ಈ ಸಿನಿಮಾದ ಟ್ರೈಲರ್ ಒಂದಿಷ್ಟು ಸುದ್ದಿ ಮಾಡಿತ್ತು. ನನ್ ಫ್ರೆಂಡು ಮೆಸೇಜ್ ಮಾಡಿ 'ನಮ್ ಪಿಚ್ಚರ್ರಿಂದು ಟ್ರೈಲರ್ ಬಿಟ್ಟಿದೀವಿ ನೋಡಿ ಹೆಂಗಿದೆ ಹೇಳು.. ಆದ್ರೆ ನನ್ ಹೆಸ್ರು ಮಾತ್ರ ಎಲ್ಲೂ ಮೆನ್ಶನ್ ಮಾಡ್ಬೇಡ. ಯಾಕೆ ಅಂತ ಅಮೇಲ್ ನಿಂಗ್ ಗೊತಾಗತ್ತೆ' ಅಂದ. ಪಿಚ್ಚರ್ ನೋಡಿದ್ಮೇಲೆ ಗೊತಾಯ್ತು.. ಓಹೋ ಇವ್ನೇ ಆ ಲೇಟ್ ರಮೇಶ ಅಂತ.

ಬಿಡಿ.. ಸ್ಟೋರಿ ವಿಷಯಕ್ಕೆ ಬಂದ್ರೆ.. 'ವಿಮರ್ಶೆ ಬರಿಯೋ ಅಂದ್ರೆ ಫಿಲಮ್ಮಿಂದು ಕಥೆ ಬರಿತೀಯಾ' ಅಂತ ಯಾರಾದ್ರೂ ಬೆಂಡೆತ್ತೋಕಿಂತ ಮುಂಚೆ ಒಂದೇ ಒಂದು ಲೈನು ಹೇಳಬೇಕಂದ್ರೆ.. ನಾಲ್ಕು ಜನ ಹುಡುಗರು, ಇಬ್ಬರು ಹುಡುಗೀರು ಒಟ್ಟು ಆರು ಜನ ಟ್ರೆಕ್ಕಿಂಗ್ ಅಂತ 'ಬೀಪ್' ಪರ್ವತಕ್ಕೆ ಹೋಗ್ತಾರೆ(ಆ ಜಾಗದ ಹೆಸ್ರು ಹಾಕಿದ್ರೆ ಟೂರಿಸ್ಟ್ ರೇಟು ಒಂದೇ ಸಲ ಕಡಿಮೆಯಾಗಿಬಿಡೋ ಭಯಕ್ಕೆ ಸೆನ್ಸಾರು ಕತ್ರಿ ಕೆಲ್ಸ ಮಾಡಿದೆ).. ಅಮೇಲೇನಾಗತ್ತೆ ಅನ್ನೋದೇ ವಿಸ್ಮಯ,ಅಚ್ಚರಿ,ನಿಗೂಡ ಇತ್ಯಾದಿ. ಕೆಲವು ಸಿನಿಮಾಗಳು ನಮ್ಮನ್ನ ವೀಕ್ಷಕರಾಗಿ ಕೂರಿಸಿಕೊಂಡು ನೋಡಿಸಿಕೊಳ್ತವೆ, ಕೆಲವು ಸಿನಿಮಾಗಳು ಕಥೆಯೊಳಗೆ ನಮ್ಮನ್ನು ಎಳ್ಕೊಳ್ತವೆ. ಇನ್ನೂ ಕೆಲವು, ನಮ್ಮನ್ನ ತನ್ನೊಟ್ಟಿಗೆ ಮೊದಲಿಂದ ಕೊನೆಯತನಕ ಒಟ್ಟಿಗಿಟ್ಟುಕೊಂಡು ಹೆಜ್ಜೆ ಹಾಕುತ್ತದೆ. '6-5=2' ಈ ಮೂರನೇ ಥರದ ಸಿನಿಮಾ. ಸಿನಿಮಾದ ಮೊದಲ ಕೆಲವು ಸ್ಕ್ರೀನ್ ಸಂಭಾಷಣೆಗಳು ಹೇಳೋ ಥರ ಈ ಸಿನಿಮಾಗೆ ಡೈರೆಕ್ಟರ್ ಇಲ್ಲ, ಸಿನಿಮಾಟೋಗ್ರಾಫರ್ ಇಲ್ಲ, ಮ್ಯೂಸಿಕ್ಕು,ವಿಷುಯಲ್ ಎಫೆಕ್ಟ್ ಡೈರೆಕ್ಟ್ರು, ಸ್ಟಂಟ್ ಮಾಷ್ಟು ಏನೂ ಇಲ್ಲ ಅಸಲಿಗೆ ಈ ಸಿನಿಮಾ ಸಿನಿಮಾನೇ ಅಲ್ಲ..! "A Video Shot by Late Ramesh" ಅಂತ ಸಬ್ ಟೈಟಲ್ ಅಷ್ಟೇ.

ಇಲ್ಲೊಬ್ಬ ಸಿನಿಮಾಟೋಗ್ರಾಫರ್ ಆಗುವ ಕನಸಲ್ಲಿ ಕ್ಯಾಮ್ರಾ ತಗೊಂಡು ಸಿಕ್ಕಿದ್ನೆಲ್ಲಾ ವೀಡಿಯೋ ಮಾಡ್ಕೊಳೋನು. ಒಬ್ಬ ಕಾಚಾ ಹಾಕ್ಕೊಂಡಿರೋ ಸೀನಿಂದ ಹಿಡಿದು ಇನ್ನೊಬ್ಬ ಮರದ ಸಂದೀಲಿ ಉಚ್ಚೆ ಹೊಯ್ಯೋವಾಗ್ಲೂ ಇವನ ಮೂರನೇ ಕಣ್ಣಿನ ಗೋಳಿನ ಗೀಳಿದೆ. ಅದೇ ಈ ಚಾರಣಕ್ಕೂ ಮುಂದುವರೆದಿದೆ, ಇದ್ದಬದ್ದದ್ದೆಲ್ಲಾ ಟೇಪಿಸಿದೆ, ಅದೇ ರೆಕಾರ್ಡನ್ನೇ 'ಕಾಮಾಕ್ಯ'ದಿಂದ 'ವೀರೇಶ್' ತನಕ ಪ್ರದರ್ಶಿಸಲಾಗುತ್ತಿದೆ..!

ನಮ್ ಲೆಟ್ ರಮೇಶ ಮೂರ್ ಮೂರ್ ದಿನಕ್ಕಾಗೋಷ್ಟು ಕ್ಯಾಮರಾ ಬ್ಯಾಟರಿ ಚಾರ್ಜ್ ಮಾಡ್ಕಂಡಿದ್ದು ಒಳ್ಳೇದಾಯ್ತು ಅನ್ಕೊಳೋವಷ್ಟ್ರಲ್ಲೇ 'ದಡೀಲ್' ಅಂತ ಚಿಂದಿಯಾಗೋ ಸ್ಟೀಲ್ ಡಬ್ಬಿ, ದಿಕ್ಕಾಪಾಲಾಗಿ ಓಡಿ ಮಾರ್ಕ್ ಮಾಡಿದ ಜಾಗಕ್ಕೆ ಹಿಂದಿರುಗೋಕಾಗದೇ ಮತ್ತೆ ಬಂದಲ್ಲಿಗೇ ಬಂದು ಬಂಧಿಯಾಗುವ ಮಂದಿ, ಅಯ್ಯೋ ಈಗೇನು ಮಾಡೋದು ಅಂತ ಆಕಾಶ ನೋಡಿದರೆ ಪಕ್ಕದ ಬೋಳುಮರದಲ್ಲಿ ಕಾಯಿಬಿಟ್ಟಂತಿರುವ ಮಾನವರ ತಲೆಬುರುಡೆಗಳು.., ಎಲ್ಲಾದ್ರೂ ಮಾಟ ಮಾಡಿದಲ್ಲಿ ಕಾಣುವಂಥದೊಂದು ಗಂಡು ಗೊಂಬೆ.. ಅಲ್ನೋಡಿ ಇಲ್ನೋಡುವಷ್ಟರಲ್ಲಿ ಅಲ್ಲ.. ಅದು ಗಂಡಲ್ಲ ಉದ್ದುದ್ದ ಕೂದಲಿನ ಹೆಣ್ಣು ಬೊಂಬೆ..! ಸಂಜೆಯಾದಂತೆ ಭಯ,ಚಳಿಗಳಿಗೆ ತಲೆ ಕೆಟ್ಟು ಚಳಿ ಕಾಯ್ಸ್ಕಳಣ ಅಂತ ಉರಿ ಹಚ್ಚಿದ್ರೆ ಇದ್ಕಿದ್ದಂಗೆ ಭಗ್ ಅಂತ ತಂತಾನೇ ಚಾಚುವ ಬೆಂಕಿ.. ಇವೆಲ್ಲವನ್ನೂ ರೆಕಾರ್ಡ್ ಮಾಡುವ ರಮೇಶನ ಕ್ಯಾಮೆರಾ ಕೂಡಾ ಆಗಾಗ ದೆವ್ವ ಮೆಟ್ಕಂಡಂಗಾಡುತ್ತೆ.. ಮಾಮೂಲಿ ಕಲರ್ ಟೋನ್ ಬಿಟ್ಟು ಸೇಪಿಯಾ ಅದೂ ಇದೂ ಅಂತ ಗೆರೆ ಗೆರೆ ಬಂದು ಬ್ಲರ್ ಆಗಿ ಆಫ್ ಆಗಿಬಿಡೋ ಹೊತ್ತಲ್ಲಿ ವೀಕ್ಷಕರನ್ನ ಪದೇ ಪದೇ ಹೆದರಿಸೋ ರಾತ್ರಿಯೊಂದು ಕಾಲಿಟ್ಟುಬಿಟ್ಟಿರುತ್ತದೆ. ಅಲ್ಲಿಗೆ ಪ್ರೇಕ್ಷಕನ ಮನಸ್ಸು ಇನ್ನೊಂದಿಷ್ಟು ಭಯಾನಕತೆಗಳ ಬರುವಿಕೆಗೆ ಸಿದ್ಧವಾಗಿಬಿಡುತ್ತದೆ.

ಈ ಸಿನಿಮಾ ಎಷ್ಟು ನೀಟಾಗಿ ತಯಾರಾಗಿದೆಯೆಂದರೆ 'ಛಕ್' ಅಂತ ದೆವ್ವಗಳು ಬರೋದಿಲ್ಲ ಇಲ್ಲಿ. ಸಿನಿಮಾದ ಫಸ್ಟ್ ಹಾಫ್ ತನಕವೂ ಎಲ್ಲ ಶಾಂತ.. ಮುಂದಿನ ಬಿರುಗಾಳಿಗೆ ತಯಾರಾದ ಸಮುದ್ರದಂತೆ. ನಡುನಡುವೆ, ನಾವೊಂದಿಷ್ಟು ಸ್ನೇಹಿತರು ಜೊತೆಯಾದರೆ ತುಂಬ ಚಿಕ್ ಚಿಕ್ಕ ವಿಷಯಕ್ಕೆ ಹೆಂಗೆಲ್ಲಾ ಮಜಾ ಮಾಡ್ತೀವೋ ಅವೆಲ್ಲ ಇದೆ. ಬಹುಷಃ ಇದರಿಂದಲೇ ಸಿನಿಮಾದ ಬಹುತೇಕ ಪಾತ್ರಗಳು ಮೊದಲಲ್ಲೇ ಕರೆಕ್ಟಾಗಿ ರೆಜಿಸ್ಟರ್ ಆಗಿಬಿಡುತ್ತವೆ. ಮುಖ್ಯವಾಗಿ, ಕೆಲವು ವಿಯೆಫೆಕ್ಸ್ ಹೊರತುಪಡಿಸಿ, ಇಡೀ ಸಿನಿಮಾ ನೈಜ ನೈಜ. ಯಾವ್ದೋ 'ಹೋಮ್ ವೀಡಿಯೋ' ನೋಡಿದಂಥ ಫೀಲ್ ಒಂದನ್ನ ಕಟ್ಟಿಕೊಡುತ್ತದೆ ಸಿನಿಮಾ. ಇದಕ್ಕಾಗಿಯೇ, ಅಲ್ಲಲ್ಲಿ ಕಾಣುವ 'ಔಟ್ ಫೋಕಸ್'ಗಳು, 'ಬರ್ನ್' ಆದ ಬ್ಯಾಕ್ ಗ್ರೌಂಡುಗಳು, ಡೆಪ್ತ್ ಇಲ್ಲದ ಝೂಮ್ ಗಳು ನಮಗೆ ಟೆಕ್ನಿಕಲ್ ಫಾಲ್ಟ್ ಅನ್ನಿಸೋದೇ ಇಲ್ಲ. ಮತ್ತು ಟೆಕ್ನಿಕಲ್ ನೆಲೆಗಟ್ಟಿನಲ್ಲಿ ಯೋಚಿಸಲೂ ಆಗದು ಅನ್ನುವಷ್ಟರ ತನಕ ಕಥೆಯ ಜೊತೆ ಓಡುತ್ತೇವೆ ನಾವು.

ಪಾತ್ರವರ್ಗದ ವಿಷಯಕ್ಕೆ ಬಂದರೆ ಲಂಬೂ ರಮೇಶನಿಗಿಂತ ಅವನ ಕ್ಯಾಮೆರಾ ಆಕ್ಟಿಂಗ್ ಇಂಪಾಕ್ಟಿವ್..!, ಇನ್ನಿಬ್ಬರು ಫ್ಯೂಚರ್ ಕಾಮಿಡಿ ಕಿಲಾಡಿಗಳ ಸಾಲಿಗೆ ಸೇರ್ಪಡೆಯಾಗೋ ಎಲ್ಲಾ ಲಕ್ಷಣಗಳೂ ಇವೆ. ಉಳಿದವರೆಲ್ಲರದ್ದು ನೀಟ್.

ನೆಗೆಟಿವ್ ಅಂಶಗಳನ್ನ ನೋಡಿದ್ರೆ..

* ಕ್ಯಾಮರಾ ಬೆಳಕಲ್ಲಿ ಮೋನೋಕ್ರೋಮ್ ವಿಷುಯಲ್ಸ್, ಬೆಂಕಿ ಇದ್ದಾಗ ಮಾತ್ರ ಕಲರ್ರು. ಯಾಕೆ? ಹೆಂಗೆ?

* ಕೆಲವು ವಿಯೆಫೆಕ್ಸ್ ಗಳು ಕಥೆಗೆ,ಭಯಕ್ಕೆ ಪೂರಕವಾಗಿಲ್ಲ ಅನ್ನಿಸುತ್ತದೆ.

* "ರಮೇಶಾ.." ಅಂತ ಕೂಗುವ ಹೆಣ್ಣಿನ ಧ್ವನಿ ಆರ್ಟಿಫಿಷಿಯಲ್ ಅನ್ನಿಸುತ್ತದೆ.

ಉಳಿದಿದ್ದು ನಗಣ್ಯ. ಬಿಟ್ಟಾಕಿ.

ಈಗೀಗ ಕೈಯ್ಯಲ್ಲೊಂದು 5D ಇದ್ಬುಟ್ರೆ ಸಾಕು ಹೋ.. ಹೋ.. ಅಂದು ಪಿಚ್ಚರ್ ಮಾಡಿ ಫುಲ್ ಫ್ರೇಮಲ್ಲಿ ತೋರಿಸುವ ಅವಸರ,ತಾಕತ್ತು ಹುಡುಗರಿಗಿದೆ. ಆದರೆ ಸಿನಿಮಾ ಮಾಡಿ ಅಮೇಲೆ ಗರ್ಭದಿಂದ ಆಚೆ ತರುವಾಗ ಸಿಗುವ ಹೆರಿಗೆ ನೋವಿಗೆ ಹಲವು ಮಕ್ಕಳು ತೀರಿಹೋಗ್ತವೆ, ಕೆಲವು.. ನಮ್ಗೆ 'ಸುಚಿತ್ರ' ಸಾಕು ಅಂದು ಇದ್ದಿದ್ರಲ್ಲೇ ನಾರ್ಮಲ್ ಡೆಲಿವರಿ ಅಂತ ಖುಷಿಪಡ್ತವೆ. ಕೆಲವು ಇಂಥ ಭಂಡ ಧೈರ್ಯ ಮಾಡಿ ಸಿಜೇರಿಯನ್ನಾದ್ರೂ ಪರ್ವಾಗಿಲ್ಲ ಅಂತ ಥಿಯೇಟರಿನಲ್ಲೇ ಬಿಡುಗಡೆಗೊಳ್ಳುತ್ತವೆ. ಮಗುವಿನಲ್ಲಿ ನಿಜವಾದ ಟ್ಯಾಲೆಂಟ್ ಇದ್ದಲ್ಲಿ ಪ್ರೇಕ್ಷಕನೇ ಫುಡ್ಡು,ಬ್ರೆಡ್ಡು,ಬೆಡ್ಡು ಕೊಟ್ಟು ಸಾಕ್ತಾನೆ. ಇಲ್ಲದಿದ್ರೆ ಸಾರಾಸಗಟಾಗಿ ಸಾಗಿಹಾಕ್ತಾನೆ. ಈ ಚಿತ್ರಕ್ಕೆ ಅಂಥದ್ದೊಂದು ಟ್ಯಾಲೆಂಟ್ ಇದೆ,ಸೆಳೆತ ಇದೆ. ಕ್ಯಾಮರಾ ಸಿಕ್ತು ಅಂತ ಸುಮ್ಸುಮ್ನೇ ಎಂತೆಂತೋ ತೋರಿಸೋಕೆ ಹೋಗಿಲ್ಲ ಇವರು. ಒಂದು ಗಟ್ಟಿ ಟೇಬಲ್ ವರ್ಕು ಹಾಗೂ ಮೇಕಿಂಗಿನ ಶ್ರಮವನ್ನ ಸ್ಪಷ್ಟವಾಗಿ ಗೊತ್ತಾಗಿಸುತ್ತದೆ ಸಿನಿಮಾ. ಒಮ್ಮೆ ಎಲ್ಲಾ 'ರಿಯಲ್' ಆಸಕ್ತರೂ ಸಿನಿಮಾ ನೋಡಿ. ಮತ್ತು ಪಬ್ಲಿಕ್ಕಿಗೆ ರೀಚ್ ಆಗುವಲ್ಲಿ ಸ್ವಲ್ಪ ಎಡವಿರುವ ಈ ಸಿನಿಮಾಗೆ ಒಂದಿಷ್ಟು 'ಮೌತ್ ಪಬ್ಲಿಸಿಟಿ' ಜಾಸ್ತಿಯೇ ಬೇಕಿದೆ. ಹೋಗಿ,ಅಲ್ಲಲ್ಲಿ ಎದೆಬಡಿತ ಏರಿಸಿಕೊಳ್ಳಿ, ವಾಪಾಸ್ ಬಂದು ಇನ್ನೊಂದಿಷ್ಟು ಜನಕ್ಕೆ ಹೇಳಿ. ಇನ್ನು 6-5=2 ಅಂದ್ರೆ ಏನು ಅನ್ನೋದು 'ಅವರವರ ಭಾವಕ್ಕೆ..' !

ಕೊನೆಯದಾಗಿ : ಟಾಕೀಸಿನಲ್ಲಿನ ಒಂದು ಸಿಚುಯೇಷನ್ ಮಜಾ ಕೊಡ್ತು. ನಾವು ಕಾನ್ಸಂಟ್ರೇಷನ್ ಕೊಟ್ಟು ಒಂದೇ ಜಾಗದಲ್ಲಿ ನೋಡ್ತಿದ್ದಾಗ 'ಫಟ್' ಅಂತ ಇದ್ದಕ್ಕಿದ್ದಂಗೆ ಏನಾದ್ರೂ ಬಂದ್ರೆ ಬೆಚ್ಚಿಬೀಳ್ತೀವಲ್ಲ ಅದೇ ಥರ ಈ ಸಿನಿಮಾದಲ್ಲೂ ದೆವ್ವ ಬರುವ ಮೊದಲಿನ ಸೈಲೆನ್ಸಿನಲ್ಲಿ ನಮ್ಮ ಹಿಂದಿನ ಸಾಲಿನ ಹುಡುಗರು 'ಹೋ ಬಂತು.. ಬಂತು ಈಗ' ಅಂತ ಏನೇನೋ ಕಾಮಿಡಿ ಮಾಡ್ತಾ ತಮ್ಮ ಹೆದರಿಕೆಯನ್ನು ಮುಚ್ಚಿಟ್ಕೋಳೋಕೆ ಕೂಗಾಡಿಬಿಡೋರು..! ಅಂದ್ರೂನೂ ಅಮೇಲೂ ಅವ್ರೆಲ್ಲ ಹೆದ್ರುಕೊಂಡ್ ಮುದ್ರುಕೊಂಡಿದ್ದು ಸುಳ್ಳಲ್ಲ..!

 

 


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು