ದೃಶ್ಯಕ್ಕೊಂದು ನುಡಿಗಟ್ಟು

ಲೂಸಿಯಾ – ಚಿತ್ರರಂಗದ ನಿಲುವಿನೆಡೆಗೊಂದು ಪಕ್ಷಿ ನೋಟ

Lucia Film Posterಲೂಸಿಯಾ ಚಿತ್ರರಂಗ ಸಾಗಬಲ್ಲ ಹೊಸದೊಂದು ದಾರಿಯೆಡೆಗೆ ಬಾಗಿಲು ತೆರೆಯುತ್ತಿದೆ. ಯಶಸ್ವಿಯಾದರೆ ಚಿತ್ರರಂಗದ ದಿಕ್ಕನ್ನೇ ಬದಲಿಸಬಲ್ಲ ಶಕ್ತಿಯುಳ್ಳ ದಾರಿಯದು. ಆದರೆ ಇತಿಹಾಸದ ಪ್ರಕಾರ ಯಾವುದೇ ಬದಲಾವಣೆಗಳಿಗೆ ಒಗ್ಗಿಕೊಳ್ಳಲು ಪ್ರಾರಂಭದಲ್ಲಿ ಬಹಳಷ್ಟು ಅಡೆತಡೆಗಳಿರುತ್ತದೆ. ಅಂಥ ಬದಲಾವಣೆಗೆ ಮನಸ್ಥಿತಿಗಳು ಸಜ್ಜಾಗಿರುವುದೂ ಬಹಳ ಮುಖ್ಯ. ಚಿತ್ರರಂಗದಲ್ಲಿ ಲೂಸಿಯಾ ನೀಡುತ್ತಿರುವ ಈ ಹೊಸದಿಕ್ಕಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತಿದೆ ಎಂಬುದು ಮುಂದಿನ ಕಾಲಘಟ್ಟದಲ್ಲಿ ಬಹುಮುಖ್ಯವಾದ ರೆಕಾರ್ಡ್ ಆಗಿರಬಲ್ಲುದು. ಅದಕ್ಕೂ ಮೊದಲು ಚಿತ್ರರಂಗದಲ್ಲಿ ಯಾರಿಗೆ ಈ ಮಾಡಲ್ ಉಪಯುಕ್ತವಾಗಲ್ಲುದು ಮತ್ತು ಯಾಕೆ ಎಂಬ ಅರಿವೂ ಮುಖ್ಯ.

ನಂಬಿಕೆ ಎಂಬ ಅಡಿಪಾಯ

ಬಹಳಷ್ಟು ಸಿನಿಪ್ರಿಯರು ಲೂಸಿಯಾ ಚಿತ್ರವನ್ನು ಒಂದು ಸಿನಿಮಾ ಎನ್ನುವುದಕ್ಕಿಂತಲೂ ಸಹಕಾರೀ ತತ್ವದಡಿ ನಿರ್ಮಿತವಾದ ಒಂದು ಮಾಡೆಲ್ ಎಂಬುವುದಾಗಿಯೇ ನೋಡುತ್ತಿದ್ದಾರೆ, ಯಾಕೆಂದರೆ ಚಿತ್ರ ಇನ್ನೂ ಕಣ್ಣೆದುರಿಗೆ ಬಂದಿಲ್ಲ. ಆದರೆ ಮಾಡೆಲ್ ತುಂಬು ಪಾರದರ್ಶಕವಾಗಿ ಕಣ್ಣೆದುರೇ ಇದೆ. ಒಂದು ಚಿತ್ರರಂಗದಲ್ಲಿ ಅದು ಮೂಡಿಸಬಲ್ಲ ಬದಲಾವಣೆಗಳ ಸಾಧ್ಯತೆ ಊಹೆನಿಲುಕಿಕೆ ಹತ್ತಿರವಾಗಿಯೇ ಇದೆ. ಸಾಮಾಜಿಕ ತಾಣದ ಮೂಲಕ ಕಮ್ಯೂನಿಕೇಶನ್ ಎಂಬುವುದು ಚಿಟಿಕೆ ಹೊಡೆಯುವಷ್ಟೇ (ಅಥವಾ ತೋರುಬೆರಳ ಶಾಖದಷ್ಟೇ) ಸುಲಭವಾಗಿರುವಾಗ ಈ ಮಾಡೆಲ್ ಸರಿಯಾಗಿ ಬಳಕೆಯಾದಲ್ಲಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಬಲ್ಲುದು ಎಂಬುದು ಸರ್ವವಿದಿತ.

ಈ ಮೊದಲೇ ಕೆಲವು ಚಲನಚಿತ್ರಗಳು ಈ ರೀತಿ ಸಹಕಾರಿ ತತ್ವದಲ್ಲಿ ಬಂದಿದ್ದರೂ ಲೂಸಿಯಾ ಅದಕ್ಕೊಂದು ಬ್ರಾಂಡ್ ತರ ರೂಪುಗೊಂಡಿದೆ. ಪಾರದರ್ಶಕತೆ ಮತ್ತು ಕ್ಲಾರಿಟಿ ಆ ಮಾಡೆಲ್ ಗೆ ಲೂಸಿಯಾ ಕೊಟ್ಟಿರುವ ಹೊಸ ಬಣ್ಣ. ಹೊಸತು ಎಂಬುದು ಎಂದಿಗೂ ಸುಲಭವಾಗಿ ಸ್ವೀಕೃತವಾಗುವಂಥದ್ದಲ್ಲ. ಲೂಸಿಯಾ ಚಿತ್ರಕ್ಕೂ ಪಟ್ಟಿರುವ ಪರಿಪಾಟಲುಗಳನ್ನು ನಿರ್ದೇಶಕ ಪವನ್ ಕುಮಾರ್ ಅವರ ಬ್ಲಾಗ್ ಬರಹಗಳಲ್ಲಿ ಉಲ್ಲೇಖಿಸಿದ್ದಾರೆ.

ನಂಬಿಕೆ ಎನ್ನುವುದು ಈ ಮಾಡೆಲ್ ನ ಅಡಿಪಾಯ. ಅಂಥ ನಂಬಿಕೆ ರೂಪುಗೊಳ್ಳಲು ಸಮಯ ಬೇಕು. ಪವನ್ ಕುಮಾರ್ ತಮ್ಮ ಪ್ರತಿಭೆಯನ್ನು ಈ ಹಿಂದೆಯೇ ಬಹಳಷ್ಟು ಪ್ರೂವ್ ಮಾಡಿಕೊಂಡಿರುವುದರಿಂದ ಲೂಸಿಯಾ ಪಟ್ಟ ಕಷ್ಟಗಳು ಅತೀವ ಅನ್ನಿಸುವಂಥದ್ದಲ್ಲ. ಆದರೆ ಈ ಮಾಡೆಲ್ ಒಬ್ಬ ಹೊಸ ನಿರ್ದೇಶಕನಿಗೆ ಎಷ್ಟು ಉಪಯುಕ್ತವಾಗಬಲ್ಲುದು ಎಂಬುದು ಕೆಲವರ ಪ್ರಶ್ನೆ. ಹೊಸ ನಾಯಕ ನಾಯಕಿಯಿದ್ದ, ಹೊಸ ನಿರ್ದೇಶಕನಿದ್ದ ಗೊಂಬೆಗಳ ಲವ್ ನಂಥ ಚಿತ್ರಕ್ಕೆ ಈ ಮಾಡೆಲ್ ಸಹಾಯ ಮಾಡಬಲ್ಲುದಾ ಎಂಬುದು ಇನ್ನಷ್ಟು ಸಮಯ ಕಳೆದಂತೆ, ಈ ಮಾಡೆಲ್ ಮೇಲೆ ಇನ್ನಷ್ಟು ಪ್ರಯೋಗಗಳಾದ ಮೇಲೆ ಸ್ಪಷ್ಟವಾಗುವ ಅಂಶ.

ಚಿತ್ರರಂಗದ ನಿಲುವು

ಈ ಮಾಡೆಲ್ ಕುರಿತು, ಲೂಸಿಯಾ ಚಿತ್ರದ ಕುರಿತು ಚಿತ್ರರಂಗದ, ಚಿತ್ರರಂಗದವರ ನಿಲುವು ಏನು ಎಂಬುದು ಸ್ಪಷ್ಟವಾಗಿ ತಿಳಿಯುವಂಥದ್ದಲ್ಲ. ಮೇಲ್ಮೇಲಕ್ಕೆ ಮೆಚ್ಚುವ ಮಾತುಗಳಿದ್ದರು ಮನದಾಳದಲ್ಲಿರುವ ಮಚ್ಚುಗಳ ಬಗ್ಗೆ ಅಷ್ಟಾಗಿ ಗೊತ್ತಾಗುವುದಿಲ್ಲ. ನಟ ರಕ್ಷಿತ್ ಶೆಟ್ಟಿಯಂತೆ ಒಂದಿಷ್ಟು ಬೆರಳೆಣಿಕೆಯಷ್ಟು ಚಿತ್ರರಂಗದ ಮಂದಿ ಬಿಟ್ಟರೆ ಈ ಹೊಸತನಕ್ಕೆ ಚಿತ್ರರಂಗದವರ ಕೊಡುಗೆಯೂ ಅಷ್ಟಿಲ್ಲ. ಬಹುಶಃ ಮುಂದಿನ ಬದಲಾವಣೆಗಳ ಬಳಿಕ ಅವರು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ ಅಂದುಕೊಳ್ಳಬಹುದು.

ಈ ಮಾಡೆಲ್ ನ ಗೆಲುವನ್ನು ಬಹಳಷ್ಟು ನಿರ್ದೇಶಕರು ಎದುರುನೋಡುತ್ತಿದ್ದಾರೆ. ಸ್ವಾತಂತ್ರ್ಯ ಸಿಗಲಿದೆ ಎಂಬುದು ಅವರ ಅನಿಸಿಕೆ. ನಿರ್ಮಾಪಕರ ಮಧ್ಯಸ್ತಿಕೆಯಿರದೇ, ಕಮರ್ಷಿಯಲ್ ಗೆ ಮಾತ್ರದ ಮಹತ್ವವಿರದೇ ಒಂದು ಸಿನಿಮಾಗೆ ಪರಿಪೂರ್ಣ ಗೆಲುವು ನೀಡಬಹುದು ಎಂಬುದು ಆ ಅನಿಸಿಕೆ ಹಿಂದಿನ ಸಾರ. ಅದಕ್ಕೆ ಅಂಥದ್ದೊಂದು ನಂಬಿಕೆಯ ಅಡಿಪಾಯ ಕೂಡ ಅಗತ್ಯವಿದೆ ಅನ್ನುವುದರ ಅರಿವೂ ಇದೆ ಅವರಲ್ಲಿ.

ಇನ್ನೊಂದೆಡೆ, “ಇದು ಶೇರ್ ಮಾರ್ಕೆಟ್ ನಂತೆ ಸಾರ್, ಗೆದ್ದರೆ ಎಲ್ಲರೂ ಅದರ ಹಿಂದೆ ಹೋಗುತ್ತಾರೆ. ಲೂಸಿಯಾ ಕೂಡ ಚೆನ್ನಾಗಿದೆ ಖಂಡಿತಾ ಗೆಲ್ಲಬಹುದು. ಆದರೆ ಈ ಮಾಡಲ್ ನಲ್ಲಿ ಮುಂದೆ ಒಂದು ಚಿತ್ರ ತೋಪಾಗುತ್ತಲ್ವಾ, ಒಂದು ನಂಬಿಕೆಯನ್ನು ಕಳಕೊಳ್ಳುತ್ತಲ್ವಾ ಆಗ ನೋಡಿ, ಎಷ್ಟು ಕಷ್ಟ ಈ ಮಾಡಲ್ ಗೆ ಸರ್ವೈವಲ್ ಆಗಲು” ಎಂಬ ಪರದೆ ಹಿಂದಿನ ಮಾತುಗಳಿಗೂ ಲೆಕ್ಕವಿಲ್ಲ.

ಪಾಸಿಟಿವ್ ಆಗಿಯೋ ಅಥವಾ ನೆಗೆಟಿವ್ ಆಗಿಯೋ, ಎರಡೂ ಅಲ್ಲದೇ ಅಥವ ಎರಡೂ ಇದ್ದೂ, ಚಿತ್ರರಂಗ ಲೂಸಿಯಾ ಬಿಡುಗಡೆವರೆಗೆ ಅಥವಾ ಬಿಡುಗಡೆಯ ಮುಂದಿನ ಸೋಮವಾರಕ್ಕಾಗಿ ಎದುರು ನೋಡುತ್ತಿದೆ. ಅಲ್ಲಿಯವರೆಗೆ ಅದು ಒಂದು ತಟಸ್ಥ ನಿಲುವು ಇಟ್ಟಿದೆ ಎಂಬುದೂ ಅರಿವಿಗೆ ಬಾರದ ವಿಷಯವಲ್ಲ. ಇದನ್ನು ಹೊಸದೊಂದು ಟ್ರೆಂಡ್ ಶುರುವಾಗುವಾಗ ಹೇಗೆ ಅದು ಹೊರಬರುವವರೆಗೂ ಮೌನವಾಗಿದ್ದು ಅದು ಯಶಸ್ವಿಯಾಗುತ್ತಿದ್ದಂತೆ ಅದೇ ಟ್ರೆಂಡನ್ನು ಬೆನ್ನೆತ್ತಿ ಹೋಗುವ ಕೆಲ ನಿರ್ಮಾಪಕರ ನಿಲುವಿಗೆ ಹೋಲಿಸಬಹುದು.

ಲೂಸಿಯಾ ಚಿತ್ರ ಆಗಸ್ಟ್ ನಲ್ಲಿ ಬಿಡುಗಡೆಯಾಗುತ್ತಿದೆ. ಆಗ ಚಿತ್ರರಂಗ ಕೂಡ ಮೌನದಿಂದ ಬಿಡುಗಡೆ ಪಡೆದುಕೊಳ್ಳಲಿದೆ. ಆಗಸ್ಟ್, ಬಿಡುಗಡೆ, ಲೂಸಿಯಾ, ಚಿತ್ರರಂಗ, ಸ್ವಾತಂತ್ರ್ಯ ಈ ಎಲ್ಲಾ ಪದಗಳು ಸೂಕ್ಷ್ಮವಾಗಿ ಒಂದಕ್ಕೊಂದು ತಳುಕಿಹಾಕಿಕೊಂಡಿದ್ದು ಲೂಸಿಯಾ ಬಿಡುಗಡೆಯಾಗುತ್ತಿದ್ದಂತೆ ಎಲ್ಲವೂ ಸ್ಪಷ್ಟ ಮತ್ತು ಶುಭ್ರವಾಗಲಿದೆ ಅನಿಸುತ್ತಿದೆ.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು