ದೃಶ್ಯಕ್ಕೊಂದು ನುಡಿಗಟ್ಟು

ಗಾಂಧಿನಗರದ ಹೊಸ ಕವಲು ವಿಷ್ಣುವರ್ಧನ

vishnuvardhana kannada movie review, sudeep kannada actor, bhavana, dwarakeesh, samvaada.com, kannada actress, kannada film news, ravi arehalli, ಗಾಂಧಿನಗರದ, ವಿಷ್ಣುವರ್ಧನ, ವಿಷ್ಣುವರ್ಧನ ಚಿತ್ರ ವಿಮರ್ಶೆ, ಕನ್ನಡ ಚಿತ್ರ ವಿಮರ್ಶೆಸುದೀಪ್ ಚಿತ್ರಗಳ ಆಯ್ಕೆಯಲ್ಲಿ ಎಚ್ಚರಗೊಂಡಿದ್ದಾರೆ. ಹಾಗಂದುಕೊಳ್ಳಲು ಅವರ ಇತ್ತೀಚಿನ ಎರಡು ಚಿತ್ರಗಳು ಕಾರಣ. ತಮಿಳಿನ ಸಿಂಘಂ ರಿಮೇಕ್ ಆದ ಕೆಂಪೇಗೌಡ ಚಿತ್ರ ತನ್ನ ವೇಗ ಮತ್ತು ಸುದೀಪರ ಬಿರುಸಿನ ನಟನೆಯಿಂದಾಗಿ ಗೆದ್ದಿತ್ತು. ಈಗ ಬಿಡುಗಡೆಯಾಗಿರುವ ವಿಷ್ಣುವರ್ಧನ ಮೇಲ್ನೋಟಕ್ಕೆ ತನ್ನ ಶೀರ್ಷಿಕೆಯ ಕಾರಣದಿಂದಲೇ ಸುದ್ಧಿಯಲ್ಲಿದ್ದು ಗೆದ್ದಂತಹ ಚಿತ್ರ.

ವಿಷ್ಣುವರ್ಧನ ಎಂಬ ಹೆಸರನ್ನು ಆಯ್ಕೆ ಮಾಡಿಕೊಳ್ಳುವಾಗ ದ್ವಾರಕೀಶ್‌ಗೆ ಇದ್ದ ತೊಡಕು ಭಾರತಿಯವರ ಅಸಮಾಧಾನವೊಂದೇ. ಭಾರತಿಯವರು ಆ ಹೆಸರು ತನ್ನದು ಎಂಬಂತೆ ಹಟ ಹಿಡಿದ ನಂತರ ದ್ವಾರಕೀಶ್ ಅದನ್ನೊಂದು ಸಾರ್ವಜನಿಕ ಹಿತಾಸಕ್ತಿಯ ವಿಷಯವೆಂಬಂತೆ ಎಲ್ಲ ವೇದಿಕೆಗಳಿಗೂ ಕೊಂಡೊಯ್ದು ಕೊನೆಗೆ ವಾಣಿಜ್ಯ ಮಂಡಳಿಯಯಲ್ಲಿ ವ್ಯವಹಾರ ಕುದುರಿಸುವವರೆಗೂ ಚಿತ್ರ ಸುದ್ಧಿಯಲ್ಲಿತ್ತು.

ಚಿತ್ರ ಬಿಡುಗಡೆಯಾಗುವಾಗ ಒಂದು ನಿರ್ವಾತ ಸೃಷ್ಟಿಯಾಗಿತ್ತು. ದೊಡ್ಡ ಹೀರೋಗಳ, ಪ್ರಸಿದ್ಧ ನಿರ್ದೇಶಕರ ಸಿನಿಮಾಗಳು ಬಿಡುಗಡೆ ಮುಂಚಿನ ವ್ಯಾಪಾರದಲ್ಲಿ ಹಣ ಮಾಡಿದರೂ ಪ್ರೇಕ್ಷಕರ ಮುಂದೆ ಸೋತಿದ್ದವು. ಜೋಗಯ್ಯ, ಪರಮಾತ್ಮ, ಜರಾಸಂಧ ಹೀಗೆ ಒಂದು ಸಾಲೇ ಇತ್ತು. ಚಿತ್ರವೊಂದರ ಬಿಡುಗಡೆಗೆ ಇಂಥಹ ಹದಗೊಂಡ ಸನ್ನಿವೇಷ ಸೃಷ್ಟಿಯಾಗೋದು ಅಪರೂಪ. ಗಣೇಶರ ‘ಶೈಲೂ’ ಜೊತೆಯಲ್ಲಿಯೇ ಬಿಡುಗಡೆಯಾಯಿತಾದರೂ ಎರಡೂ ಸಿನಿಮಾಗಳ ಚೌಕಟ್ಟು ಬೇರೆಯೇ ಇದ್ದ ಕಾರಣ ಒಂದಕ್ಕೊಂದು ಸ್ಪರ್ಧಿಗಳಾಗಲಿಲ್ಲ.

ವಾಣಿಜ್ಯ ದೃಷ್ಟಿಯ ಚಿತ್ರವೊಂದರ ಯಶಸ್ಸಿಗೆ ಇಷ್ಟೆ ಸಾಕಾಗೋಲ್ಲ. ಚಿತ್ರ ಒಳಗೊಂಡಿರುವ ಸರಕು, ಮಾರುಕಟ್ಟೆ ಮತ್ತು ಜನರ ನಡುವೆ ಸ್ವೀಕೃತಗೊಳ್ಳುವಂತಹ ಜನಪ್ರಿಯ ರುಚಿಯದ್ದಾಗಿರಬೇಕು. ಜನಪ್ರಿಯ ರುಚಿಯೊಂದನ್ನು ಹೊಸ ತಟ್ಟೆಯಲ್ಲಿಟ್ಟು ಕೊಟ್ಟರೆ ಆಗುವಂತಹ ಪರಿಣಾಮ ವಿಷ್ಣುವರ್ಧನ ಚಿತ್ರದ ಸಂದರ್ಭದಲ್ಲೂ ನಡೆದಿದೆ.

ವಿಷ್ಣುವರ್ಧನ ಸಿನಿಮಾದಲ್ಲೂ ಯಾವತ್ತಿನ ಸಿನಿಮಾ ಮಾದರಿಯಲ್ಲಿ ಖಳನಾಯಕರು, ನಾಯಕ, ನಾಯಕಿ, ಹಾಸ್ಯ ಪಾತ್ರಗಳು ಎಲ್ಲ ಇವೆ. ನಾಯಕ ನಾಯಕಿ ಎಂದಿನದೇ ತಂತ್ರದ ಅಳವಡಿಕೆಯೊಡನೆ ಪ್ರೀತಿಯಲ್ಲೂ ಬೀಳುತ್ತಾರೆ. ಖಳರು ತಮ್ಮದೆ ಕಾರಣಗಳಿಗೆ ಅಥವ ಗುಣಸ್ವಭಾವಗಳಿಗೆ ಅನುಗುಣವಾಗಿ ವರ್ತಿಸಿ ಪ್ರೇಕ್ಷಕರಿಗೆ ಕೆಟ್ಟವರಾಗುತ್ತಾರೆ. ಪ್ರತೀಕಾರ, ಪ್ರೀತಿಯ ಪಡೆಯುವಿಕೆ ಇತ್ಯಾದಿ ಕಾರಣಗಳಿಗಾಗಿ ಕೊನೆಯಲ್ಲಿ ನಾಯಕ ಗೆಲ್ಲೋದು, ಖಳರ ಅಂತ್ಯವಾಗೋದು ನಡೆಯುತ್ತದೆ. ಇದು ಭಾರತೀಯ ಸಿನಿಮಾಗಳ ಜನಪ್ರಿಯ ಮಾದರಿಯೂ ಹೌದು.

ವಿಷ್ಣುವರ್ಧನ ಸಿನಿಮಾ ವಿಶಿಷ್ಟವಾಗೋದು ಇಂಥ ಕಾರಣಗಳಿಂದಾಗಿ ಅಲ್ಲ. ಇಲ್ಲಿ ನಾಯಕ ಸ್ಥಾಪಿತ ನಾಯಕ ಗುಣಗಳನ್ನು ಆರೋಪಿಸಲಾದ ಸಿದ್ಧ ಮಾದರಿಯಲ್ಲ. ಆತ ತೀರಾ ಸಾಮಾನ್ಯ ಇಸ್ತ್ರಿಯವನ ಮಗ. ಅದನ್ನು ಹೇಳಿಕೊಳ್ಳಲು ನಾಚುವ, ತನ್ನ ಸ್ಥಿತಿಯ ಬಗೆಗೆ ಅಪಾರವಾದ ಕೀಳರಿಮೆ ಇರುವ ವ್ಯಕ್ತಿ. ಅನಿರೀಕ್ಷಿತವಾಗಿ ಸಿಕ್ಕಿದ ಅಪಾರ ಹಣ ಮತ್ತು ಅದನ್ನು ಉಳಿಸಿಕೊಳ್ಳಲು ಆತ ಮಾಡುವ ತಂತ್ರಗಳು ಅನುಭವಿಸಿದ ಕೀಳರಿಮೆಯನ್ನು ಮೀರುವ ಪ್ರಯತ್ನಗಳೇ ಆಗುತ್ತವೆ. ಹತ್ತಾರು ಕೊಲೆ, ಅತ್ಯಾಚಾರ ಇತ್ಯಾದಿಗಳನ್ನು ನಿರ್ವಹಿಸಿದನೆಂದು ಹೇಳಲಾಗುವ ಖಳನಾಯಕ ತನ್ನ ಗುಣ ಲಕ್ಷಣಗಳ ಸಮರ್ಥ ತೋರ್ಪಡಿಯನ್ನು ಮರೆತಂತೆ ಕಾಣುತ್ತಾ ಮೂರರಲ್ಲಿ ಮತ್ತೊಬ್ಬ ಎಂಬಂತೆ ಪೇಲವವಾಗುತ್ತಾನೆ. ತನ್ನ ಅವಗುಣ ಪ್ರಕಟಣೆಗಾಗಿ ಪ್ರೀತಿಸಿದ ಗೆಳತಿಯನ್ನು ಪೋಲೀಸ್ ಅಧಿಕಾರಿಗೆ ಒಪ್ಪಿಸುವ ಸನ್ನಿವೇಷವೂ ಈ ನಿಟ್ಟಿನಲ್ಲಿ ಸಹಕರಿಸದೆ ಖಳನಾಯಕನ ಬಗೆಗೆ ಪ್ರೇಕ್ಷಕರ ಕನಿಕರವೂ ಮೂಡುತ್ತದೆ.

ಸಿದ್ಧ ಮಾದರಿಗೆ ಹೊಂದದ ಕೆಲವು ಗುಣಗಳನ್ನು ವಿಶೇಷವಾಗಿ ಅಳವಡಿಸಿಕೊಳ್ಳಲಾಗಿದೆಯಾದರೂ ಅವು ಯಾವೊದೂ ನಾಯಕನನ್ನು ಸರ್ವ ಸಮರ್ಥನನ್ನಾಗಿಸುವ ಶ್ರಮಕ್ಕೆ ಬಿದ್ದಿಲ್ಲ. ಶ್ರೀಮಂತೆಯಾದ ನಾಯಕಿ, ನಾಯಕನ ನೇರ ಪ್ರಭಾವ ಏನೇನೂ ಇರದ ಆಕಸ್ಮಿಕ ಸನ್ನಿವೇಷವೊಂದರ ಆಧಾರದಲ್ಲಿಯೇ ನಾಯಕನನ್ನು ಒಪ್ಪಿ ನಮ್ಮನ್ನು ನಿರಾಸೆಗೊಳಿಸುತ್ತಾಳೆ. ಹೀಗೆ ನಾಯಕನ ಸುತ್ತ ಇರಬೇಕಾಗಿದ್ದ ವಿಶೇಷ ಗುಣಗಳನ್ನೆಲ್ಲಾ ಇಲ್ಲವಾಗಿಸುತ್ತಾ ಹೋಗುವ ಬಗೆಯಲ್ಲೇ ಚಿತ್ರ ಸಮರ್ಥವಾಗುತ್ತದೆ. ನಾಯಕನ ಸಮಯ ಪ್ರಜ್ಞೆ ಮತ್ತು ತಂತ್ರಗಳೂ ಕೂಡ ನಾಯಕನಿಗೆ ಆರೋಪಿಸಲಾಗುವ ವಿಶೇಷ ಗುಣಗಳೇ ಆಗುವುದಾದರೆ ಚಿತ್ರದ ಮೇಲ್ಕಾಣಿಸಿದ ಸಾಮರ್ಥ್ಯ ಇಲ್ಲವಾಗುವ ಕ್ರಮವೂ ಇದೆ. ಅಂತಿಮ ದೃಶ್ಯದಲ್ಲಿ ನಾಯಕನ ಅಲ್ಪ ಪ್ರಯತ್ನ ಮತ್ತು ತಂತ್ರಕ್ಕೆ ಖಳನಾಯಕರು ಸಹಕರಿಸಿ ಪರಸ್ಪರ ಕೊಂದುಕೊಳ್ಳುವ ದೃಶ್ಯದೊಂದಿಗೆ ಚಿತ್ರ ಅಂತ್ಯವಾಗುತ್ತದೆ.

ನಾಯಕನೇ ಖಳನಾಯಕನನ್ನು ಅಂತ್ಯಗೊಳಿಸಬೇಕೆಂಬ ಸೂತ್ರ ಇಲ್ಲವಾಗುವುದರೊಡನೆ ಭಾರತೀಯ ಚಿತ್ರ ಜಗತ್ತಿನ ಒಂದು ನಂಬಿಕೆ ಮುರಿದು ಬಿದ್ದು ಚಿತ್ರ ಇನ್ನಷ್ಟು ವಿಶೇಷವಾಗುತ್ತದೆ. ಸದಾ ನಾಯಕನೊಂದಿಗೆ ಗುರುತಿಸಿಕೊಳ್ಳುವ ಪ್ರೇಕ್ಷಕ ನಾಯಕ ಕೊಲೆಗಾರನಾಗಲಿಲ್ಲವಲ್ಲ ಎಂಬ ಸಮಾಧಾನದಿಂದ ಚಿತ್ರದ ಬಗೆಗೆ ಅಭಿಮಾನ ತಾಳುತ್ತಾನೆ. ಮಾನವ ಸಹಜ ಬಲಹೀನತೆಗಳನ್ನು ಹಾಸ್ಯವೆನ್ನಬಹುದಾದ ರೀತಿ ನಮ್ಮ ಚಿತ್ರಗಳಿಗೆ ಒಗ್ಗಿ ಹೋಗಿರುವುದರಿಂದ ಇಲ್ಲೂ ಅಂಥದ್ದೆ ಹಾಸ್ಯವನ್ನು ತೋರ್ಪಡಿಸುವ ಒಂದಷ್ಟು ಸಂಭಾಷಣೆ-ಸನ್ನಿವೇಷಗಳು, ಪೋಷಕ ಪಾತ್ರಗಳು,  ಮುಖ್ಯ ಪಾತ್ರಗಳ ನಡುವೆ ಬಂದು ಹೋಗುತ್ತವೆ. ಕೆಲವು ಪಾತ್ರಗಳು ಮುಖ್ಯ ಪಾತ್ರಗಳ ಅಬ್ಬರದಲ್ಲಿ ಪೋಷಣೆಗೊಳಗಾಗದೆ ಮರೆಯಾಗುತ್ತವೆ.

ವಿಷ್ಣುವರ್ಧನ ಚಿತ್ರ ಕೊರಿಯನ್ ಚಿತ್ರವೊಂದರ ನಕಲು ಎಂದು ಹೇಳುವುದು ಗಾಂಧಿನಗರದ ಚಿತ್ರ ನಿರ್ದೇಶಕನಿಗೆ ಕೊಡಬಹುದಾದ ಪ್ರಶಂಸೆಯಾಗುತ್ತದೆ. ಚಿತ್ರದ ಮೇಲೆ ತೆಲುಗು, ತಮಿಳು ಸಿನಿಮಾಗಳ ನೆರಳಿದೆ ಎನ್ನುವುದು ಜನಪ್ರಿಯ ಮಾದರಿಯ ಬಗೆಗೆ ನಮಗಿರುವ ನಂಬಿಕೆ ಮತ್ತು ಮೆಚ್ಚುಗೆಯನ್ನು ಪುನರುಚ್ಛರಿಸುವ ಹಳೆಯ ಕ್ರಮವೇ ಆಗಿದೆ.

26-12-2011

samvaada.com fan page on facebook




ಇಲ್ಲಿವರೆಗಿನ ಅಭಿಪ್ರಾಯಗಳು

Jinde Suryabhanu
2012-01-01 22:10:24

Vishnuvardhana.... Dwarakeesh rawaru nirmisiruva awara apthamitrana hesarina cinema idhu.. obba samanya dhobhi ya jeewanadhalli achanakkagi vidhi emba suspense matter. ata aduthadhe. adhara shuruwaguwudhu ondu mobile phon nindha... idhanna nirdheshakaru suspensagidabekagithu... adhu bittu cinema poorthi iro suspensanna... cinemadha modhale heli... prekhakarannu modhale churuku golisibittu chitrawannu gandhiclass prekhakarindha win madisi... bolcony class janarindha solisidhare.... Dwarakeeeshrawaru... thamma hindhini chitragalige kottantha shradhe e-cinemadhalli kottillaveno endhenisuthadhe... ondu vishayawannu helalebeku karunada kullana meley adhenendhare.... chitrakathe kelidhastu hanawannu suridhidhare.. karnatakadha killa Dwarakeeshrawaru.. Dhanyawadhagalu Jinde Suryabhanu


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು